Mysore
18
broken clouds

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಶ್ರೇಯಾ ಘೋಶಾಲ್‍ ಕನ್ನಡ ಚಿತ್ರಗಳಿಂದ ದೂರಾಗುತ್ತಿದ್ದಾರೆಯೇ?

ಜನಪ್ರಿಯ ಗಾಯಕಿ ಶ್ರೇಯಾ ಘೋಶಾಲ್‍ ಯಾಕೆ ಕನ್ನಡ ಹಾಡುಗಳನ್ನು ಹಾಡುತ್ತಿಲ್ಲ? ಇಂಥದ್ದೊಂದು ಪ್ರಶ್ನೆ ಕನ್ನಡ ಚಿತ್ರರಂಗದ ವಲಯದಲ್ಲಿ ಕೇಳಿಬರುತ್ತಿದೆ. ಅದಕ್ಕೆ ಸರಿಯಾಗಿ, ಶ್ರೇಯಾ ಘೋಷಾಲ್‍ ಅವರು ಕನ್ನಡದಲ್ಲಿ ಹಾಡೊಂದನ್ನು ಹಾಡಿ ಬಹಳ ಸಮಯವಾಗಿದೆ. ‘ಸಂಜು ವೆಡ್ಸ್ ಗೀತಾ 2’ ಚಿತ್ರವಕ್ಕೆ ಅವರಿಂದ ಒಂದು ಹಾಡು ಹಾಡಿಸಬೇಕು ಎಂದು ನಿರ್ದೇಶಕ ನಾಗಶೇಖರ್ ಪ್ರಯತ್ನಿಸಿ ಸೋತಿದ್ದಾರೆ.

ಈ ಕುರಿತು ಮಾತನಾಡುವ ನಾಗಶೇಖರ್, ‘ಶ್ರೇಯಾ ಘೋಶಾಲ್‍ ಅವರು ಕನ್ನಡ ಹಾಡುಗಳನ್ನು ಹಾಡುವುದಿಲ್ಲ ಎಂದು ಎಲ್ಲೂ ಹೇಳಿಕೊಂಡಿಲ್ಲ. ಆದರೆ, ಅವರು ಇತ್ತೀಚೆಗೆ ಯಾವೊಂದು ಹಾಡನ್ನೂ ಹಾಡುತ್ತಿಲ್ಲ. ಅವರಿಂದ ಕನ್ನಡ ಹಾಡುಗಳನ್ನು ಹಾಡಿಸಬೇಕು ಎಂದು ಕಾದಿರುವವರ ದೊಡ್ಡ ಸಂಖ್ಯೆ ಇದೆ. ಆದರೆ, ಅವರಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ನಮ್ಮ ಚಿತ್ರದ ಒಂದು ಹಾಡಿಗೆ ಅವರ ಧ್ವನಿ ಸೂಕ್ತವಾಗಿತ್ತು. ಆದರೆ, ಅದು ಸಾಧ್ಯವಾಗದೆ ಸಂಗೀತ ರವೀಂದ್ರನಾಥ್‍ ಅವರಿಂದ ಹಾಡಿಸಿದೆವು’ ಎನ್ನುತ್ತಾರೆ ನಾಗಶೇಖರ್‍.

ಈ ಕುರಿತು ಇನ್ನಷ್ಟು ಬೆಳಕು ಚೆಲ್ಲುವ ಅವರು, ‘ನಮ್ಮ ಚಿತ್ರದ ‘ಮಳೆಯಂತೆ ಬಾ …’ ಹಾಡನ್ನು ಸಂಗೀತಾ ರವೀಂದ್ರನಾಥ್‍ ಅವರಿಂದಲೇ ಹಾಡಿಸಬೇಕು ಎಂದು ಚಿತ್ರತಂಡದ ಆಸೆ ಇತ್ತು. ನಿರ್ಮಾಪಕರೂ ಅದನ್ನೇ ಹೇಳಿದರು. ನಾನು ಮಾತ್ರ ಶ್ರೇಯಾ ಘೋಶಾಲ್‍ ಹಾಡಬೇಕು ಎಂದು ಪಟ್ಟುಹಿಡಿದಿದ್ದೆ. ಏಕೆಂದರೆ, ನನ್ನ ಹಿಂದಿನ ಚಿತ್ರಗಳಲ್ಲಿ ಎರಡು ಸೂಪರ್‍ ಹಿಟ್‍ ಗೀತೆಗಳನ್ನು ಕೊಟ್ಟವರು ಅವರು. ಸಂಗೀತ ನಿರ್ದೇಶಕ ಶ್ರೀಧರ್‍ ಸಂಭ್ರಮ್‍, ಶ್ರೇಯಾ ಘೋಶಾಲ್‍ ಅವರನ್ನು ಸಂಪರ್ಕಿಸುವುದಕ್ಕೆ ಪ್ರಯತ್ನ ಮಾಡಿ ಸೋತರು. ಕೊನೆಗೆ ನಾನೇ ಮಾತನಾಡುತ್ತೇನೆ ಎಂದೆ. ನನ್ನ ‘ಸಂಜು ವೆಡ್ಸ್ ಗೀತಾ’ ಚಿತ್ರದ ‘ಗಗನವೇ ಬಾಗಿ …’ ಮತ್ತು ‘ಮೈನಾ’ ಚಿತ್ರದ ‘ಮೊದಲ ಮಳೆಯಂತೆ …’ ಹಾಡುಗಳನ್ನು ಅವರಿಗೆ ಕಳಿಸಿದೆ. ‘ಗಗನವೇ ಬಾಗಿ …’ ಹಾಡಿಗೆ ಅವರಿಗೆ ಫಿಲಂಫೇರ್‍ ಪ್ರಶಸ್ತಿ ಸಹ ಸಿಕ್ಕಿತ್ತು. ಅದನ್ನೂ ನೆನಪಿಸಿದೆ. ಆದರೆ, ಅಂತಿಮವಾಗಿ ಅವರು ಯಾಕೋ ಆಸಕ್ತಿ ತೋರಿಸುತ್ತಿಲ್ಲ ಎಂದು ಅವರ ಮ್ಯಾನೇಜರ್‍ ಹೇಳಿದರು. ಕೊನೆಗೆ ಪ್ರಯತ್ನ ಬಿಟ್ಟು, ಸಂಗೀತಾ ರವೀಂದ್ರನಾಥ್‍ ಅವರಿಂದಲೇ ಹಾಡನ್ನೂ ಹಾಡಿಸಿದೆವು’ ಎನ್ನುತ್ತಾರೆ ನಾಗಶೇಖರ್‍.

2003ರಲ್ಲಿ ಬಿಡುಗಡೆಯದ ‘ಪ್ಯಾರಿಸ್‍ ಪ್ರಣಯ’ ಚಿತ್ರದ ‘ಕೃಷ್ಣ ನೀ ಬೇಗನೆ ಬಾರೋ ..’ ಹಾಡನ್ನು ಹಾಡುವ ಮೂಲಕ ಕನ್ನಡಕ್ಕೆ ಬಂದ ಶ್ರೇಯಾ, ನಂತರದ ವರ್ಷಗಳಲ್ಲಿ ಕನ್ನಡದಲ್ಲಿ ನೂರಾರು ಜನಪ್ರಿಯ ಹಾಡುಗಳನ್ನು ಹಾಡಿದ್ದಾರೆ.

Tags: