ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಗೆ ಸಂಬಂಧಿಸಿದಂತೆ ಸದ್ಯ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಕುರಿತು ಹಲವು ನಟ-ನಟಿಯರು ಇದುವರೆಗೂ ಮಾತನಾಡಿದ್ದಾರೆ. ಹಲವರು ದರ್ಶನ್ ಪರ ನಿಂತಿದ್ದಾರೆ. ಆದರೆ, ಇದುವರೆಗೂ ಹಿರಿಯ ನಟ ಅನಂತ್ ನಾಗ್ ಅವರು ಈ ವಿಷಯದ ಬಗ್ಗೆ ಮಾತನಾಡಿರಲಿಲ್ಲ. ನಿಜ ಹೇಳಬೇಕೆಂದರೆ, ಅವರು ಯಾವುದೇ ಸಮಾರಂಭ ಅಥವಾ ಪತ್ರಿಕಾಗೋಷ್ಠಿಯಲ್ಲೂ ಕಾಣಿಸಿಕೊಂಡಿರಲಿಲ್ಲ.
ಇತ್ತೀಚೆಗೆ ‘ಇದು ಎಂಥಾ ಲೋಕವಯ್ಯ’ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ದರ್ಶನ್ ಪ್ರಕರಣ ಕುರಿತಾಗಿ ಮಾಧ್ಯಮದವರು ಅವರನ್ನು ಪ್ರಶ್ನಿಸಿದಾಗ, ಒಂದಿಷ್ಟು ವಿಷಯಗಳನ್ನು ಮಾತನಾಡಿದ್ದಾರೆ. ಪ್ರಮುಖವಾಗಿ, ದರ್ಶನ್ ಪ್ರಕರಣದಿಂದ ಸಮಾಜದ ಮೇಲೆ ಯಾವುದೇ ರೀತಿಯ ಪರಿಣಾಮವೂ ಆಗುವುದಿಲ್ಲ ಎಂದು ಹಿರಿಯ ನಟ ಅನಂತ್ ನಾಗ್ ಅಭಿಪ್ರಾಯ ಪಟ್ಟಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘ಈ ತರಹದ ಘಟನೆಗಳು ಎಲ್ಲಾ ಕಡೆ ಆಗುತ್ತಿವೆ. ಬರೀ ಸಿನಿಮಾದವರ ಜೀವನದಲ್ಲಿ ಮಾತ್ರ ಆಗುತ್ತಿಲ್ಲ. ಅದೇ ತರಹದ ಅನೇಕ ಮತ್ತು ಸಾವಿರ ಪಟ್ಟು ಹಿಂಸೆ ಆಗುತ್ತಿದೆ. ದೇಶ ದೇಶಗಳ ನಡುವೆ ಸಮಸ್ಯೆ ಶುರುವಾಗಿದೆ. ಆದರೆ, ಯಾರೂ ಆ ಬಗ್ಗೆ ಮಾತನಾಡುತ್ತಿಲ್ಲ. ಅಂತಹ ಹಲವು ಘಟನೆಗಳಲ್ಲಿ ಇದೂ ಒಂದು ಘಟನೆ ಅಷ್ಟೇ. ಬಹುಶಃ ಆ ವ್ಯಕ್ತಿಯಿಂದ (ದರ್ಶನ್) ಇದಕ್ಕೆ ಹೆಚ್ಚು ಪ್ರಚಾರ ಸಿಕ್ಕಿರಬಹುದು. ಕೆಲವು ಘಟನೆಗಳು ಆದಾಗ ಮಾಧ್ಯಮದವರು ಅದನ್ನೇ ಹೈಲೈಟ್ ಮಾಡುವುದರಿಂದ ಜನರ ಮನಸ್ಸುಗಳು ಜಡವಾಗಿ ಬಿಡುತ್ತವೆ. ಅದರಿಂದ ಅವರ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ’ ಎಂದು ಅನಂತ ನಾಗ್ ಹೇಳಿದ್ದಾರೆ.
ಈ ಘಟನೆಯಿಂದ ಸ್ಫೂರ್ತಿ ಪಡೆದು ಏನೋ ಮಾಡುತ್ತಾರೆ ಎನ್ನುವುದು ಖಂಡಿತಾ ಸುಳ್ಳು ಎನ್ನುವ ಅವರು, ‘ಇದು ಸಮಾಜದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಾನು ಕೆಲವು ರಾಜಕೀಯ ಚಿತ್ರಗಳಲ್ಲಿ ಆಸೆಪಟ್ಟು ನಟಿಸಿದ್ದೇನೆ. ನಮ್ಮ ಚಿತ್ರ ನೋಡಿದ ಮೇಲೆ ರಾಜಕೀಯ ಬದಲಾಗಬಹುದು, ಜನರ ಮೇಲೆ ಪರಿಣಾಮ ಬೀರಬಹುದು, ಸಮಾಜದಲ್ಲಿ ಒಂದಿಷ್ಟು ಬದಲಾವಣೆಗಳನ್ನು ಕಾಣಬಹುದು ಅಂತಂದುಕೊಂಡಿದ್ದೆ. ಆದರೆ, ಅಂತಹ ಬದಲಾವಣೆ ನಾನು ನೋಡಲಿಲ್ಲ. ಹಾಗಾಗಿ, ಇದರಿಂದ ಸಮಾಜದ ಮೇಲೆ ಯಾವುದೇ ಪರಿಣಾಮವಾಗುತ್ತದೆ ಎಂದು ನಾನು ನಂಬುವುದಿಲ್ಲ’ ಎನ್ನುತ್ತಾರೆ.