ಸಚಿನ್ ಚೆಲುವರಾಯ ಸ್ವಾಮಿ ಮತ್ತು ಸಂಗೀತಾ ಭಟ್ ಅಭಿನಯದ ‘ಕಮಲ್ ಶ್ರೀದೇವಿ’ ಚಿತ್ರವು ಸೆ. 19ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ಮಂತ್ರಿ ಮಾಲ್ನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ತರುಣ್ ಸುಧೀರ್ ಮತ್ತು ರಾಗಿಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಚಿತ್ರದ ಕ್ರಿಯೇಟಿವ್ ಹೆಡ್ ಆಗಿರುವ ರಾಜವರ್ಧನ್, ತಮ್ಮ ತಂದೆ ಡಿಂಗ್ರಿ ನಾಗರಾಜ್ ಅವರ ಸಮಕಾಲೀನ ಮತ್ತು ಕಷ್ಟದಲ್ಲಿರುವ ಹಿರಿಯ ಕಲಾವಿದರ ಸಹಾಯಾರ್ಥ ಗೌರವ ಸನ್ಮಾನವನ್ನ ಮಾಡಿದ್ದು ವಿಶೇಷವಾಗಿತ್ತು. ಬೆಂಗಳೂರು ನಾಗೇಶ್, ಎನ್.ಎಂ. ಲಕ್ಷ್ಮೀದೇವಮ್ಮ, ಬಿರಾದಾರ್, ಉಮೇಶ್, ಹೊನ್ನವಳ್ಳಿ ಕೃಷ್ಣರಿಗೆ ‘ಕಮಲ್ ಶ್ರೀದೇವಿ’ ವೇದಿಕೆಯಲ್ಲಿ ಗೌರವ ಸಮರ್ಪಿಸಿ ಆರ್ಥಿಕ ಸಹಾಯ ನೀಡಿ ಗೌರವಿಸಲಾಯ್ತು.
ಇದೊಂದು ಮರ್ಡರ್ ಮಿಸ್ಟ್ರಿ ಚಿತ್ರವಾಗಿದ್ದು, ಈ ಚಿತ್ರಕ್ಕೂ ಕಮಲ್ ಹಾಸನ್ ಮತ್ತು ಶ್ರೀದೇವಿಗೂ ಯಾವದೇ ಸಂಬಂಧವಿಲ್ಲವಂತೆ. ಚಿತ್ರದಲ್ಲೊಂದು ಚಿತ್ರವಿದ್ದು, ಆ ಚಿತ್ರದ ನಿರ್ದೇಶಕನಾಗಿ ಸಚಿನ್ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಈ ಚಿತ್ರಕ್ಕೆ ‘ಮಮ್ಮಿ’ ಚಿತ್ರದ ನಿರ್ದೇಶಕ ಲೋಹಿತ್ ಕಥೆ ಕೊಟ್ಟರಂತೆ. ಇನ್ನು, ‘ಗೊಂಬೆಗಳ ಲವ್’ ಖ್ಯಾತಿಯ ಸಂತು ಶೀರ್ಷಿಕೆ ಕೊಟ್ಟದ್ದಾರೆ.
‘ಕಮಲ್ ಶ್ರೀದೇವಿ’ ಚಿತ್ರವನ್ನು ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ ನಡಿಯಲ್ಲಿ ಬಿ.ಕೆ. ಧನಲಕ್ಷ್ಮೀ ನಿರ್ಮಿಸಿ, ಬಾರ್ನ್‍ಸ್ವಾಲೋ ಕಂಪನಿಯ ರಾಜವರ್ಧನ್ ಸಹ ನಿರ್ಮಾಣದಲ್ಲಿ ತಯಾರಾಗಿದೆ. ಚಿತ್ರದಲ್ಲಿ ಸಚಿನ್ ಮತ್ತು ಸಂಗೀತಾ ಭಟ್ ಜೊತೆಗೆ ಕಿಶೋರ್, ರಮೇಶ್ ಇಂದಿರಾ, ಅಕ್ಷಿತ ಬೋಪಯ್ಯ, ಮಿತ್ರ, ಎಂ.ಎಸ್. ಉಮೇಶ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಕೀರ್ತನ್ ಸಂಗೀತ ಸಂಯೋಜಿಸಿದ್ದು, ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣವಿದೆ.




