ನೂರಾರು ಚಿತ್ರಗಳಿಗೆ ಫೈಟರ್ ಆಗಿ, ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿರುವ ‘ಕೌರವ ವೆಂಕಟೇಶ್, ಕೆಲವು ದಿನಗಳ ಹಿಂದೆ ಪ್ರಥಮ್ ಅಭಿನಯದ ಚಿತ್ರವೊಂದರ ನಿರ್ದೇಶನಕ್ಕೆ ಕೈಹಾಕಿದ್ದರು. ಇದೀಗ ಅವರು, ಸದ್ದಿಲ್ಲದೆ ‘ಒಂದು ಸುಂದರ ದೆವ್ವದ ಕಥೆ’ ಎಂಬ ಚಿತ್ರಕ್ಕೆ ಹೀರೋ ಆಗಿದ್ದಾರೆ.
ಆರ್ಯ ಫಿಲಂಸ್ ಲಾಂಛನದಲ್ಲಿ ಆರ್. ಲಕ್ಷ್ಮಿ ನಾರಾಯಣ ಗೌಡ ನಿರ್ಮಿಸುತ್ತಿರುವ ನೃತ್ಯ ನಿರ್ದೇಶಕ ಎಂ.ಆರ್. ಕಪಿಲ್ ನಿರ್ದೇಶಿಸುತ್ತಿರುವ ‘ಒಂದು ಸುಂದರ ದೆವ್ವದ ಕಥೆ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಲೀಲಾವತಿ ಸ್ಮಾರಕದ ಮುಂದೆ ನೆರವೇರಿತು. ಚಿತ್ರದ ಮುಹೂರ್ತ ದೃಶ್ಯಕ್ಕೆ ನಟ ವಿನೋದ್ ರಾಜ್ ಅವರು ಕ್ಲಾಪ್ ಮಾಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಭಾ.ಮ. ಹರೀಶ್, ಪ್ರಥಮ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಮುಹೂರ್ತದ ನಂತರ ಮಾತನಾಡಿದ ನಿರ್ದೇಶಕ ಕಪಿಲ್, ‘35 ವರ್ಷಗಳ ಹಿಂದೆ ನಾನು ‘ಕೌರವ ವೆಂಕಟೇಶ್ ಅವರ ವಿದ್ಯಾರ್ಥಿ ಆಗಿದ್ದೆ. ಈಗ ಅವರ ಸಿನಿಮಾ ನಿರ್ದೇಶಿಸುವ ಅವಕಾಶ ದೊರೆತಿದೆ. ಇದೊಂದು ವಿಭಿನ್ನ ಶೀರ್ಷಿಕೆ. ಸಿನಿಮಾದಲ್ಲೂ ವಿಭಿನ್ನತೆಯಿದೆ. ಶಿಕ್ಷಣದ ಬಗ್ಗೆ ಒಂದು ಗಟ್ಟಿಯಾದ ಕಥೆಯಿದೆ. ವಿದ್ಯಾರ್ಥಿಗಳಿಗೆ ಓದು ಮುಖ್ಯನಾ? ಲಂಚ ಮುಖ್ಯನಾ? ಎಂಬ ಬಗ್ಗೆ ಒಂದು ಸಂದೇಶ ಹೇಳಿದ್ದೇವೆ. ಚಿತ್ರದಲ್ಲಿ ಅನೇಕ ಊಹಿಸಲಾಗದ ದೃಶ್ಯಗಳಿವೆ’ ಎಂದರು.
‘ಕೌರವ ವೆಂಕಟೇಶ್ ಮಾತನಾಡಿ, ‘ಇದುವರೆಗೆ ಸಾಕಷ್ಟು ಚಿತ್ರಗಳಿಗೆ ಸಾಹಸ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಈಗ ನಾಯಕನಾಗುತ್ತಿದ್ದೇನೆ. ಚಿತ್ರದಲ್ಲಿ ನನ್ನದು ಸೆಕ್ಯೂರಿಟಿ ಗಾರ್ಡ್ ಪಾತ್ರ. ವಂಚನೆಗೊಳಗಾದ ಹೆಣ್ಣುಮಕ್ಕಳಿಗೆ ಹೇಗೆ ನ್ಯಾಯ ಕೊಡಿಸುತ್ತೇನೆ ಎನ್ನುವುದೇ ಮುಖ್ಯಕಥೆ’ ಎಂದು ಹೇಳಿದರು. ಅವರಿಗೆ ನಾಯಕಿಯಾಗಿ ಧರಣಿ ನಟಿಸುತ್ತಿದ್ದಾರೆ.
‘ಒಂದು ಸುಂದರ ದೆವ್ವದ ಕಥೆ’ ಚಿತ್ರಕ್ಕೆ ಸಾಯಿಕೃಷ್ಣ ಹೆಬ್ಬಾಳ ಅವರ ಚಿತ್ರಕಥೆ ಮತ್ತು ಸಂಭಾಷಣೆ, ಹರ್ಷ ಕೊಗೋಡ್ ಸಂಗೀತ, ಶಂಕರ್ ಆರಾಧ್ಯ ಛಾಯಾಗ್ರಹಣವಿದೆ.





