Mysore
21
overcast clouds
Light
Dark

‘ಕಾಂತಾರ’ ನಮಗೆ ದೊಡ್ಡ ಸ್ಫೂರ್ತಿ ಎಂದ ತಮಿಳು ನಟ ವಿಕ್ರಮ್

ತಮಿಳು ನಟ ‘ಚಿಯಾನ್‍’ ವಿಕ್ರಮ್ ಅಭಿನಯದ ‘ತಂಗಲನಾನ್’ ಚಿತ್ರವು ಇದೇ ಆಗಸ್ಟ್ 15ರಂದು ಜಗತ್ತಿನಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಕೆಜಿಎಫ್‍ನಲ್ಲಿ ನಡೆದಿರಬಹುದಾದ ಒಂದು ಕಾಲ್ಪನಿಕ ಕಥೆಯನ್ನು ಚಿತ್ರ ಮಾಡಲಾಗಿದೆ. ಅಂದಹಾಗೆ, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವುದು ಪ. ರಂಜಿತ್. ಈ ಹಿಂದೆ ‘ಕಬಾಲಿ’, ‘ಕಾಲ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ರಂಜಿತ್, ಇದೇ ಮೊದಲ ಬಾರಿಗೆ ವಿಕ್ರಮ್‍ ಅಭಿನಯದ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ.

‘ತಂಗಲಾನ್‍ ಚಿತ್ರದ ಪ್ರಚಾರಕ್ಕೆ ಚಿತ್ರತಂಡ ಇತ್ತೀಚೆಗೆ ಬೆಂಗಳೂರಿಗೆ ಬಂದಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ವಿಕ್ರಮ್‍, ‘ನಾನು ಇದುವರೆಗೂ ‘ಅನ್ನಿಯನ್‍’ ಇರಬಹುದು, ‘ಐ’, ‘ಪಿತಾಮಗನ್‍’, ‘ರಾವಣ್’ ಮುಂತಾದ ಚಿತ್ರಗಳಲ್ಲಿ ವಿಭಿನ್ನವಾದ ಪಾತ್ರಗಳನ್ನು ಮಾಡಿದ್ದೇನೆ. ಆದರೆ, ‘ತಂಗಲಾನ್‍’ ಚಿತ್ರಕ್ಕೆ ಹೋಲಿಸಿದರೆ ಅದು ಶೇ. 8ರಷ್ಟು ಮಾತ್ರ. ಇದು ನನ್ನ ಜೀವನದ ಅತ್ಯಂತ ಕಷ್ಟಕರವಾದ ಚಿತ್ರ. ಪ್ರತಿ ದೃಶ್ಯಕ್ಕೂ ನಾವು ಸಾಕಷ್ಟು ಕಷ್ಟಪಟ್ಟಿದ್ದೇವೆ. ಚಿತ್ರೀಕರಣ ಸಮಯದಲ್ಲಿ ಸಾಕಷ್ಟು ಏಟು ಬಿದ್ದಿವೆ. ರೊಮ್ಯಾಂಟಿಕ್‍ ದೃಶ್ಯಗಳು ಸಹ ಕಷ್ಟವಾಗಿತ್ತು’ ಎಂದರು

ಇದು ವಸಾಹತುಶಾಹಿ ಆಡಳಿತ ಕಥೆಯಾದ ಚಿತ್ರ ಎಂದ ವಿಕ್ರಮ, ‘ಬ್ರಿಟಿಷರ ಕಾಲಘಟ್ಟದ ಕಥೆ ಇದು. 100 ವರ್ಷಗಳ ಹಿಂದೆ, ಬ್ರಿಟಿಷರ ಆಳ್ವಿಕೆ ಸಮಯದಲ್ಲಿ ಏನಾಗಿದ್ದರಿಬಹುದು, ಆಗಿನ ಬುಡಕಟ್ಟು ಜನಾಂಗದವರು ಹೇಗಿದ್ದಿರಬಹುದು ಎಂದು ನಮಗೆ ಗೊತ್ತಿಲ್ಲ. ಹಾಗಾಗಿ, ಯಾವ ದೃಶ್ಯವೂ ಸುಲಭವಾಗಿರಲಿಲ್ಲ. ಇಲ್ಲಿ ನಾವು ಅವರ ತರಹ ನಟನೆ ಮಾಡಬೇಕು ಎಂಬುದಕ್ಕಿಂತ, ಅವರ ತರಹ ಇರಬೇಕಿತ್ತು. ನಿಜಕ್ಕೂ ಈ ಚಿತ್ರಕ್ಕಾಗಿ 100 ವರ್ಷಗಳ ಹಿಂದಕ್ಕೊ ಹೋಗುವಂತಾಯಿತು. ಚಿತ್ರಕ್ಕಾಗಿ ತುಂಬಾ ತೂಕ ಕಳೆದುಕೊಂಡೆ. ದೈಹಿಕವಾಗಿ ಬದಲಾಗುವುದಕ್ಕಿಂತ ಮಾನಸಿಕವಾಗಿ ಬದಲಾಗುವುದು ಬಹಳ ಕಷ್ಟವಾಗಿತ್ತು’ ಎಂದರು.

