‘ಬಿಗ್ ಬಾಸ್ – ಸೀಸನ್ 11’ ತಮ್ಮ ಕೊನೆಯ ಸೀಸನ್ ಆಗಲಿದೆ ಎಂದು ಅಕ್ಟೋಬರ್ ತಿಂಗಳಲ್ಲೇ ಸುದೀಪ್ ಘೋಷಿಸಿದ್ದರು. ಈ ಕಾರ್ಯಕ್ರಮ ಮುಗಿಯುವುದಕ್ಕೆ ಕೆಲವೇ ದಿನಗಳಷ್ಟೇ ಉಳಿದಿದ್ದು, ಈ ಬಾರಿಯ ಗ್ರಾಂಡ್ ಫಿನಾಲೆ ತಮ್ಮ ಕೊನೆಯ ಗ್ರಾಂಡ್ ಫಿನಾಲೆ ಆಗಲಿದೆ ಎಂದು ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಕಳೆದ 10 ಅವತರಣಿಕೆಗಳನ್ನು ನಿರೂಪಕರಾಗಿ ಮುನ್ನಡೆಸಿದ್ದ ಸುದೀಪ್, 11ನೇ ಅವತರಣಿಕೆಯನ್ನು ನಡೆಸಿಕೊಡುತ್ತಾರಾ? ಇಲ್ಲವಾ? ಎಂಬುದರ ಕುರಿತು ಸಂಶಯವಿತ್ತು. ಆದರೆ, ಅಂತಿಮವಾಗಿ ಕಲರ್ಸ್ ಕನ್ನಡದವರ ಒತ್ತಾಯದ ಮೇರೆಗೆ ಸುದೀಪ್ ಕೊನೆಗೂ ಕಾರ್ಯಕ್ರಮವನ್ನು ನಡೆಸಿಕೊಡುವುದಕ್ಕೆ ಮುಂದಾದರು. ಕಾರ್ಯಕ್ರಮ ಶುರುವಾದ ಮೊದಲ ವಾರ ಟಿಆರ್‍ಪಿ ಹಂಚಿಕೊಳ್ಳುವುದರ ಜೊತೆಗೆ, ಇದು ತಮ್ಮ ಕೊನೆಯ ಕಾರ್ಯಕ್ರಮ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು.
ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಹಾಕಿದ್ದ ಸುದೀಪ್, ‘ಕಳೆದ 10 + 1 ವರ್ಷಗಳಿಂದ ‘ಬಿಗ್ ಬಾಸ್’ ನಡೆಸಿಕೊಡುತ್ತಿದ್ದು, ಇದು ಮುಂದುವರೆಯುವುದಕ್ಕೆ ಸಕಾಲ. ನಿರೂಪಕನಾಗಿ ಇದು ನನ್ನ ಕೊನೆಯ ವರ್ಷವಾಗಿದ್ದು, ಈ ನನ್ನ ನಿರ್ಧಾರವನ್ನು ಎಲ್ಲರೂ ಗೌರವಿಸುತ್ತಾರೆ ಎಂದು ನಂಬಿದ್ದೇನೆ. ನನ್ನ ಶಕ್ತಿ ಮೀರಿ ಈ ಕಾರ್ಯಕ್ರಮವನ್ನು ಚೆನ್ನಾಗಿ ನಡೆಸಿಕೊಡುವುದಕ್ಕೆ ಪ್ರಯತ್ನಿಸುತ್ತೇನೆ’ ಎಂದು ಹೇಳಿದ್ದರು.
ಸುದೀಪ್ ಅವರು ತಮ್ಮ ನಿರ್ಧಾರವನ್ನು ಹೇಳಿದ್ದರೂ, ಕಲರ್ಸ್ ಕನ್ನಡದವರು ಒಪ್ಪಿರಲಿಲ್ಲ ಎಂಬ ಮಾತು ಕೇಳಿಬಂದಿತ್ತು. ಕೆಲವು ದಿನಗಳ ಹಿಂದೆ ನಡೆದ ಸಂದರ್ಶನದಲ್ಲೂ, ಚಾನಲ್‍ನವರು ಇನ್ನೂ ಮನವೊಲಿಸುವ ಪ್ರಯತ್ನದಲ್ಲಿದ್ದಾರೆ ಎಂದಿದ್ದರು. ಆದರೆ, ಅದಕ್ಕೆ ಒಪ್ಪದಿರುವ ಸುದೀಪ್, ಈ ಬಾರಿಯ ಗ್ರಾಂಡ್ ಫಿನಾಲೆ ತಮ್ಮ ಕೊನೆಯದ್ದು ಎಂದು ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಬರೆದುಕೊಂಡಿರುವ ಸುದೀಪ್, ‘ಕಳೆದ 11 ಸೀಸನ್‍ಗಳ ಕಾಲ ‘ಬಿಗ್ ಬಾಸ್’ ಕಾರ್ಯಕ್ರಮವನ್ನು ಸಾಕಷ್ಟು ಎಂಜಾಯ್ ಮಾಡಿದ್ದೇನೆ. ಈ ಕಾರ್ಯಕ್ರಮಕ್ಕೆ ಪ್ರೀತಿ ತೋರಿಸಿದ ಎಲ್ಲರಿಗೂ ಧನ್ಯವಾದಗಳು. ಮುಂಬರುವ ಗ್ರಾಂಡ್ ಫಿನಾಲೆ, ನನ್ನ ಕೊನೆಯ ಕಾರ್ಯಕ್ರಮವಾಗಿದ್ದು, ಸಾಧ್ಯವಾದಷ್ಟೂ ಮನರಂಜಿಸುವುದಕ್ಕೆ ಪ್ರಯತ್ನಿಸುತ್ತೇನೆ’ ಎಂದು ಹೇಳಿದ್ದಾರೆ.
ಅಂದಹಾಗೆ, ಸುದೀಪ್ ಬದಲಿಗೆ ಮುಂದಿನ ಸೀಸನ್ ಯಾರು ನಡೆಸಿಕೊಡುತ್ತಾರೆ? ಎಂಬ ಚರ್ಚೆ ಶುರುವಾಗಿದೆ. ಮೊದಲು ಈ ಸೀಸನ್ ಮುಗಿದ ಮೇಲೆ, ಈ ಬಗ್ಗೆ ಚಾನಲ್‍ನವರು ತಲೆ ಕೆಡಿಸಿಕೊಳ್ಳಲಿದ್ದಾರೆ.