ದರ್ಶನ್ ಅಭಿನಯದ ‘ದಿ ಡೆವಿಲ್’ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಸದ್ಯ ಚಿತ್ರತಂಡ ಹಾಡಿನ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದೆ. ಈ ಮಧ್ಯೆ, ಚಿತ್ರತಂಡದಿಂದ ಅಪ್ಡೇಟ್ ಸಿಕ್ಕಿದ್ದು, ಇದೇ ಶನಿವಾರ (ಜುಲೈ 19) ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಲಿದೆ.
‘ದಿ ಡೆವಿಲ್’ ಚಿತ್ರದ ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಿಸುವುದಕ್ಕೆ ಚಿತ್ರತಂಡ ನಿರ್ಧರಿಸಿತ್ತು. ಆದರೆ, ಕೊಲೆ ಆರೋಪದಡಿ ಕಳೆದ ವರ್ಷ ಬಂಧನಕ್ಕೊಳಗಾಗಿದ್ದ ದರ್ಶನ್, ದೇಶ ಬಿಟ್ಟು ಹೋಗದಂತೆ ನ್ಯಾಯಾಲಯವು ಸೂಚಿಸಿತ್ತು. ಆ ನಂತರ ವಿದೇಶಕ್ಕೆ ಹೋಗಿ ಚಿತ್ರೀಕರಣ ಮಾಡುವುದಕ್ಕೆ ನ್ಯಾಯಾಲಯವು ದರ್ಶನ್‍ಗೆ ಕೆಲವೇ ದಿನಗಳ ಹಿಂದಷ್ಟೇ ಅನುಮತಿ ನೀಡಿದೆ. ಅದರಂತೆ ದರ್ಶನ್ ಮತ್ತು ಚಿತ್ರತಂಡದವರು ಥಾಯ್ಲೆಂಡ್‍ನಲ್ಲಿ ಹಾಡಿನ ಚಿತ್ರೀಕರಣ ಮುಗಿಸಿ ವಾಪಸ್ಸಾಗಲಿದ್ದಾರೆ.
‘ದಿ ಡೆವಿಲ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಜೊತೆಜೊತೆಯಾಗಿ ನಡೆಯುತ್ತಿದ್ದು, ಅದೂ ಸಹ ಸದ್ಯದಲ್ಲೇ ಮುಗಿಯುವ ನಿರೀಕ್ಷೆ ಇದೆ. ಚಿತ್ರವು ಇದೇ ವರ್ಷ ಬಿಡುಗಡೆಯಾಗಲಿದೆ ಎಂದು ಚಿತ್ರತಂಡದವರು ಹೇಳಿಕೊಂಡಿದ್ದಾರೆ. ಆದರೆ, ಚಿತ್ರ ಯಾವಾಗ ಬಿಡುಗಡೆ ಎಂದು ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ.
ಚಿತ್ರ ಬಿಡುಗಡೆ ಯಾವಾಗ? ಎಂಬ ಪ್ರಶ್ನೆ ದರ್ಶನ್ ಅಭಿಮಾನಿಗಳಲ್ಲಿ ಇದ್ದು, ಈ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಬಹುಶಃ ಶನಿವಾರ ಬಿಡುಗಡೆಯಾಗಲಿರುವ ಮೋಷನ್ ಪೋಸ್ಟರ್‍ನಲ್ಲಿ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಬಹುದು ಎಂದು ಹೇಳಲಾಗುತ್ತಿದೆ.
‘ದಿ ಡೆವಿಲ್’ ಚಿತ್ರವನ್ನು ಶ್ರೀಮಾತಾ ಕಂಬೈನ್ಸ್ ಬ್ಯಾನರ್ ಅಡಿ ಪ್ರಕಾಶ್ ವೀರ್ ನಿರ್ಮಿಸಿ-ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ದರ್ಶನ್, ರಚನಾ ರೈ, ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ತುಳಸಿ, ಶ್ರೀನಿವಾಸಪ್ರಭು, ಶೋಭರಾಜ್ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಈಗಾಗಲೇ ಬೆಂಗಳೂರು, ಮೈಸೂರು, ರಾಜಸ್ತಾನ ಮುಂತಾದ ಕಡೆಗಳಲ್ಲಿ 60ಕ್ಕೂ ಹೆಚ್ಚು ದಿನಗಳ ಚಿತ್ರೀಕರಣ ಮುಗಿದಿದೆ. ಚಿತ್ರಕ್ಕೆ ಸುಧಾಕರ್ ರಾಜ್ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಸಂಗೀತವಿದೆ.





