ನಾಯಿ ಸಾಕಿರುವವರ ಮನೆಯ ಮುಂದೆ ಸಾಮಾನ್ಯವಾಗಿ ಕಾಣುವ ಪದ ‘ನಾಯಿ ಇದೆ ಎಚ್ಚರಿಕೆ’. ಈಗ ಇದೇ ಚಿತ್ರವೊಂದರ ಶೀರ್ಷಿಕೆಯಾಗಿದೆ. ಈ ಚಿತ್ರವನ್ನು ಡಾ.ಲೀಲಾ ಮೋಹನ್ ನಿರ್ಮಿಸುವುದರ ಜೊತೆಗೆ ನಿರ್ದೇಶನ ಮಾಡಿದರೆ, ಕಲಿ ಗೌಡ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇಂದ್ರಜಿತ್ ಲಂಕೇಶ್ ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಪ್ರಥಮ್ ಸಹ ಈ ಸಂದರ್ಭದಲ್ಲಿ ಹಾಜರಿದ್ದರು.
ಡಾ.ಲೀಲಾ ಮೋಹನ್ ಇದಕ್ಕೂ ಮೊದಲು ‘ಗಡಿಯಾರ’, ‘ಪುಟ್ಟಾಣಿ ಪಂಟರುಗಳು’, ‘ರೋಡ್ ಕಿಂಗ್’ ಮುಂತಾದ ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಅವರು, ‘ನಾನು ವೃತ್ತಿಯಲ್ಲಿ ವೈದ್ಯ. ಈ ಚಿತ್ರದಲ್ಲೂ ವೈದ್ಯ. ಇದರಲ್ಲೂ ನನ್ನ ಹೆಸರು ಲೀಲಾ ಅಂತಲೇ. ಇನ್ನೂ ಇದು ನಾಯಿ ಹಾಗೂ ಮನುಷ್ಯನ ಬಾಂಧವ್ಯದ ಕುರಿತಾದ ಸಿನಿಮಾ. ಜೊತೆಗೆ ನಾಯಿ ಕಚ್ಚುವುದರಿಂದ ಆಗುವ ದುಷ್ಪರಿಣಾಮಗಳನ್ನು ತೋರಿಸಿರುವ ಸಿನಿಮಾ. ಇದರ ಜೊತೆಗೆ ಸಸ್ಪೆನ್ಸ್, ಥ್ರಿಲ್ಲರ್, ಹಾರಾರ್, ಸೆಂಟಿಮೆಂಟ್ ಎಲ್ಲಾ ಅಂಶಗಳೂ ಚಿತ್ರದಲ್ಲಿವೆ. ಈ ಚಿತ್ರವನ್ನು ಮುಂದಿನ ತಿಂಗಳು ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.
ನಿರ್ದೇಶಕ ಕಲಿ ಗೌಡ ಕಳೆದ 15 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರಂತೆ. ಈ ಹಿಂದೆ ‘ತನಿಖೆ’ ಎಂಬ ಚಿತ್ರ ನಿರ್ದೇಶಿಸಿದ್ದ ಅವರಿಗೆ ನಿರ್ದೇಶಕನಾಗಿ ಇದು ಎರಡನೇ ಚಿತ್ರ. ‘ನಾಯಿ ನಿಯತ್ತಿನ ಪ್ರಾಣಿ ಎಂದು ಎಲ್ಲರಿಗೂ ಗೊತ್ತು. ಅದು ಬದುಕಿದಾಗಷ್ಟೇ ಅಲ್ಲ. ಸತ್ತ ಮೇಲೂ ಅದರ ನಿಯತ್ತು ಕಡಿಮೆ ಆಗಲ್ಲ ಎಂಬದನ್ನು ನಮ್ಮ ಚಿತ್ರದ ಮೂಲಕ ತೋರಿಸಿದ್ದೇವೆ’ ಎಂದರು.
‘ನಾಯಿ ಇದೆ ಎಚ್ಚರಿಕೆ’ ಚಿತ್ರದಲ್ಲಿ ಡಾ. ಲೀಲಾ ಮೋಹನ್ ಅವರಿಗೆ ದಿವ್ಯಶ್ರೀ ನಾಯಕಿಯಾಗಿ ನಟಿಸಿದ್ದು, ಮಿಕ್ಕಂತೆ ಪ್ರಮೋದ್ ಶೆಟ್ಟಿ, ಬಲಾ ರಾಜ್ವಾಡಿ, ದಿನೇಶ್ ಮಂಗಳೂರು, ನಾಗೇಂದ್ರ ಅರಸ್, ಮಾನಸ, ಚಂದನ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಮ್ಯಾಡ್ ಡಿ ಸಂಗೀತ ಸಂಯೋಜಿಸಿದ್ದಾರೆ.





