ಗಾಲಿ ಜನಾರ್ಧನ ರೆಡ್ಡಿ ಮಗ ‘ಕಿರೀಟಿ’ ಚಿತ್ರರಂಗದಲ್ಲಿ ಛಾಪು ಮೂಡಿಸಲು ಸಜ್ಜಾಗಿದ್ದು, ಮೊದಲ ಚಿತ್ರ ‘ಜೂನಿಯರ್’, ಜುಲೈ 18ರಂದು ಬಿಡುಗಡೆಯಾಗಲಿದೆ. ಈಗ ಚಿತ್ರದ ಎರಡನೇ ಹಾಡು ಆದಿತ್ಯ ಮ್ಯೂಸಿಕ್ ಕನ್ನಡದಲ್ಲಿ ಬಿಡುಗಡೆಯಾಗಿದೆ.
‘ವೈರಲ್ ವಯ್ಯಾರಿ …’ ಎಂದು ಸಾಗುವ ಹಾಡಿಗೆ ಪವನ್ ಭಟ್ ಸಾಹಿತ್ಯ ಬರೆದಿದ್ದು, ಹರಿಪ್ರಿಯಾ ಮತ್ತು ದೀಪಕ್ ಬ್ಲೂ ಧ್ವನಿಯಾಗಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತಕ್ಕೆ ಕಿರೀಟಿ ಮತ್ತು ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ.
ಮೂರು ವರ್ಷಗಳ ಹಿಂದೆ ಪ್ರಾರಂಭವಾಗಿದ್ದ, ಕಿರೀಟಿ ಅಭಿನಯದ ‘ಜ್ಯೂನಿಯರ್’ ತಂದೆ-ಮಗನ ಬಾಂಧವ್ಯ ಕುರಿತಾದ ಚಿತ್ರ. ಇಲ್ಲಿ ರವಿಚಂದ್ರನ್ ಮತ್ತು ಕಿರೀಟಿ ತಂದೆ-ಮಗನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು, ರವಿಚಂದ್ರನ್ ಅವರ ಮಗಳಾಗಿ ಜೆನಿಲಿಯಾ ಅಭಿನಯಿಸಿದ್ದಾರಂತೆ.
‘ಜೂನಿಯರ್’ ಚಿತ್ರದಲ್ಲಿ ಕಿರೀಟಿ ಜೊತೆಗೆ ರವಿಚಂದ್ರನ್, ಜೆನಿಲಿಯಾ ಡಿಸೋಜಾ, ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದ ‘ಮಾಯಾಬಜಾರ್’ ಸಿನಿಮಾದ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಈ ಚಿತ್ರವನ್ನು ನಿರ್ದೇಶಿಸಿದ್ದು, ‘ಬಾಹುಬಲಿ’ ಮತ್ತು ‘RRR’ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದ ಸೆಂಥಿಲ್ ಕುಮಾರ್ ಈ ಚಿತ್ರದ ಛಾಯಾಗ್ರಾಹ ಮಾಡಿದ್ದಾರೆ.
ಈ ಚಿತ್ರದ ಕುರಿತು ಮಾತನಾಡಿರುವ ರಾಧಾಕೃಷ್ಣ ರೆಡ್ಡಿ, ‘ದೊಡ್ಡ ದೊಡ್ಡ ಕಲಾವಿದರು ಮತ್ತು ತಂತ್ರಜ್ಞರ ಜೊತೆಗೆ ಈ ಚಿತ್ರದಲ್ಲಿ ಕೆಲಸ ಮಾಡಿರುವುದು ‘ಜೂನಿಯರ್’ ಸೇಫ್ ಎಂದರ್ಥ. ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್ ಜೊತೆಗೆ ಕೆಲಸ ಮಾಡಿರುವುದು ನೆನಪಿನಲ್ಲಿ ಉಳಿಯುವಂತಹದ್ದು. ಚಿತ್ರದ ಪ್ರತಿ ಫ್ರೇಮ್ ಕೂಡ ಸ್ಪೆಷಲ್ ಅಗಿದೆ’ ಎಂದು ಹೇಳಿಕೊಂಡಿದ್ದಾರೆ.
‘ಜೂನಿಯರ್’ ಚಿತ್ರವು ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.