ಈ ಚಿತ್ರ ‘ಕೆಜಿಎಫ್‍’ಗಿಂತ ಬಹಳ ವಿಭಿನ್ನವಾದ ಚಿತ್ರ ಎಂದ ವಿಕ್ರಮ್, ‘ಬರೀ ಜಾನರ್‍ ಅಷ್ಟೇ ಅಲ್ಲ, ಒಟ್ಟಾರೆ ಪರಿಕಲ್ಪನೆಯೇ ಬೇರೆ. ಇಲ್ಲಿ ಜಾತಿ ಪದ್ಧತಿ, ಅಸ್ಪೃಶ್ಯತೆ, ದಬ್ಬಾಳಿಕೆ ಎಲ್ಲದರ ಬಗ್ಗೆ ಹೇಳಲಾಗಿದೆ. ಚಿತ್ರದ ಪ್ರಮುಖ ವಿಷಯವೆಂದರೆ ಅದು ಹುಡುಕಾಟ. ಇಲ್ಲಿ ನನ್ನ ಪಾತ್ರ ಒಂದು ಹುಡುಕಾಟ ನಡೆಸಿದರೆ, ಮಾಳವಿಕಾ ಪಾತ್ರ ಇನ್ನೊಂದರ ಹುಡುಕಾಟದಲ್ಲಿ ಇರುತ್ತದೆ. ಇವೆಲ್ಲವನ್ನೂ ಚಿನ್ನದ ಹುಡುಕಾಟದ ನೆಪದಲ್ಲಿ ಹೇಳಲಾಗುತ್ತದೆ. ಹಾಗಾಗಿ, ಇದು ಯಾವುದೋ ಒಂದು ಭಾಗ, ಭಾಷೆ ಅಥವಾ ಪ್ರಾಂತ್ಯಕ್ಕೆ ಮಾತ್ರ ಸೀಮಿತವಲ್ಲ. ಇದೊಂದು ಯೂನಿವರ್ಸಲ್ ಆದ ಚಿತ್ರ’ ಎಂದರು.

ತಮಿಳು ಚಿತ್ರವಾಗಿದ್ದ ಇದನ್ನು ಪ್ಯಾನ್ ಇಂಡಿಯಾ ಚಿತ್ರ ಮಾಡುವುದಕ್ಕೆ ರಿಷಭ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ದೊಡ್ಡ ಸ್ಫೂರ್ತಿ ಎಂದ ವಿಕ್ರಮ್, ‘ನಾವು ಈ ಚಿತ್ರದ ಚಿತ್ರೀಕರಣ ಮಾಡುವಾಗ ‘ಕಾಂತಾರ’ ಬಿಡುಗಡೆಯಾಯಿತು. ಈ ಚಿತ್ರವನ್ನು ನಾವು ಹೊರಜಗತ್ತಿಗೆ ಹೇಗೆ ತೆಗೆದುಕೊಂಡು ಹೋಗಬೇಕು ಎಂದು ಯೋಚಿಸುತ್ತಿದ್ದಾಗ, ‘ಕಾಂತಾರ’ ದಾರಿ ತೋರಿಸಿತು. ಮಂಗಳೂರಿನ ಕಥೆಯೊಂದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಬಹುದಾದರೆ, ನಾವು ಯಾಕೆ ಪ್ರಯತ್ನ ಮಾಡಬಾರದು ಎಂದನಿಸಿತು. ಆ ನಿಟ್ಟಿನಲ್ಲಿ ‘ಕಾಂತಾರ’ ನಮ್ಮೆಲ್ಲರಿಗೂ ಸ್ಫೂರ್ತಿಯಾಯಿತು. ಕಂಟೆಂಟ್ ಇದ್ದರೆ ಜಗತ್ತಿನ ಯಾವ ಮೂಲೆಗೆ ಬೇಕಾದರೂ ತೆಗೆದುಕೊಂಡು ಹೋಗಬಹುದು ಎಂದು ಆ ಚಿತ್ರ ತೋರಿಸಿತು’ ಎಂದರು ವಿಕ್ರಮ್.

‘ತಂಗಲಾನ್‍’ ಚಿತ್ರದಲ್ಲಿ ವಿಕ್ರಮ್ ಜೊತೆಗೆ, ಮಾಳವಿಕಾ ಮೋಹನನ್ ಹಾಗೂ ಬ್ರಿಟಿಷ್‍ ನಟ ಡೇನಿಯಲ್‍ ಮುಂತಾದವರು ನಟಿಸಿದ್ದು, ಅವರಿಬ್ಬರೂ ಅಂದು ಹಾಜರಿದ್ದರು.