Mysore
14
few clouds

Social Media

ಗುರುವಾರ, 22 ಜನವರಿ 2026
Light
Dark

ಹೀರೊ ಆದ ಕಾಕ್ರೋಚ್ ಸುಧೀ: ಶುರುವಾಯ್ತು ‘ಚೈಲ್ಡು’

‘ಸಲಗ’ ಚಿತ್ರದಲ್ಲಿ ‘ಕಾಕ್ರೋಚ್‍’ ಪಾತ್ರದ ಮೂಲಕ ಬಹಳ ಜನಪ್ರಿಯವಾದ ಸುಧಿ, ನೆಗೆಟಿವ್ ಪಾತ್ರದಲ್ಲೇ ಹೆಚ್ಚಾಗಿ ಕಾಣಿಸಿಕೊಂಡವರು. ಹೀಗಿರುವಾಗಲೇ, ಅವರು ಹೊಸ ಚಿತ್ರವೊಂದಕ್ಕೆ ಹೀರೋ ಆಗಿದ್ದಾರೆ. ಸುಧಿ ಅಭಿನಯದ ‘ಚೈಲ್ಡು’ ಎಂಬ ಚಿತ್ರ ಇತ್ತೀಚೆಗೆ ಸೆಟ್ಟೇರಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

ಕಮಲ ಫಿಲಂಸ್ ಲಾಂಛನದಲ್ಲಿ ಚಂದ್ರಶೇಖರ್ ಕೆ ನಿರ್ಮಿಸುತ್ತಿರುವ, ‘ಚೈಲ್ಡು’ ಚಿತ್ರವನ್ನು ಈ ಹಿಂದೆ ‘ಹಫ್ತಾ’ ನಿರ್ದೇಶಿಸಿದ್ದ ಪ್ರಕಾಶ್‍ ಹೆಬ್ಬಾಳ್‍ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ತಾರಾ ಅನುರಾಧ, ಅಶ್ವಿನ್ ಹಾಸನ್, ವಲ್ಲಭ್, ಉದಯ್ ಪ್ರಸನ್ನ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

‘ಚೈಲ್ಡು’ ಕುರಿತು ಮಾತನಾಡುವ ಪ್ರಕಾಶ್, ‘ಈ ಚಿತ್ರದಲ್ಲಿ ಆಕ್ಷನ್, ಕಾಮಿಡಿ, ಸೆಂಟಿಮೆಂಟ್, ಲವ್ ಹೀಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಸಹ ಇವೆ. ಸುಧೀ ಅವರು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿ ನಾಯಕನ ಪಾತ್ರಕ್ಕೆ ‘ಚೈಲ್ಡು’ ಎಂಬ ಶೀರ್ಷಿಕೆ ಸೂಕ್ತ. ರೌಡಿಸಂ ಅಂತಲ್ಲ, ಇದೊಂದು ಕಮರ್ಷಿಯಲ್‍ ಚಿತ್ರ. ನಾಯಕನ ವರ್ತನೆಯನ್ನು ನೋಡಿ ಎಲ್ಲರೂ ಅವನನ್ನು ಚೈಲ್ಡು ಎಂದು ಕರೆಯುತ್ತಿರುತ್ತಾರೆ. ಸುಧಿ ಮಾಡಿದ ಹಿಂದಿನ ಪಾತ್ರಗಳಿಗಿಂತ ಈ ಪಾತ್ರ ವಿಭಿನ್ನವಾಗಿದೆ. ಸುಧಿ ಅವರ ಕಾಮಿಡಿ ಟೈಮಿಂಗ್‍ ಚೆನ್ನಾಗಿದೆ. ಅದನ್ನು ಈ ಚಿತ್ರದಲ್ಲಿ ಬಳಸಿಕೊಂಡು ಬೇರೆ ತರಹದ ಪಾತ್ರ ಸೃಷ್ಟಿಸಿದ್ದೇವೆ. ಬೆಂಗಳೂರು, ಬೀದರ್, ಬಾಗಲಕೋಟೆ ಮುಂತಾದ ಕಡೆ ಚಿತ್ರೀಕರಣ ಮಾಡಲಿದ್ದೇವೆ’ ಎಂದರು.

