Mysore
16
clear sky

Social Media

ಮಂಗಳವಾರ, 20 ಜನವರಿ 2026
Light
Dark

ಅದು ಕರ್ಮಭೂಮಿ: ಇದು ಜನ್ಮಭೂಮಿ ಎಂದ ಸುನೀಲ್‍ ಶೆಟ್ಟಿ

ಬಾಲಿವುಡ್‍ನ ಖ್ಯಾತ ನಟ ಸುನೀಲ್‍ ಶೆಟ್ಟಿ, ಈಗಾಗಲೇ ‘ಪೈಲ್ವಾನ್‍’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾಗಿದೆ. ಇದೀಗ ಅವರು ‘ಜೈ’ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎರಡನೆಯ ಬಾರಿಗೆ ಮತ್ತು ತುಳು ಚಿತ್ರರಂಗಕ್ಕೆ ಮೊದಲ ಬಾರಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರವು ನವೆಂಬರ್.14ರಂದು ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ಮಲ್ಲೇಶ್ವರದ ಮಂತ್ರಿ ಮಾಲ್‍ನಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆದಿದ್ದು, ಈ ಸಮಾರಂಭದಲ್ಲಿ ಸುನೀಲ್‍ ಶೆಟ್ಟಿ ಸಹ ಹಾಜರಿದ್ದರು. ಈ ಸಂದರ್ಭದಲ್ಲಿ ಅವರು, ಮುಂಬೈ ತಮ್ಮ ಕರ್ಮಭೂಮಿಯಾದರೆ, ಕರ್ನಾಟಕ ಜನ್ಮಭೂಮಿ ಎಂದು ಹೇಳಿದ್ದಾರೆ.

ಇದನ್ನು ಓದಿ: ಮುಂದಕ್ಕೆ ಹೋದ ‘ಫ್ಲರ್ಟ್’: ನ.28ರಂದು ಬಿಡುಗಡೆ

ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ನಾನು ಕರ್ನಾಟಕದವನು. ನಾನು ಬೆಂಗಳೂರಿಗೆ ಸಾಕಷ್ಟು ಬಾರಿ ಬರುತ್ತಿರುತ್ತೇನೆ. ನನ್ನ ಸಹೋದರಿ ಸೇರಿದಂತೆ ನನ್ನ ಹಲವು ಸಂಬಂಧಿಕರು ಇಲ್ಲಿದ್ದಾರೆ. ಬೆಂಗಳೂರಿನ ಜೊತೆಗೆ ಸಾಕಷ್ಟು ನೆನಪುಗಳು ಇವೆ. ರಾಜಕುಮಾರ್ ಅವರು, ಪುನೀತ್ ರಾಜ್‍ಕುಮಾರ್ ನಂಗೆ ತುಂಬಾ ಕ್ಲೋಸ್ ಇದ್ದರು. ಸುದೀಪ ತುಂಬಾ ಆತ್ಮೀಯರಾಗಿದ್ದಾರೆ. ಮುಂಬೈನಲ್ಲಿ ನಾನು ಹೆಚ್ಚು ಕೆಲಸ ಮಾಡಿದ್ದೇನೆ. ಅದು ನನ್ನ ಕರ್ಮಭೂಮಿ. ಆದರೆ ನನ್ನ ಜನ್ಮಭೂಮಿ ಕರ್ನಾಟಕದ ಮುಲ್ಕಿ’ ಎಂದರು.

ತಮಗೆ ಚಿಕ್ಕ ಸಿನಿಮಾ, ದೊಡ್ಡ ಸಿನಿಮಾ ಎಂಬ ಮಾತುಗಳಲ್ಲಿ ನಂಬಿಕೆ ಇಲ್ಲ ಎನ್ನುವ ಅವರು, ‘ಕನ್ನಡ ಚಿತ್ರರಂಗ ಮೊದಲು ಚಿಕ್ಕದಾಗಿ ಪ್ರಾರಂಭವಾಗಿ ಇವತ್ತು ಭಾರತದಲ್ಲೇ ನಂಬರ್ ಒನ್‍ ಚಿತ್ರರಂಗವಾಗಿದೆ. ಕನ್ನಡದ ಸಣ್ಣ ತಮ್ಮ ತುಳು ಚಿತ್ರರಂಗ ಸಹ ಅಣ್ಣನ ಹಾದಿಯಲ್ಲೇ ನಡೆದಿದೆ. ರೂಪೇಶ್‍ ಈ ಚಿತ್ರದಲ್ಲಿ ನಟರಷ್ಟೇ ಅಲ್ಲ, ನಿರ್ದೇಶಕರೂ ಹೌದು. ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದಾರೆ.

ಕಷ್ಟಪಟ್ಟು ಕೆಲಸ ಮಾಡಿರುವಾಗ ಯಶಸ್ವಿಯಾಗದಿರುವುದಕ್ಕೆ ಸಾಧ್ಯವೇ ಇಲ್ಲ. ತುಳು ಚಿತ್ರರಂಗವನ್ನು ಪ್ರೋತ್ಸಾಹಿಸುವುದಕ್ಕೆ ಈ ಚಿತ್ರ ಮಾಡಿದೆ. ಅದು ಬಿಟ್ಟು ಬೇರೆ ಯಾವುದೇ ಉದ್ದೇಶದಿಂದಲ್ಲ. ಚಿತ್ರ ಗೆಲ್ಲುತ್ತದೋ, ಇಲ್ಲವೋ ಪ್ರೇಕ್ಷಕರಿಗೆ ಬಿಟ್ಟಿದ್ದು. ಆದರೆ, ನಮ್ಮ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸುವ ಒಂದು ಪ್ರಾಮಾಣಿಕ ಪ್ರಯತ್ನ ಇದು. ‘ಕಾಂತಾರ’ ಹೇಗೆ ಕನ್ನಡ ಚಿತ್ರವನ್ನು ಜಗತ್ತಿನ ನಕ್ಷೆಯಲ್ಲಿ ಕಾಣುವಂತೆ ಮಾಡಿತೋ, ಅದೇ ತರಹ ‘ಜೈ’ ಚಿತ್ರವು ತುಳು ಚಿತ್ರರಂಗವನ್ನು ಭಾರತದ ಭೂಪಟದಲ್ಲಿ ಬೆಳಗುವಂತೆ ಮಾಡುತ್ತದೆ ಎಂಬ ನಂಬಿಕೆ ಇದೆ’ ಎಂದರು.

Tags:
error: Content is protected !!