ಪೊಲೀಸ್ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಂಡಿದ್ದ ಗಣೇಶ್ ರಾವ್ ಕೇಸರ್ಕರ್, ಈಗ ಒಂದರಹಿಂದೊಂದು ಮೂರು ಪೌರಾಣಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ, ಮೂರೂ ಚಿತ್ರಗಳಲ್ಲೂ ಅವರು ಈಶ್ವರನಾಗಿ ಕಾಣಿಸಿಕೊಂಡಿದ್ದಾರೆ.
‘ಶ್ರೀ ಸಿದ್ಧರಾಮೇಶ್ವರ’ ಎಂಬ ಬಿಡುಗಡೆಯಾಗದ ಚಿತ್ರದಲ್ಲಿ ಗಣೇಶ್ ರಾವ್ ಮೊದಲು ಶಿವನ ಪಾತ್ರ ಮಾಡಿದರು. ನಂತರ ‘ಗಂಗೆ ಗೌರಿ’ ಎಂಬ ಚಿತ್ರದಲ್ಲೂ ಈಶ್ವರನಾದರು. ಈ ಚಿತ್ರದ ಮುಹೂರ್ತ ಕೆಲವು ತಿಂಗಳುಗಳ ಹಿಂದೆ ಆಗಿದ್ದು, ಚಿತ್ರ ಬಿಡುಗಡೆಗೆ ಸಿದ್ಧವಿದೆ. ಆ ಎರಡೂ ಚಿತ್ರಗಳು ಬಿಡುಗಡೆಯಾಗುವ ಮೊದಲೇ, ಅವರು ಈಗ ‘ತಾರಕೇಶ್ವರ’ ಎಂಬ ಚಿತ್ರದಲ್ಲಿ ಈಶ್ವರನಾಗಿ ನಟಿಸಿದ್ದಾರೆ. ಈ ಚಿತ್ರವು ಸದ್ದಿಲ್ಲದೆ ಸಿದ್ಧವಾಗಿದ್ದು, ಇತ್ತೀಚೆಗೆ ಹಾಡುಗಳು ಬಿಡುಗಡೆಯಾಗಿವೆ.
‘ತಾರಕೇಶ್ವರ’ ಚಿತ್ರಕ್ಕೆ ’ಅಸುರ ಕುಲತಿಲಕ’ ಎಂಬ ಅಡಿಬರಹ ಇದ್ದು, ಇದುವರೆಗೂ ಹೆಚ್ಚಾಗಿ ಪೌರಾಣಿಕ ಚಿತ್ರಗಳನ್ನೇ ನಿರ್ದೇಶನ ಮಾಡಿರುವ ಓಂಕಾರ್ ಪುರುಷೋತ್ತಮ್, ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ಅವರು, ‘ಈ ಹಿಂದೆ ’ಸಿದ್ದರಾಮೇಶ್ವರ’ ಚಿತ್ರದಲ್ಲಿ ಗಣೇಶ್ ರಾವ್, ಈಶ್ವರನಾಗಿ ನಟಿಸಿದ್ದರು. ಆ ಸಂದರ್ಭದಲ್ಲೇ ‘ತಾರಕೇಶ್ವರ’ ಚಿತ್ರದ ಒಂದೆಳೆ ಹೇಳಿದ್ದೆ. ಅದು ಈಗ ಚಿತ್ರವಾಗಿದೆ. ಶಿವಪುರಾಣದ ಕಥೆಯಲ್ಲಿ ತಾರಕಾಸುರ ಅಸುರ ಆದರೂ, ತಂದೆ ಕೊಂದವನ ಮೇಲೆ ಸೇಡು ತೀರಿಸಿಕೊಳ್ಳಲು ತಪ್ಪಸ್ಸು ಮಾಡಿ ತನಗೆ ಸಾವು ಬರಬಾರದೆಂದು ಬ್ರಹ್ಮನಿಂದ ವರ ಪಡೆದುಕೊಳ್ಳುತ್ತಾನೆ. ಮುಂದೆ ಯಾವ ರೀತಿ ಹೋರಾಟ ಮಾಡುತ್ತಾನೆಂಬುದು ಚಿತ್ರದ ಕಥೆ. ಗಣೇಶ್‌ರಾವ್ ಕೇಸರ್‌ಕರ್ ಪುತ್ರ ಪ್ರಜ್ವಲ್ ಕೇಸರ್‌ಕರ್ ಇಂದ್ರನಾಗಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ಶ್ರೀರಂಗಪಟ್ಟಣ, ಮೈಸೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ’ ಎಂದರು.
ಗಣೇಶ್ ರಾವ್ ಕೇಸರ್ಕರ್ ಅವರು ಈಶ್ವರನ ಪಾತ್ರ ಮಾಡಿದಾಗ ಎಲ್ಲರೂ ಇಷ್ಟಪಟ್ಟರಂತೆ. ‘ಮುಂದೆ ’ಗಂಗೆ ಗೌರಿ’ ಶುರು ಮಾಡಿದೆವು. ಆ ಚಿತ್ರದ ಎಡಿಟಿಂಗ್ ಸಂದರ್ಭದಲ್ಲಿ ’ತಾರಕೇಶ್ವರ’ ಚಿತ್ರ ಮಾಡುವ ಬಗ್ಗೆ ಪ್ರಸ್ತಾಪ ಬಂತು. ಈ ಚಿತ್ರದಲ್ಲಿ ತಾರಕೇಶ್ವರನಾಗಿ ಕಾಣಿಸಿಕೊಂಡಿದ್ದೇನೆ. ಆಗ ಒಂದಷ್ಟು ಆಪ್ತರು ಹಣ ಹೂಡಲು ಮುಂದೆ ಬಂದರು. ಅವರೆಲ್ಲರ ಸಹಕಾರದಿಂದಲೇ ಟೈಟಲ್ ರೋಲ್‌ದಲ್ಲಿ ಕಾಣಿಸಿಕೊಳ್ಳಲು ಸುಲಭವಾಯಿತು’ ಎಂದರು.
ಈ ಚಿತ್ರದಲ್ಲಿ ಪಾರ್ವತಿಯಾಗಿ ನಾಯಕಿ ರೂಪಾಲಿ ನಟಿಸಿದ್ದಾರೆ. ಅವರೊಂದಿಗೆ ಸುಮಿತ ಪ್ರವೀಣ್, ಅನ್ನಪೂರ್ಣ, ರತಿ-ಮನ್ಮಥರಾಗಿ ವಿಕ್ರಂ ಸೂರಿ -ನಮಿತಾ ರಾವ್, ಶಂಕರ ಭಟ್, ಜಿಮ್ ಶಿವು, ಎನ್.ಟಿ. ರಾಮಸ್ವಾಮಿ, ಗುರುರಾಜ್, ಹೆಜ್ಜಾಜಿ ಮಹಾದೇವ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ರಾಜ್ ಭಾಸ್ಕರ್ ಸಂಗೀತ ಮತ್ತು ಮುತ್ತುರಾಜ್ ಛಾಯಾಗ್ರಹಣವಿದೆ.