‘ಕಾಂತಾರ – ಚಾಪ್ಟರ್ 1’ ಚಿತ್ರದ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಚಿತ್ರವು ಅಕ್ಟೋಬರ್ 02ರಂದು ಬಿಡುಗಡೆಯಾಗುತ್ತಿದ್ದು, ಚಿತ್ರದ ಕೆಲಸಗಳು ನಡೆಯುತ್ತಲೇ ಇದೆ. ಈ ಮಧ್ಯೆ, ಚಿತ್ರವನ್ನು ದಾಖಲೆ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ ಹೊಂಬಾಳೆ ಫಿಲಂಸ್ ತಂಡವು ತೀರ್ಮಾನಿಸಿದೆ.
‘ಕಾಂತಾರ – ಚಾಪ್ಟರ್ 1’ ಚಿತ್ರವು ಹಲವು ಹೆಗ್ಗಳಿಕೆಗೆ ಪಾತ್ರವಾಗುತ್ತಿದ್ದು, ಈ ಪೈಕಿ ಪ್ರಮುಖವಾಗಿ ಭಾರತೀಯ ಅಂಚೆ ಇಲಾಖೆ ವತಿಯಿಂದ ಇಂಡಿಯನ್ ಪೋಸ್ಟಲ್ ಕವರ್ ಹಾಗೂ ಪಿಕ್ಚರ್ ಪೋಸ್ಟ್ ಕಾರ್ಡ್ ಬಿಡುಗಡೆ ಮಾಡಲಾಗಿದೆ.
ಈ ಕುರಿತು ಮಾತನಾಡಿರುವ ನಿರ್ಮಾಪಕ ವಿಜಯ್ ಕಿರಗಂದೂರು, ‘ಭಾರತದಲ್ಲಿ ಏಳು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಕಾಂತಾರ – ಚಾಪ್ಟರ್ 1’ ಬಿಡುಗಡೆ ಆಗಲಿದೆ. ಜಗತ್ತಿನ 30 ದೇಶಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಇದೇ ಮೊದಲ ಬಾರಿಗೆ ಸ್ಪಾನಿಶ್ ಭಾಷೆಗೆ ಡಬ್ ಆಗುತ್ತಿದ್ದು, ಸ್ಪಾನಿಶ್ ಭಾಷೆಗೆ ಡಬ್ ಆಗಿ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡದ ಚಿತ್ರ ಎಂಬ ಹೆಗ್ಗಳಿಕೆಗೆ ಚಿತ್ರ ಪಾತ್ರವಾಗುತ್ತಿದೆ. ಕನ್ನಡ ಚಿತ್ರಗಳು ಉತ್ತರ ಅಮೇರಿಕಾದಲ್ಲಿ ಬಿಡಗುಡೆಯಾಗುವುದು ಹೊಸದೇನಲ್ಲ. ದಕ್ಷಿಣ ಅಮೇರಿಕಾದಲ್ಲಿ, ಅದರಲ್ಲೂ ಮೆಕ್ಸಿಕೋ ಮುಂತಾದ ದೇಶಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ.
ಇದನ್ನು ಓದಿ : KRG ಸ್ಟುಡಿಯೋಸ್ ಆಯ್ತು, PRK ಪ್ರೊಡಕ್ಷನ್‌ನಿಂದ ವೆಬ್ ಸರಣಿ
ಚಿತ್ರದ ಕುರಿತು ಮಾತನಾಡುವ ರಿಷಭ್ ಶೆಟ್ಟಿ, ‘ಈ ಚಿತ್ರಕ್ಕಾಗಿ ಸುಮಾರು ನಾಲ್ಕುವರೇ ಲಕ್ಷ ಜನರಿಗೆ ಊಟ ಹಾಕಿದ್ದಾರೆ ನಿರ್ಮಾಪಕರು. ‘ಕಾಂತಾರ’ ಶುರು ಮಾಡಿದಾಗ ಬರೀ ಒಂದು ಸಿನಿಮಾ ಆಗಿತ್ತು. ಮುಂದುವರೆಯುತ್ತಾ ಭಾವನಾತ್ಮಕ ಪಯಣವಾಗಿದೆ. ನಮ್ಮ ಕನ್ನಡಿಗರು, ಮಾಧ್ಯಮಗಳು ಚಿತ್ರವನ್ನು ಇಷ್ಟು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಒಂದು ಲೈನ್ ಕಥೆಯಿಂದ ನನ್ನ ಮೇಲೆ ನಂಬಿಕೆ ಇಟ್ಟುಕೊಂಡು ನಿರ್ಮಾಪಕರು ಇಲ್ಲಿಯವರೆಗೂ ತಂದಿದ್ದಾರೆ’ ಎಂದು ತಿಳಿಸಿದರು.
‘ಕಾಂತಾರ ಚಾಪ್ಟರ್ 1’ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸಿದ್ದು, ರಿಷಭ್ ಶೆಟ್ಟಿ ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ರುಕ್ಮಿಣಿ ವಸಂತ್, ಅಚ್ಯುತ್ ಕುಮಾರ್, ಗುಲ್ಶನ್ ದೇವಯ್ಯ ಮುಂತಾದವರು ನಟಿಸಿದ್ದು, ಚಿತ್ರವು ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.





