‘ಮ್ಯಾಕ್ಸ್’ ನಿರ್ದೇಶಕ ವಿಜಯ್ ಕಾರ್ತಿಕೇಯ ನಿರ್ದೇಶನದಲ್ಲಿ ಸುದೀಪ್ ಅಭಿನಯಿಸುತ್ತಿರುವ ಹೊಸ ಚಿತ್ರದ ಚಿತ್ರೀಕರಣ ಸೋಮವಾರದಿಂದ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಸುದೀಪ್, ಪ್ರಿಯಾ ಸುದೀಪ್, ವಿಜಯ್ ಕಾರ್ತಿಕೇಯ ಮುಂತಾದವರು ಹಾಜರಿದ್ದರು. ಇದು ಸುದೀಪ್ ಅಭಿನಯದ 47ನೇ ಚಿತ್ರವಾಗಿದ್ದು, ಸದ್ಯಕ್ಕೆ ‘ಕೆ-47’ ಎಂದು ಕರೆಯಲಾಗುತ್ತಿದೆ.
ಇದು ‘ಮ್ಯಾಕ್ಸ್’ ಚಿತ್ರದ ಪ್ರೀಕ್ವೆಲ್ ಆಗಿದ್ದು, ಚಿತ್ರಕ್ಕೆ ‘ಮ್ಯಾಕ್ಸ್ 2’ ಎಂಬ ಹೆಸರಿಡಲಾಗಿದೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಆದರೆ, ಇದು ‘ಮ್ಯಾಕ್ಸ್ 2’ ಅಲ್ಲ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ. ‘ಇದು ಬೇರೆಯದೇ ಪಾತ್ರ. ಬೇರೆಯದೇ ವ್ಯಕ್ತಿತ್ವ. ‘ಮ್ಯಾಕ್ಸ್’ನ ಅರ್ಜುನ್ ಮಹಾಕ್ಷಯ್ ಪಾತ್ರಕ್ಕಿಂತ ವಿಭಿನ್ನವಾದದ್ದು. ಈ ಪಾತ್ರ ಮುತ್ತತ್ತಿ ಸತ್ಯರಾಜು ಪಾತ್ರದಂತಿದೆ. ಹಾಗಾಗಿ, ‘ಮ್ಯಾಕ್ಸ್ 2’ ಚಿತ್ರವನ್ನು ಸದ್ಯಕ್ಕೆ ಕೈಬಿಟ್ಟು, ಬೇರೆಯದೇ ಹೊಸ ಚಿತ್ರ ಮಾಡುವುದಕ್ಕೆ ಹೊರಟಿದ್ದೇವೆ’ ಎಂದು ಹೇಳಿದ್ದಾರೆ.
‘ಮ್ಯಾಕ್ಸ್’ ತರಹ ಈ ಚಿತ್ರದಲ್ಲೂ ಸುದೀಪ್‍ಗೆ ನಾಯಕಿ ಇರುವುದಿಲ್ಲವಂತೆ. ಈ ಬಗ್ಗೆ ಮಾತನಾಡಿರುವ ಸುದೀಪ್, ‘ಚಿತ್ರದಲ್ಲಿ ಒಂದು ನಾಯಕಿ ಪಾತ್ರ ಇತ್ತು. ಆದರೆ, ಕಥೆಯ ಓಟಕ್ಕೆ ನಾಯಕಿ ಮತ್ತು ಆಕೆಯ ದೃಶ್ಯಗಳ ಅವಶ್ಯಕತೆ ಇಲ್ಲ ಎಂದನಿಸಿದ್ದರಿಂದ ಆ ಪಾತ್ರವನ್ನು ಕೈಬಿಟ್ಟಿದ್ದೇವೆ. ನಾಯಕಿ ಪಾತ್ರವನ್ನು ಸುಮ್ಮನೆ ತುರುಕಬಾರದು. ಚಿತ್ರದಲ್ಲಿ ನಾಯಕಿ ಇರಬೇಕೆಂದರೆ ಒಳ್ಳೆಯ ಪಾತ್ರ ಇರಬೇಕು. ಕೆಲವೊಮ್ಮೆ ಆ ಪಾತ್ರಕ್ಕೆ ನ್ಯಾಯ ಸಲ್ಲಿಸುವುದಕ್ಕೆ ಆಗುವುದಿಲ್ಲ. ಹಾಗಾಗಿ, ನಾಯಕಿ ಪಾತ್ರವನ್ನು ಬಿಟ್ಟಿದ್ದೇವೆ’ ಎಂದಿದ್ದಾರೆ.
ಇನ್ನೂ ಹೆಸರಿಡದ ಈ ಚಿತ್ರವನ್ನು ತಮಿಳಿನ ಜನಪ್ರಿಯ ನಿರ್ಮಾಣ ಸಂಸ್ಥೆ ಸತ್ಯಜ್ಯೋತಿ ಫಿಲಂಸ್ ನಿರ್ಮಾಣ ಮಾಡುತ್ತಿದೆ. ಈ ಚಿತ್ರಕ್ಕೆ ವಿಜಯ್ ಕಾರ್ತಿಕೇಯ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಮತ್ತು ಶೇಖರ್ ಚಂದ್ರ ಛಾಯಾಗ್ರಹಣವಿದೆ.





