Mysore
26
clear sky

Social Media

ಗುರುವಾರ, 22 ಜನವರಿ 2026
Light
Dark

‘ಜೋಡೆತ್ತು’ ಜತೆ ಬಂದ ಚಿಕ್ಕಣ್ಣ: ಮೂರು ಭಾಷೆಗಳಲ್ಲಿ ಮಹೇಶ್‍ ಸಿನಿಮಾ

ಚಿಕ್ಕಣ್ಣ ಅಭಿನಯದಲ್ಲಿ ‘ಅಯೋಗ್ಯ’ ಖ್ಯಾತಿಯ ಮಹೇಶ್‍ ಒಂದು ಚಿತ್ರವನ್ನು ನಿರ್ದೇಶಿಸುತ್ತಿದ್ದು, ಆ ಚಿತ್ರವನ್ನು ಸೋಮಶೇಖರ್ (ಕಟ್ಟಿಗೇನಹಳ್ಳಿ) ನಿರ್ಮಿಸುತ್ತಿದ್ದಾರೆ ಎಂಬ ಸುದ್ದಿ ಕೆಲವು ತಿಂಗಳುಗಳ ಹಿಂದೆ ಕೇಳಿಬಂದಿತ್ತು. ಆ ಚಿತ್ರ ಭಾನುವಾರ ಸೆಟ್ಟೇರಿದೆ.

ನಿರ್ದೇಶಕ-ನಿರ್ಮಾಪಕ ಆರ್.ಚಂದ್ರು ಚಿತ್ರದ ಮೊದಲ ದೃಶ್ಯಕ್ಕೆ ಕ್ಯಾಮೆರಾ ಸ್ವಿಚ್‍ ಆನ್‍ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರೆ, ಶರಣ್ ಆರಂಭ ಫಲಕ ತೋರಿಸಿ, ಟೈಟಲ್ ಟೀಸರ್ ಬಿಡುಗಡೆ ಮಾಡಿದರು. ಚಿತ್ರಕ್ಕೆ ‘ಜೋಡೆತ್ತು’ ಎಂಬ ಹೆಸರನ್ನು ಇಡಲಾಗಿದೆ.

ಸದ್ಯ ಚಿಕ್ಕಣ್ಣ ಹಾಗೂ ತೆಲುಗಿನ ಸುನಿಲ್ ಕಾಣಿಸಿಕೊಂಡಿರುವ ಟೈಟಲ್ ಟೀಸರ್ ಹರಿಬಿಡಲಾಗಿದ್ದು, ಡಿ ಬೀಟ್ಸ್ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದೆ. ಕನ್ನಡ ಸೇರಿದಂತೆ ತಮಿಳು ಹಾಗೂ ತೆಲುಗಿನಲ್ಲಿ ಈ ಸಿನಿಮಾ ತಯಾರಾಗುತ್ತಿದ್ದು, ಆಯಾ ಭಾಷೆಯ ಕಲಾವಿದರು ಈ ಸಿನಿಮಾದಲ್ಲಿ ನಟಿಸಲಿದ್ದಾರಂತೆ.

ಇದು 80ರ ದಶಕದ ಕಾಲಘಟ್ಟದ ಸಿನಿಮಾ ಎನ್ನುವ ಚಿಕ್ಕಣ್ಣ, ‘ನಿಜವಾದ ‘ಜೋಡೆತ್ತು’ ಯಾರೆಂಬುದನ್ನು ಸದ್ಯದಲ್ಲೇ ತಿಳಿಸುತ್ತೇವೆ. ಇದು ನನ್ನ ವೃತ್ತಿಜೀವನದಲ್ಲೇ ದೊಡ್ಡ ಬಜೆಟ್‌ನ ಸಿನಿಮಾ. ಹಳ್ಳಿಯಲ್ಲಿ ಶುರುವಾಗಿ ಹಳ್ಳಿಯಲ್ಲೇ ಮುಗಿಯುವ ಸಿನಿಮಾ. ಫ್ಯಾಮಿಲಿ ಸೆಂಟಿಮೆಂಟ್, ಕಾಮಿಡಿ, ಆಕ್ಷನ್ ಎಲ್ಲಾ ಅಂಶಗಳೂ ಕೂಡಿರುವ ಸಿನಿಮಾವಿದು. ನವೆಂಬರ್‌ನಿಂದ ಚಿತ್ರೀಕರಣ ಶುರುವಾಗಲಿದೆ’ ಎಂದರು.

ನಿರ್ದೇಶಕ ಮಹೇಶ್‍ ಮಾತನಾಡಿ, ‘ಈ ಚಿತ್ರದಲ್ಲಿ ಚಿಕ್ಕಣ್ಣ ಅವರ ಪಾತ್ರ ಹಾಗೂ ಗೆಟಪ್ ಎರಡೂ ಭಿನ್ನವಾಗಿದೆ. ಕಥೆಯಲ್ಲಿ ಗಟ್ಟಿತನವಿದೆ. ಇದು ಪಕ್ಕಾ ದೇಸಿ ಸೊಗಡಿನಲ್ಲಿ ತಯಾರಾಗುತ್ತಿರುವ ಸಿನಿಮಾ. ನಾನೂ ಮಂಡ್ಯ ಸೀಮೆಯಿಂದ ಬಂದಿರುವುದರಿಂದ ಅಲ್ಲಿನ ಸೊಗಡನ್ನು ಈ ಸಿನಿಮಾದಲ್ಲಿ ಸಾಧ್ಯವಾದಷ್ಟೂ ಕಟ್ಟಿಕೊಡಲು ಪ್ರಯತ್ನಿಸುತ್ತೇನೆ’ ಎಂದರು.

ಆಕಾಶ್ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರವಿದು. ಈ ಚಿತ್ರಕ್ಕೆ ವಿ.ಹರಿಕೃಷ್ಣ ಐದು ಹಾಡುಗಳನ್ನು ಸಂಯೋಜಿಸಲಿದ್ದಾರೆ. ಸುಧಾಕರ್ ಎಸ್. ರಾಜ್ ‘ಜೋಡೆತ್ತು’ ಛಾಯಾಗ್ರಹಣ ಮಾಡಿದರೆ, ಮಾಸ್ತಿ, ರಾಜಶೇಖರ್ ಹಾಗೂ ರಘು ನಿಡುವಳ್ಳಿ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ.

Tags:
error: Content is protected !!