ರಿಷಭ್ ಶೆಟ್ಟಿ ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ‘ಕಾಂತಾರ – ಅಧ್ಯಾಯ 1’ ಚಿತ್ರದಲ್ಲಿ ಅವರು ಭಕ್ತಿ ಮತ್ತು ಪೌರಾಣಿಕ ಅಂಶಗಳ ಕಾಲ್ಪನಿಕ ಕಥೆ ಹೇಳಿದರೆ, ‘ಜೈ ಹನುಮಾನ್’ ಚಿತ್ರದಲ್ಲಿ ಅವರು ಪೌರಾಣಿಕ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದೀಗ ಅವರು ಇದೇ ಮೊದಲ ಬಾರಿಗೆ ಐತಿಹಾಸಿಕ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ.
ಈ ಬಾರಿ ಅವರು ಛತ್ರಪತಿ ಶಿವಾಜಿ ಕುರಿತ ‘ದಿ ಪ್ರೈಡ್ ಆಫ್ ಭಾರತ್ – ಛತ್ರಪತಿ ಶಿವಾಜಿ ಮಹಾರಾಜ್’ ಎಂಬ ಚಿತ್ರದಲ್ಲಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಘೋಷಣೆ ಮಂಗಳವಾರ ಅಧಿಕೃತವಾಗಿ ಆಗಿದೆ.
ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿರುವ ರಿಷಭ್ ಶೆಟ್ಟಿ, ‘ಭಾರತದ ಹೆಮ್ಮೆಯ ಪುತ್ರ ಶಿವಾಜಿ ಮಹಾರಾಜ್ ಕುರಿತು ಚಿತ್ರ ಘೋಷಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಇದೊಂದು ಚಿತ್ರವಷ್ಟೇ ಅಲ್ಲ, ಬಲಿಷ್ಠ ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ಒಬ್ಬ ವೀರ ಯೋಧನ ಕಥೆ. ಈ ಅಪ್ರತಿಮ ಯೋಧನ ಕಥೆಯನ್ನು ನೋಡಲು ಸಿದ್ಧರಾಗಿ. ಚಿತ್ರವು ಜಾಗತಿಕವಾಗಿ 2027ರ ಜನವರಿ.21ರಂದು ಬಿಡುಗಡೆ ಆಗಲಿದೆ’ ಎಂದು ಹೇಳಿಕೊಂಡಿದ್ದಾರೆ.
‘ದಿ ಪ್ರೈಡ್ ಆಫ್ ಭಾರತ್ – ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರವನ್ನು ಸಂದೀಪ್ ಸಿಂಗ್ ನಿರ್ದೇಶಿಸುತ್ತಿದ್ದಾರೆ. ಸಂದೀಪ್ ಸಿಂಗ್ ಇದಕ್ಕೂ ಮೊದಲು ‘ಅಲಿಘರ್’, ‘ಸರ್ಬ್ಜಿತ್’, ‘ಭೂಮಿ’, ‘ಪಿಎಂ ನರೇಂದ್ರ ಮೋಧಿ’, ‘ಝುಂಡ್’, ‘ಮೇ ಅಟಲ್ ಹೂಂ’ ಮತ್ತು ‘ಸವಾತಂತ್ರ್ಯ ವೀರ್ ಸಾವರ್ಕರ್’ ಚಿತ್ರಗಳನ್ನು ನಿರ್ಮಿಸಿದ್ದರು. ಇದು ಅವರ ನಿರ್ದೇಶನದ ಎರಡನೇ ಚಿತ್ರ. ಕಳೆದ ವರ್ಷ ಬಿಡಗಡೆಯಾದ ‘ಸಫೇದ್’ ಎಂಬ ಚಿತ್ರವನ್ನು ಅವರು ನಿರ್ದೇಶಿಸಿದ್ದರು.
‘ದಿ ಪ್ರೈಡ್ ಆಫ್ ಭಾರತ್ – ಛತ್ರಪತಿ ಶಿವಾಜಿ ಮಹಾರಾಜ್’ ಘೋಷಣೆಯ ದಿನವೇ ಬಿಡುಗಡೆ ದಿನಾಂಕವನ್ನೂ ಘೋಷಿಸಲಾಗಿದೆ. ಚಿತ್ರವನ್ನು 2027ರ ಜನವರಿ 21ರಂದು ಬಿಡುಗಡೆ ಮಾಡಲಾಗುತ್ತದಂತೆ. ‘ಕಾಂತಾರ – ಅಧ್ಯಾಯ 1’ ಚಿತ್ರವು 2025ರ ಅಕ್ಟೋಬರ್ 02ರಂದು ಬಿಡುಗಡೆಯಾಗದರೆ, ‘ಜೈ ಹನುಮಾನ್’ ಚಿತ್ರವು 2026ರಲ್ಲಿ ಬಿಡುಗಡೆಯಾಗಲಿದೆ. 2027ರಲ್ಲಿ ‘ದಿ ಪ್ರೈಡ್ ಆಫ್ ಭಾರತ್ – ಛತ್ರಪತಿ ಶಿವಾಜಿ ಮಹಾರಾಜ್’ ತೆರೆಗೆ ಬರಲಿದೆ.