‘ಜೋಗಿ’ ಪ್ರೇಮ್ ನಿರ್ದೇಶನದ ‘ಕೆಡಿ – ದಿ ಡೆವಿಲ್’ ಚಿತ್ರವು ದೀಪಾವಳಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಇತ್ತು. ನಿರ್ದೇಶಕ ಪ್ರೇಮ್ ಸಹ ದೀಪಾವಳಿ ಹೊತ್ತಿಗೆ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ, ಚಿತ್ರದ ಬಿಡುಗಡೆಗೆ ಇನ್ನೊಂದೇ ಒಂದು ವಾರವಿದ್ದರೂ, ಯಾವುದೇ ಸುದ್ದಿ ಇಲ್ಲ. ಅಲ್ಲಿಗೆ ಹಬ್ಬಕ್ಕೆ ಚಿತ್ರ ಬಿಡುಗಡೆಯಾಗುತ್ತಿಲ್ಲ.
ಹಾಗಾದರೆ, ಬಿಡುಗಡೆ ಯಾವಾಗ? ಸದ್ಯಕ್ಕಂತೂ ಸಾಧ್ಯವಿಲ್ಲ. ಪ್ರೇಮ್ ತಮ್ಮ ಚಿತ್ರಗಳ ಪ್ರಚಾರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುತ್ತಾರೆ. ಡಿಸೆಂಬರ್ ತಿಂಗಳಲ್ಲಿ ದೊಡ್ಡದೊಡ್ಡ ಚಿತ್ರಗಳು ಬಿಡುಗಡೆಗೆ ಕಾದಿರುವ ಕಾರಣ, ಆಗಂತೂ ಬಿಡುಗಡೆಯಾಗುವ ಸಾಧ್ಯತೆಗಳು ಇಲ್ಲ. ಇನ್ನು, ನವೆಂಬರ್‍ನಲ್ಲಿ ಬಿಡುಗಡೆ ಆಗುವುದಕ್ಕೆ ಹಲವು ಸಿನಿಮಾಗಳು ಕಾದಿವೆ. ಅದರ ಜೊತೆಗೆ ಪ್ರೇಮ್ ಸಹ ನವೆಂಬರ್ ತಿಂಗಳಲ್ಲೇ ಚಿತ್ರ ಬಿಡುಗಡೆ ಮಾಡುತ್ತಾರಾ? ಬಹುಶಃ ದೀಪಾವಳಿಯ ಸಂದರ್ಭದಲ್ಲಿ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ.
ಇದನ್ನು ಓದಿ: ‘ಕೆಡಿ – ದಿ ಡೆವಿಲ್’ ಚಿತ್ರದಲ್ಲಿ ಸುದೀಪ್; ಹೈದರಾಬಾದ್‍ನಲ್ಲಿ ಚಿತ್ರೀಕರಣ
ಇನ್ನು, ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ ಎಂಬ ಪ್ರಶ್ನೆಯೊಂದು ಕೆಲವು ದಿನಗಳ ಹಿಂದೆ ಕೇಳಿಬಂದಿತ್ತು. ಸುದೀಪ್, ಇತ್ತೀಚೆಗೆ ‘ಕೆಡಿ – ದಿ ಡೆವಿಲ್’ ಚಿತ್ರದಲ್ಲಿ ನಿಜಕ್ಕೂ ನಟಿಸಿದ್ದು, ಹೈದರಾಬಾದ್‍ನಲ್ಲಿ ನಡೆದ ಚಿತ್ರೀಕರಣದಲ್ಲಿ ಅವರು ಭಾಗವಹಿಸಿದ್ದಾರೆ. ಸುದೀಪ್ ನಟಿಸುತ್ತಿರುವ ವಿಷಯವನ್ನು ಚಿತ್ರತಂಡದವರೇ ಸ್ಪಷ್ಟಪಡಿಸಿದ್ದಾರೆ.
‘ಕೆಡಿ – ದಿ ಡೆವಿಲ್’ ಚಿತ್ರಕ್ಕೆ ಪ್ರೇಮ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಕೆ.ವಿ.ಎನ್. ಪ್ರೊಡಕ್ಷನ್ಸ್ ಬ್ಯಾನರ್‍ನಡಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಮತ್ತು ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ.




