ನಟ ಗೋಪಾಲಕೃಷ್ಣ ದೇಶಪಾಂಡೆ, ‘ಗ್ರೀನ್’ ಒಂದು ಮನೋವೈಜ್ಞಾನಿಕ ಥ್ರಿಲ್ಲರ್ ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರವು ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂಬ ಸುದ್ದಿಯೊಂದು ಇತ್ತೀಚೆಗೆ ಕೇಳಿ ಬಂದಿತ್ತು. ತನ್ನ ಇಡೀ ಜೀವನವನ್ನೇ ನಿಯಂತ್ರಿಸುತ್ತಿರುವ ತನ್ನೊಳಗಿನ ರಾಕ್ಷಸನಿಂದ ಹೊರಬರಲು ಹೊರಡುವ ಕಥೆ ಇರುವ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆ ಆಗಿದೆ.
ರಾಜ್ ವಿಜಯ್ ಹಾಗೂ ಬಿ.ಎನ್. ಸ್ವಾಮಿ ನಿರ್ಮಾಣದ ಹಾಗೂ ರಾಜ್ ವಿಜಯ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ಗ್ರೀನ್’ ಚಿತ್ರದಲ್ಲಿ ಬಾಲಾಜಿ ಮನೋಹರ್, ಗೋಪಾಲಕೃಷ್ಣ ದೇಶಪಾಂಡೆ, ಆರ್.ಜೆ.ವಿಕ್ಕಿ, ಶಿವ ಮಂಜು, ವಿಶ್ವನಾಥ್, ಡಿಂಪಿ ಫಾದ್ಯ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದು ಕನ್ನಡದ ಹೆಮ್ಮೆಯ ಚಿತ್ರವಾಗಲಿದೆ ಎನ್ನುವ ನಿರ್ದೇಶಕ ರಾಜ್ ವಿಜಯ್, ‘ಇದೊಂದು ಸೈಕಾಲಜಿಕಲ್ ಮೈಂಡ್ ಬೆಂಡಿಂಗ್ ಥ್ರಿಲ್ಲರ್ ಚಿತ್ರ. ತನ್ನ ಇಡೀ ಜೀವನವನ್ನೇ ನಿಯಂತ್ರಿಸುತ್ತಿರುವ ತನ್ನೊಳಗಿನ ರಾಕ್ಷಸನಿಂದ ಹೊರಬರಲು ಹೋರಾಟದ ಕಥೆಯೇ ‘ಗ್ರೀನ್’. ಇದೊಂದು ಕಾಡಿನಲ್ಲಿ ನಡೆಯುವ ಕಥೆಯಾಗಿದ್ದು, ಯೋಚನೆಗೆ ಹಚ್ಚುವ ಸಿನಿಮಾ ಆಗಲಿದೆ. ಚಿತ್ರದಲ್ಲಿ ಓಪನ್ ಕ್ಲೈಮ್ಯಾಕ್ಸ್ ಇದ್ದು, ಪ್ರತಿಯೊಬ್ಬರೂ ಒಂದೊಂದು ರೀತಿಯಲ್ಲಿ ಚಿತ್ರವನ್ನು ಅರ್ಥೈಸಬಹುದು. ಈ ಚಿತ್ರದ ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಆ ಟ್ರೇಲರ್‍ನಲ್ಲಿ ಚಿತ್ರದ ಸಂಪೂರ್ಣ ಕಥೆ ಗೊತ್ತಾಗಲಿದೆ’ ಎಂದರು.
‘ಗ್ರೀನ್’ ಚಿತ್ರವು ಈಗಾಗಲೇ ಕಾನ್ಸ್ ವರ್ಲ್ಡ್ ಫಿಲಂ ಫೆಸ್ಟಿವಲ್‍ನಲ್ಲಿ ಅತ್ಯುತ್ತಮ ಭಾರತೀಯ ಚಿತ್ರ ಮತ್ತು ಭವಿಷ್ಯದ ನಿರ್ದೇಶಕ ಪ್ರಶಸ್ತಿ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣುವುದರ ಜೊತೆಗೆ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ‘ವಿದೇಶಿಗರು ಮೆಚ್ಚಿಕೊಂಡಿರುವ ನಮ್ಮ ಚಿತ್ರವನ್ನು ಕನ್ನಡಿಗರು ಮೆಚ್ಚಿಕೊಳ್ಳುವ ಭರವಸೆ ಇದೆ. ಹಾಲಿವುಡ್ ಶೈಲಿಯಲ್ಲಿ ಈ ಚಿತ್ರ ಮೂಡಿಬಂದಿದೆ. ಭಾಷೆಯನ್ನು ಹೊರತುಪಡಿಸಿದರೆ, ಚಿತ್ರವು ಹಾಲಿವುಡ್ ಚಿತ್ರಗಳಿಗೆ ಹೋಲಿಸಬಹುದು’ ಎಂದರು.
ಗೋಪಾಲಕೃಷ್ಣ ದೇಶಪಾಂಡೆ ಇದುವರೆಗೂ ಮಾಡಿರದ ಒಂದು ಪಾತ್ರವನ್ನು ಈ ಚಿತ್ರದಲ್ಲಿ ನಿರ್ವಹಿಸಿದ್ದಾರಂತೆ. ‘ಕನ್ನಡದಲ್ಲಿ ತೀರ ಅಪರೂಪದ ಕಥೆ ಇದು. ನಾನು ನಿರ್ವಹಿಸಿದ್ದೇನೆ. ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಮಾಯಣ್ಣ. ಚಿತ್ರೀಕರಣದಲ್ಲಿ ಭಾಗವಹಿಸಿ ಎರಡು ಶಾಟ್ ಮುಗಿದ ಮೇಲೆ ನಿರ್ದೇಶಕರಿಗೆ ಸಂಪೂರ್ಣವಾಗಿ ಒಪ್ಪಿಸಿಕೊಂಡು ಬಿಟ್ಟೆ. ನೀವು ಹೇಗೆ ಹೇಳುತ್ತೀರೋ ಹಾಗೆ ಮಾಡುತ್ತೇನೆ ಎಂದು ಅವರು ಹೇಳಿದ್ದಷ್ಟನ್ನು ಮಾಡಿದ್ದೇನೆ’ ಎಂದರು.
‘ಗ್ರೀನ್’ ಚಿತ್ರಕ್ಕೆ ಮಧುಸೂದನ್ ಛಾಯಾಗ್ರಹಣ ಮತ್ತು ಶಕ್ತಿ ಸ್ಯಾಕ್ ಸಂಗೀತ ಈ ಚಿತ್ರಕ್ಕಿದೆ.





