ಕೋಮಲ್ ಕುಮಾರ್ ಅಭಿನಯದ ನಾಲ್ಕು ಚಿತ್ರಗಳು ವಿವಿಧ ಹಂತಗಳಲ್ಲಿವೆ. ಈ ಮಧ್ಯೆ, ಅವರು ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದು, ಆ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ. ಕೋಮಲ್ ಅಭಿನಯದ ಹೊಸ ಚಿತ್ರಕ್ಕೆ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಎಂಬ ಹೆಸರನ್ನು ಇಡಲಾಗಿದ್ದು, ಚಿತ್ರಕ್ಕೆ ‘ಇದು ದೇವರ ತಾಣ’ ಎಂಬ ಟ್ಯಾಗ್‍ಲೈನ್ ಇದೆ.
ಈ ಹಿಂದೆ ‘ಕತ್ತಲೆ ಕೋಣೆ’, ‘ಇನಾಂದಾರ್’, ‘ಗುಂಮ್ಟಿ ಚಿತ್ರಗಳನ್ನು ನಿರ್ದೇಶಿಸಿದ್ದ ಸಂದೇಶ್ ಶೆಟ್ಟಿ ಆಜ್ರಿ, ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಜ್ಯೋತಿ ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ ವಿಕಾಸ್ ಎಸ್. ಶೆಟ್ಟಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಈ ಚಿತ್ರದ ಕುರಿತು ಮಾತನಡುವ ಕೋಮಲ್, ‘ಇದೊಂದು ವಿಭಿನ್ನ ಸಿನಿಮಾ. ಎರಡು ಕಾಲ ಘಟ್ಟದಲ್ಲಿ ಈ ಸಿನಿಮಾದ ಕಥೆಯನ್ನು ನಿರ್ದೇಶಕರು ವಿಭಿನ್ನವಾಗಿ ಹೇಳುತ್ತಿದ್ದಾರೆ. ಕಾಮಿಡಿ, ಮನರಂಜನೆಯ ಜೊತೆ ಬೇರೆ ಒಂದಷ್ಟು ವಿಷಯಗಳು ಕೂಡ ಈ ಸಿನಿಮಾದಲ್ಲಿರಲಿದೆ. ಈ ಚಿತ್ರದಲ್ಲಿ ನಾನು ಸಿನಿಮಾ ನಿರ್ದೇಶಕನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇನ್ನೊಂದು ಕಾಲಘಟ್ಟದ ಪಾತ್ರದ ಬಗ್ಗೆ ಈಗಲೇ ಹೇಳಲಾರೆ. ಒಟ್ಟಿನಲ್ಲಿ ಎರಡು ಶೇಡ್ ಇರುವಂಥ ಪಾತ್ರ ಇಲ್ಲಿದೆ’ ಎಂದರು.
ಮೇಘನಾ ರಾಜ್ ಈ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ನಾನು ಸಿನಿಮಾದಿಂದ ದೂರವಾಗಿದ್ದೇನೆ ಎಂದು ಅನೇಕರು ಅಂದುಕೊಂಡಿದ್ದಾರೆ. ಆದರೆ ನಾನು, ನಿಜವಾಗಿಯೂ ಸಿನಿಮಾದಿಂದ ದೂರವಾಗಿಲ್ಲ. ಒಳ್ಳೆಯ ಕಥೆ, ಒಳ್ಳೆಯ ಪಾತ್ರಗಳು ಸಿಕ್ಕರೆ, ಖಂಡಿತವಾಗಿಯೂ ಸಿನಿಮಾ ಮಾಡುತ್ತೇನೆ. ಈಗಾಗಲೇ ಮಲೆಯಾಳಂನಲ್ಲೂ ಒಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆ. ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’, ಬಹಳ ದಿನಗಳ ನಂತರ ನಾನು ಕನ್ನಡದಲ್ಲಿ ಅಭಿನಯಿಸುತ್ತಿರುವ ಸಿನಿಮಾ. ಈ ಚಿತ್ರದ ಕಥೆಯನ್ನು ನಿರ್ದೇಶಕರು ಹೇಳಿದ ಕೂಡಲೇ ಇಷ್ಟವಾಗಿ ಪಾತ್ರ ಮಾಡಲು ಒಪ್ಪಿಕೊಂಡೆ. ಈ ಸಿನಿಮಾದಲ್ಲಿ 19ನೇ ಶತಮಾನದಲ್ಲಿ ಬರುವ ರಾಜಮನೆತನದ ಮಹಿಳೆಯ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ನನಗೆ ಇದೊಂದು ಹೊಸ ತರಹದ ಪಾತ್ರ. ನೋಡುಗರಿಗೂ ನನ್ನ ಪಾತ್ರ ಇಷ್ಟವಾಗುತ್ತದೆ ಎಂಬ ನಂಬಿಕೆಯಿದೆ’ ಎಂದರು.
ಕೋಮಲ್ ಅವರನ್ನು ಹಿಂದೆಂದೂ ನೋಡಿರದ ರೀತಿಯಲ್ಲಿ ಈ ಚಿತ್ರದಲ್ಲಿ ನೋಡಬಹುದು ಎನ್ನುವ ನಿರ್ದೇಶಕ ಸಂದೇಶ್, ‘ಇಡೀ ಚಿತ್ರದ ಮೊದಲರ್ಧ ಹಾಸ್ಯಭರಿತವಾಗಿ ಸಾಗಿದರೆ, ದ್ವಿತೀಯರ್ಧ ಸಸ್ಪೆನ್ಸ್-ಥ್ರಿಲ್ಲರ್ ಅಂಶಗಳ ಜೊತೆ ಸಾಗುತ್ತದೆ. ಮನರಂಜನೆಯ ಜೊತೆಗೆ, ಇಂದಿನ ಕೆಲವು ಸಾಮಾಜಿಕ ವಿಷಯಗಳನ್ನೂ ಈ ಚಿತ್ರದಲ್ಲಿ ಹೇಳುತ್ತಿದ್ದೇವೆ. ಕುಂದಾಪುರ, ಕಾಸರಗೋಡು, ಕೇರಳ, ರಾಜಸ್ತಾನ, ಹಂಪಿ ಮೊದಲಾದ ಕಡೆಗಳಲ್ಲಿ ಚಿತ್ರೀಕರಣಕ್ಕೆ ಪ್ಲಾನ್ ಮಾಡಿಕೊಂಡಿದ್ದೇವೆ. ಮುಂದಿನ ವರ್ಷದ ಆರಂಭದಲ್ಲಿಯೇ ಈ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಿದೆ’ ಎಂದರು.
‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಚಿತ್ರದಲ್ಲಿ ಕೋಮಲ್‍ಗೆ ನಾಯಕಿಯಾಗಿ ಅನೂಷಾ ರೈ ನಟಿಸುತ್ತಿದ್ದು, ಮಿಕ್ಕಂತೆ ಮೇಘನಾ ರಾಜ್, ಎಂ. ಕೆ. ಮಠ, ಪ್ರಕಾಶ್ ತುಮ್ಮಿನಾಡು, ವರ್ಧನ್ ತೀರ್ಥಹಳ್ಳಿ, ಸಿರಿ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.