ಇದನ್ನು ಓದಿ : ‘ಮೋಡ ಮಳೆ ಮತ್ತು ಶೈಲ’ ಜೊತೆಗೆ ಬಂದ ರಕ್ಷಿತ್‍ ತೀರ್ಥಹಳ್ಳಿ

ನಿರ್ದೇಶಕ ಪ್ರಕಾಶ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು ಎಂದ ಸುಧಿ, ‘ಅದಕ್ಕಿಂತ ನೀವು ಈ ಚಿತ್ರದ ನಾಯಕ ಅಂತ ಹೇಳಿದ್ದು ಖುಷಿಯಾಯಿತು‌. ಪ್ರಕಾಶ್‍ ಅವರ ಜೊತೆಗೆ ನಾನು ‘ಕತ್ತಿ’ ಎಂಬ ಚಿತ್ರದಲ್ಲಿ ನಟಿಸಿದ್ದೆ. ಎಂಟ್ಹತ್ತು ದಿನಗಳ ಕಾಲ ಕೆಲಸ ಮಾಡಿದ್ದೆ. ಆಗಲೇ ಅವರು ನನಗೆ ನಿನ್ನನ್ನು ಬರೀ ಎಂಟ್ಹತ್ತು ದಿನಗಳಿಗೆ ಬಳಸಿಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ. ಜೊತೆಗೆ ಇನ್ನಷ್ಟು ಕೆಲಸ ಮಾಡುವ ಎಂದು ಹೇಳಿದ್ದರು.

ಈ ಚಿತ್ರದಲ್ಲಿ ನನಗೆ ತಕ್ಕಂತಹ ಕಥೆಯನ್ನು ನಿರ್ದೇಶಕರು ಮಾಡಿದ್ದಾರೆ. ನಾನೇನು ಆರೇಳು ಅಡಿ ಇಲ್ಲ. ನನ್ನ ಈ ಶರೀರಕ್ಕೆ ಏನೆಲ್ಲಾ ಬೇಕೋ ಅದನ್ನಿಟ್ಟುಕೊಂಡು ಕಥೆ ಮಾಡಿದ್ದಾರೆ. ನನ್ನ ಲುಕ್‍ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸದ್ಯ 12 ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಇದರಿಂದ ಬೇರೆ ಚಿತ್ರಗಳ ಕಂಟಿನ್ಯುಟಿಗೆ ತೊಂದರೆ ಆಗಬಾರದು. ಹಾಗಾಗಿ, ಈ ಚಿತ್ರದಲ್ಲಿ ಇದೇ ರೀತಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದರು.

ಪಾತ್ರಗಳ ವಿಷಯದಲ್ಲಿ ಯಾವುದೇ ಆಯ್ಕೆ ಇಲ್ಲ ಎನ್ನುವ ಸುಧಿ, ‘ನಾನು ಯಾವತ್ತೂ ಆಯ್ಕೆ ಮಾಡಿಕೊಂಡು ಕೆಲಸ ಮಾಡಿಲ್ಲ. ಕೆಲಸ ಸಿಕ್ಕರೆ ಸಾಕು ಎಂದು ಕೆಲಸ ಮಾಡಿದವನು ನಾನು. ಅವರ ‘ಹಫ್ತಾ’ ಚಿತ್ರವನ್ನು ನೋಡಿದ್ದೆ. ಬಹಳ ಚೆನ್ನಾಗಿ ಮಾಡಿದ್ದರು. ಹಾಗಾಗಿಯೇ, ಈ ಚಿತ್ರದಲ್ಲೂ ನಟಿಸುವುದಕ್ಕೆ ಒಪ್ಪಿಕೊಂಡೆ’ ಎಂದರು.

Tags:
error: Content is protected !!