ಗಿರೀಶ್ ನಿರ್ದೇಶನದ ‘ಫಸ್ಟ್ ಡೇ ಫಸ್ಟ್ ಶೋ’ ಚಿತ್ರವು ಜುಲೈ 04ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಕಲಾವಿದರ ಸಂಘದಲ್ಲಿ ಇತ್ತೀಚೆಗೆ ನಡೆಯಿತು.
ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಡಾ.ರಾಜಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಹಾಗೂ ಅಂಬರೀಶ್ ಅವರ ಅಭಿಮಾನಿಗಳು ಬೆಂಬಲ ಕೊಟ್ಟಿದ್ದು ವಿಶೇಷವಾಗಿತ್ತು. ನಿರ್ಮಾಪಕ ಸಾ.ರಾ. ಗೋವಿಂದು, ವೀರಕಪುತ್ರ ಶ್ರೀನಿವಾಸ್, ಮಾಸ್ಟರ್ ಮಂಜು, ಅಂಬರೀಶ್ ಅಭಿಮಾನಿಗಳಾದ ಬೇಲೂರು ಸೋಮಶೇಖರ್ ಹಾಗೂ ರುದ್ರೇಗೌಡ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ಗಿರೀಶ್, ‘ನಾನು ಇದಕ್ಕೂ ಮೊದಲು ‘ಒಂದ್ ಕಥೆ ಹೇಳ್ಲಾ’ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದೆ. ಆ ನಂತರ ‘ವಾವ್’ ಎಂಬ ಸಿನಿಮಾ ಮಾಡಿದೆ. ಕಳೆದ ವರ್ಷ ‘ಶಾಲಿವಾಹನ ಶಕೆ’ ಎಂಬ ಚಿತ್ರ ಮಾಡಿದೆ. ಈಗ ‘ಫಸ್ಟ್ ಡೇ ಫಸ್ಟ್ ಶೋ’ ಎಂಬ ಚಿತ್ರ ಮಾಡಿದ್ದೇನೆ. ನನ್ನ ನಾಲ್ಕು ಸಿನಿಮಾಗಳು ಬೇರೆ ರೀತಿಯ ಅಭಿರುಚಿ ಚಿತ್ರಗಳು. ‘ಫಸ್ಟ್ ಡೇ ಫಸ್ಟ್ ಶೋ’ ಕಥೆ ಅನ್ನುವುದಕ್ಕಿಂತ ಇಡೀ ಚಿತ್ರರಂಗವನ್ನು ಪ್ರತಿನಿಧಿಸುವ ಚಿತ್ರ ಎನ್ನಬಹುದು’ ಎಂದರು.
ನಿರ್ಮಾಪಕ ಕಿರಣ್ ಮಾತನಾಡಿ, ‘ನಾನು ಮತ್ತು ಗಿರೀಶ್ ಸುಮಾರು 13 ವರ್ಷಗಳ ಸ್ನೇಹಿತರು. ಈ ಹಿಂದೆ ನಾವಿಬ್ಬರು ಜೊತೆಯಾಗಿ ‘ಒಂದು ಕಥೆ ಹೇಳ್ಲಾ’ ಚಿತ್ರವನ್ನು ಮಾಡಿದ್ದೆವು. ಇದು ನಮ್ಮ ಎರಡನೇ ಚಿತ್ರ. ಇದು ಚಿತ್ರರಂಗದ ಕುರಿತಾದ ಚಿತ್ರ. ಎಲ್ಲಾ ಅಭಿಮಾನಿಗಳಿಗೂ ಹಬ್ಬವಾಗಲಿದೆ. ಚಿತ್ರಕ್ಕೆ ಪ್ರಕಾಶ್ ರೈ ತಮ್ಮ ಧ್ವನಿ ನೀಡಿದ್ದಾರೆ’ ಎಂದರು.
‘ಫಸ್ಟ್ ಡೇ ಫಸ್ಟ್ ಶೋ’ ಚಿತ್ರದಲ್ಲಿ ಜೀವಿತಾ ವಸಿಷ್ಟ, ರೋಹಿತ್ ಶ್ರೀನಾಥ್, ಬಿ.ಎಂ. ವೆಂಕಟೇಶ್, ಗಿಲ್ಲಿ ನಟ ಮುಂತಾದವರು ನಟಿಸಿದ್ದು, ಊರ್ಮಿಳಾ ಕಿರಣ್ ಚಿತ್ರವನ್ನು ನಿರ್ಮಿಸಿದ್ದಾರೆ. ಉಜ್ವಲ್ ಚಂದ್ರ ಸಂಕಲನ, ರಾಕೇಶ್ ಸಿ ತಿಲಕ್ ಹಾಗೂ ಅರುಣ್ ಕುಮಾರ್ ಛಾಯಾಗ್ರಹಣ, ಸ್ವಾಮಿನಾಥನ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.





