ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ಮತ್ತು ಗೀತರಚನೆಕಾರ ಹಂಸಲೇಖ ಮತ್ತೊಮ್ಮೆ ಸಕ್ರಿಯರಾಗಿದ್ದಾರೆ. ಕಳೆದ ವಾರವಷ್ಟೇ ಅವರ ನಿರ್ದೇಶನದ ಮತ್ತು ಸಂಗೀತ ನಿರ್ದೇಶನದ ‘ಓಕೆ’ ಎಂಬ ಚಿತ್ರವು ಸೆಟ್ಟೇರಿತ್ತು. ಇದೀಗ ಹಂಸಲೇಖ ಇನ್ನೂ ಎರಡು ಚಿತ್ರಗಳಿಗೆ ಸಂಗೀತ ಸಂಯೋಜಿಸುವುದಕ್ಕೆ ಅಣಿಯಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಓಂಪ್ರಕಾಶ್ ರಾವ್ ಮತ್ತು ಹಂಸಲೇಖ ಅವರದ್ದು ಜನಪ್ರಿಯ ಜೋಡಿ. ಓಂಪ್ರಕಾಶ್ ರಾವ್ ನಿರ್ದೇಶನದ ‘ಲಾಕಪ್ ಡೆತ್’, ‘ಸಿಂಹದ ಮರಿ’, ‘AK 47’, ‘ಪಾಳೆಗಾರ’ ಮುಂತಾದ ಚಿತ್ರಗಳಿಗೆ ಹಂಸಲೇಖ ಸಂಗೀತ ಸಂಯೋಜಿಸಿದ್ದರು. ಇದೀಗ ‘ಫೀನಿಕ್ಸ್’ ಹಾಗೂ ‘ಗೆರಿಲ್ಲಾ ವಾರ್’ ಚಿತ್ರಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಇದು ಓಂಪ್ರಕಾಶ್ ರಾವ್ ನಿರ್ದೇಶನದ 49 ಹಾಗೂ 50ನೇ ಚಿತ್ರಗಳಾಗಿದೆ.
ಈ ಪೈಕಿ ಚಿತ್ರೀಕರಣ ಮುಕ್ತಾಯ ಹಂತದಲ್ಲಿರುವ ‘ಫೀನಿಕ್ಸ್’ ಚಿತ್ರವನ್ನು ಗುರು ಚಿತ್ರಾಲಯ ಲಾಂಛನದಲ್ಲಿ ತ್ರಿಶಾ ಪ್ರಕಾಶ್ ನಿರ್ಮಿಸುತ್ತಿದ್ದಾರೆ. ನಿಮಿಕಾ ರತ್ನಾಕರ್, ಭಾಸ್ಕರ್ ಶೆಟ್ಟಿ, ಎಸ್ತರ್ ನರೋನ್ಹಾ, ರಂಗಾಯಣ ರಘು ಮುಂತಾದವರು ನಟಿಸುತ್ತಿದ್ದಾರೆ.
‘ಗೆರಿಲ್ಲಾ ವಾರ್’ ಚಿತ್ರವನ್ನು ಎಂ.ಆರ್. ಟಾಕೀಸ್ ಲಾಂಛನದಲ್ಲಿ ನಯನ ಗೌಡ ನಿರ್ಮಿಸುತ್ತಿದ್ದು, ಮಂಡ್ಯ ಲೋಕಿ ನಾಯಕನಾಗಿ ಹಾಗೂ ನಿಮಿಕ ರತ್ನಾಕರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ಓಂಪ್ರಕಾಶ್ ರಾವ್ ನಿರ್ದೇಶನದ 50ನೇ ಚಿತ್ರವಾಗಿದ್ದು, ಆಗಸ್ಟ್ ನಲ್ಲಿ ಆರಂಭವಾಗಲಿದೆ.





