Mysore
17
overcast clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ಬೆಂಗಳೂರು ಭೂಗತ ಜಗತ್ತಿನ ಸುತ್ತ ‘ಕ್ಯಾಪಿಟಲ್‍ ಸಿಟಿ’…

Capital City’ Explores the Underworld of Bengaluru...

ಈ ಹಿಂದೆ ‘ಜಮಾನ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದ ರಾಜೀವ್‍ ರೆಡ್ಡಿ, ಇದೀಗ ಒಂದು ದೊಡ್ಡ ಗ್ಯಾಪ್‍ನೊಂದಿಗೆ ವಾಪಸ್ಸಾಗಿದ್ದಾರೆ. ಕೋವಿಡ್‍ ಮುಗಿದ ಮೇಲೆ ಅವರ ಅಭಿನಯದಲ್ಲಿ ‘ಕ್ಯಾಪಿಟಲ್‍ ಸಿಟಿ’ ಎಂಬ ಚಿತ್ರ ಪ್ರಾರಂಭವಾಗಿತ್ತು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಜುಲೈ.04ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

20ಕ್ಕೂ ಹೆಚ್ಚು ಸಮಾನ ಮನಸ್ಕರು ಆರಂಭಿಸಿರುವ ಇನಿಫಿನಿಟಿ ಕ್ರಿಯೇಷನ್ಸ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ, ‘ಅಪ್ಪು‌ ಪಪ್ಪು’, ‘ಮಸ್ತ್ ಮಜಾ ಮಾಡಿ’, ‘ನಂದ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಆರ್.ಅನಂತರಾಜು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರ ಬಿಡುಗಡೆಯಾಗುತ್ತಿರುವ ಖುಷಿಯನ್ನು ಇತ್ತೀಚೆಗೆ ಚಿತ್ರತಂಡ ಹಂಚಿಕೊಂಡಿತು.

ಮೊದಲು ಮಾತನಾಡಿದ ಖ್ಯಾತ ನಟ ರವಿಶಂಕರ್, ‘ಈ ಚಿತ್ರದ ಜರ್ನಿ ಚೆನ್ನಾಗಿತ್ತು. ಚಿತ್ರದ ತುಣುಕುಗಳನ್ನು ನೋಡಿದಾಗ ನಾಯಕ ರಾಜೀವ್ ರೆಡ್ಡಿ ಅವರ ಅಭಿನಯ ಬಹಳ ಇಷ್ಟವಾಯಿತು. ನನ್ನದು ಈ ಚಿತ್ರದಲ್ಲಿ ವಿಭಿನ್ನ ಪಾತ್ರ. ಜುಲೈ.4ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

‘ಕ್ಯಾಪಿಟಲ್‍ ಸಿಟಿ’ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಅನಂತರಾಜು, ‘ಇದು ನನ್ನ ನಿರ್ದೇಶನದ 11ನೇ ಚಿತ್ರ. ರವಿಶಂಕರ್ ಅವರು ಬಹಳ ವರ್ಷಗಳ ಪರಿಚಯ. ಆದರೆ, ಅವರ ಜೊತೆಗೆ ಕೆಲಸ ಮಾಡಿರುವುದು ಇದೇ ಮೊದಲು. ಇದೊಂದು ಬೆಂಗಳೂರು ಭೂಗತ ಜಗತ್ತಿನ ಸುತ್ತ ನಡೆಯುವ ಕಥೆ. 90ರ ಕಾಲಘಟ್ಟದ ಕಥೆಯೂ ಹೌದು. ತೊಂದರೆಗೀಡಾದ ನಾಯಕ ಹೇಗೆ ತನ್ನ ಕಷ್ಟವನ್ನು ನಿಭಾಯಿಸಿಕೊಂಡು ಬರುತ್ತಾನೆ ಎನ್ನುವುದೇ ಪ್ರಮುಖ ಕಥಾಹಂದರ. ಆಕ್ಷನ್ ಚಿತ್ರ ಎನಿಸಿದರೂ, ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ.

ಇದೊಂದು ರಿವೆಂಜ್ ಸ್ಟೋರಿ ಎಂದ ನಾಯಕ ರಾಜೀವ್‍ ರೆಡ್ಡಿ, ‘ನಿಮಗೆ ತೊಂದರೆಯಾದಾಗ ನಿಮ್ಮನ್ನು ನೀವು ಹೇಗೆ ಕಾಪಾಡಿಕೊಳ್ಳುತ್ತೀರಾ ಎಂಬುದೇ ಪ್ರಮುಖ ಕಥಾಹಂದರ.‌ ರವಿಶಂಕರ್, ಸುಮನ್ ಮುಂತಾದ ಹಿರಿಯ ಕಲಾವಿದರೊಂದಿಗೆ ಅಭಿನಯಿಸಿದ್ದು ಬಹಳ ಖುಷಿಯಾಗಿದೆ’ ಎಂದರು.

‘ಕ್ಯಾಪಿಟಲ್‍ ಸಿಟಿ’ ಚಿತ್ರದಲ್ಲಿ ರಾಜೀವ್ ರೆಡ್ಡಿ, ಪ್ರೇರಣ, ಸುಮನ್, ರವಿಶಂಕರ್, ಶರತ್ ಲೋಹಿತಾಶ್ವ, ಕೆ.ಎಸ್.ಶ್ರೀಧರ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ನಾಗು ಸಂಗೀತ ಹಾಗೂ ಪ್ರದೀಪ್‍ ಅವರ ಛಾಯಾಗ್ರಹಣವಿದೆ.

Tags:
error: Content is protected !!