ಧನಂಜಯ್ ಸದ್ಯ ‘ಉತ್ತರಕಾಂಡ’ ಮತ್ತು ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ ಧನಂಜಯ್ ಅಭಿನಯದ ‘ಜೀಬ್ರಾ’ ಮತ್ತು ‘ಪುಷ್ಪ 2’ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿವೆ. ಇದರ ಜೊತೆಗೆ ‘ನಾಡಪ್ರಭು ಕೆಂಪೇಗೌಡ’ ಮತ್ತು ‘ಹಲಗಲಿ’ ಚಿತ್ರಗಳಲ್ಲಿ ನಟಿಸುತ್ತಿರುವ ಸುದ್ದಿ ಇದೆ. ಇವೆಲ್ಲದರ ಜೊತೆಗೆ ಅವರು ಇನ್ನೊಂದು ಚಿತ್ರವನ್ನು ಸಹ ಒಪ್ಪಿಕೊಂಡಿದ್ದಾರೆ.
ಧನಂಜಯ್ ಹೊಸ ಚಿತ್ರದ ಹೆಸರು ‘ಜಿಂಗೋ’. ಈ ಚಿತ್ರವನ್ನು ಶಶಾಂಕ್ ಸೋಗಾಲ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ, ಪೂರ್ಣಚಂದ್ರ ತೇಜಸ್ವಿ ವಿರಚಿತ ‘ಡೇರ್ ಡೆವಿಲ್ ಮುಸ್ತಾಫ’ ಚಿತ್ರವನ್ನು ನಿರ್ದೇಶಿಸಿದ್ದ ಶಶಾಂಕ್ ಅವರಿಗೆ ಇದು ಎರಡನೆಯ ಚಿತ್ರ. ‘ಡೇರ್ ಡೆವಿಲ್ ಮುಸ್ತಾಫ’ ಚಿತ್ರಕ್ಕೆ ಧನಂಜಯ್ ಬೆನ್ನೆಲುಬಾಗಿ ನಿಂತಿದ್ದರು. ಆ ಚಿತ್ರದ ಬಿಡುಗಡೆಗೆ ದೊಡ್ಡ ರೀತಿಯಲ್ಲಿ ಸಹಾಯ ಮಾಡಿದ್ದರು. ಈಗ ಅದೇ ಶಶಾಂಕ್ ನಿರ್ದೇಶನದ ಚಿತ್ರದಲ್ಲಿ ಧನಂಜಯ್ ನಟಿಸುತ್ತಿದ್ದಾರೆ.
ಈ ಚಿತ್ರದಲ್ಲಿ ಧನಂಜಯ್ ಆ್ಯಂಟಿ-ಹೀರೋ ಆಗಿ ನಟಿಸುತ್ತಿದ್ದಾರೆ. ಬಹಳ ದಿನಗಳ ನಂತರ ಅವರು ನೆಗೆಟಿವ್ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಮರ್ಡರ್ ಮಿಸ್ಟ್ರಿ ಚಿತ್ರ ಎಂದು ಶಶಾಂಕ್ ಹೇಳಿದ್ದು, ಒಂದು ಕಾಲ್ಪನಿಕ ಹಳ್ಳಿಯ ಮುಖಂಡ ಜಿಂಗೋ ಆಗಿ ಧನಂಜಯ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.
ಈ ಹಿಂದೆ ಕಲರ್ಸ ಕನ್ನಡ ವಾಹಿನಿಯಲ್ಲಿ ಬರಹಗಾರರಾಗಿ ಕೆಲಸ ಮಾಡುತ್ತಿದ್ದ ಹ್ಯಾರಿಸ್ ಅಹ್ಮದ್ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದಿದ್ದಾರೆ. ಒಂದು ಹಳ್ಳಿಯಲ್ಲಿ ಕೊಲೆಯಾದಾಗ ಏನೆಲ್ಲಾ ಆಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಚಿತ್ರದ ಬರವಣಿಗೆ ಕೆಲಸ ಮುಕ್ತಾಯದ ಹಂತಕ್ಕೆ ಬಂದಿದ್ದು, ತಾರಾಗಣದ ಆಯ್ಕೆ ನಡೆಯುತ್ತಿದೆ.
‘ಜಿಂಗೋ’ ಚಿತ್ರವನ್ನು ಧನಂಜಯ್ ಮತ್ತು ನರೇಂದ್ರ ರೆಡ್ಡಿ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ರಾಹುಲ್ ರಾಯ್ ಛಾಯಾಗ್ರಹಣ ಮತ್ತು ನವನೀತ್ ಶ್ಯಾಮ್ ಸಂಗೀತವಿದೆ.
ಅಂದಹಾಗೆ, ಧನಂಜಯ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಡಾಲಿ ಪಿಕ್ಚರ್ಸ್ ಯೂಟ್ಯೂಬ್ ಚಾನಲ್‍ನಲ್ಲಿ ಚಿತ್ರದ ಮೊದಲ ಟೀಸರ್ ಬಿಡುಗಡೆ ಮಾಡಲಾಗಿದೆ.