Mysore
26
broken clouds

Social Media

ಮಂಗಳವಾರ, 24 ಫೆಬ್ರವರಿ 2026
Light
Dark

ಸಿದ್ದರಾಮಯ್ಯ ಇರದಿದ್ದರೆ ಚಿತ್ರನಗರಿ ಕನಸಿನ ಮಾತು: ರಾಜೇಂದ್ರ ಸಿಂಗ್‍ ಬಾಬು

ಮೈಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಚಿತ್ರನಗರಿಯು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕಾಲದಲ್ಲಿ ಆದರೆ ಆಯಿತು, ಇಲ್ಲವಾದರೆ ಅದು ಕನಸಿನ ಮಾತು ಎಂದು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‍ ಬಾಬು ಹೇಳಿದ್ದಾರೆ.

‘ರಕ್ತ ಕಾಶ್ಮೀರ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ದೇವರಾಜ ಅರಸರ ಕಾಲದಿಂದ ಇಲ್ಲಿಯವರೆಗೂ ಇಲ್ಲಿ ಚಿತ್ರನಗರಿ ಆಗುವುದಕ್ಕೂ ಬಿಡುತ್ತಿಲ್ಲ. ಚಿತ್ರ ನಗರಿಗಾಗಿ ಮೈಸೂರಿನಲ್ಲಿ 150 ಎಕರೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಇರುವವರೆಗೂ ಫಿಲಂ ಸಿಟಿ ಆದರೆ ಉಂಟು, ಇಲ್ಲವಾದರೆ ಖಂಡಿತಾ ಆಗುವುದಿಲ್ಲ. ಅವರಿಗೆ ಸಿನಿಮಾ ಬಗ್ಗೆ ಕಾಳಜಿ, ಕನಿಕರ ಇದೆ. ಆದರೆ, ಅಧಿಕಾರಿಗಳು ಅದನ್ನು ತಡೆ ಹಿಡಿಯುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ: ವೈಡ್‌ ಆಂಗಲ್: ಉದ್ಯಮದತ್ತ ಸರ್ಕಾರದ ಗಮನ; ಚಿತ್ರನಗರಿ ಯೋಜನೆಗೆ ಮತ್ತೆ ಚಾಲನೆ

ಬರೀ ಚಿತ್ರನಗರಿಯಷ್ಟೇ ಅಲ್ಲ, ಜನತಾ ಚಿತ್ರಮಂದಿರಗಳ ನಿರ್ಮಾಣದಲ್ಲೂ ವಿಳಂಬವಾಗುತ್ತಿದೆ ಎಂದಿರುವ ಅವರು, ‘ಚಿಕ್ಕ ಚಿತ್ರಗಳಿಗೆ ಜನತಾ ಚಿತ್ರಮಂದಿರಗಳು ಸೂಕ್ತವಾದ್ದರಿಂದ, ಜನತಾ ಚಿತ್ರಮಂದಿರಗಳನ್ನು ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮನವಿ ಮಾಡಿದ್ದೆ. ಅವರು ತಕ್ಷಣವೇ 50 ಲಕ್ಷ ರೂ. ಸಬ್ಸಿಡಿ ಘೋಷಿಸಿದರು. ಸರ್ಕಾರದ 50 ಬೈ 80 ಅಡಿ ಜಾಗ ಕೊಡಿ ಎಂದು ಆದೇಶಿಸಿದ್ದರು. ಆದರೆ, ನಮ್ಮ ದುರಾದೃಷ್ಟವೋ, ಶಾಪವೋ ಗೊತ್ತಿಲ್ಲ. ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದರೂ ಅಧಿಕಾರಿಗಳು ಕೊಕ್ಕೆ ಹಾಕಿಡುತ್ತಾರೆ. ಯಾವುದೂ ಮುಂದುವರೆಯುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಚಿತ್ರಮಂದಿರಗಳು ಮುಚ್ಚುವುದರಿಂದ ವ್ಯಾಪಾರಕ್ಕೆ ಏಟು ಬೀಳುತ್ತಿದೆ ಎಂದಿರುವ ಅವರು, ‘ಹೆಚ್ಚು ಚಿತ್ರಮಂದಿರಗಳು ಪ್ರಾರಂಭವಾಗುವುದರಿಂದ ಸಾಕಷ್ಟು ಉದ್ಯೋಗ ಸಿಗುತ್ತದೆ. ಬಸ್‍ ನಿಲ್ದಾಣಗಳಲ್ಲಿ ಚಿತ್ರಮಂದಿರ ಪ್ರಾರಂಭ ಮಾಡಬಹುದು ಎಂದು ರಾಮಲಿಂಗಾ ರೆಡ್ಡಿ ಆದೇಶ ಮಾಡಿದರು. ಆದರೆ, ಅಧಿಕಾರಿಗಳು ಕೊಕ್ಕೆ ಇಟ್ಟಿದ್ದಾರೆ. ಒಂದೊಂದು ಪ್ರದೇಶದಲ್ಲಿ 250 ಸೀಟ್‍ಗಳಿರುವ ಚಿತ್ರಮಂದಿರಗಳು ಇದ್ದರೆ ಸಾಕು. ಇವತ್ತು ಬೆಂಗಳೂರಿನಲ್ಲೇ ಇಂದಿರಾನಗರ, ಕೋರಮಂಗಲ ಮುಂತಾದ ಕಡೆ ಚಿತ್ರಮಂದಿರಗಳೇ ಇಲ್ಲ. ಜನ ಚಿತ್ರ ನೋಡಬೇಕೆಂದರೂ, ನೋಡುವುದಕ್ಕೆ ಆಗುತ್ತಿಲ್ಲ. 75 ರೂ.ಗಳಿಗೆ ಸಿನಿಮಾ ತೋರಿಸಬೇಕೆಂಬ ಆಸೆ ಸಿದ್ದರಾಮಯ್ಯನವರದ್ದು. ಅದಕ್ಕೆ ಅಧಿಕಾರಿಗಳು ಜೀವ ಕೊಡುತ್ತಿಲ್ಲ’ ಎಂದು ಹೇಳಿದ್ದಾರೆ.

Tags:
error: Content is protected !!