Mysore
25
broken clouds

Social Media

ಸೋಮವಾರ, 26 ಜನವರಿ 2026
Light
Dark

ಮೊದಲು ಕನ್ನಡ, ನಂತರ ಬೇರೆ ಭಾಷೆಗಳಲ್ಲಿ ಬರಲಿದ್ದಾನೆ ‘ಬ್ರ್ಯಾಟ್‍’

‘ಡಾರ್ಲಿಂಗ್‍’ ಕೃಷ್ಣ ಅಭಿನಯದ ಮತ್ತು ಶಶಾಂಕ್‍ ನಿರ್ದೇಶನದ ‘ಬ್ರ್ಯಾಟ್‍’ ಚಿತ್ರವು ಪ್ಯಾನ್‍ ಇಂಡಿಯಾ ಚಿತ್ರವಾಗಿ ಅಕ್ಟೋಬರ್‍.31ರಂದು ಬಿಡುಗಡೆಯಾಗಲಿದೆ ಎಂಬ ಸುದ್ದಿ ಮೊದಲಿತ್ತು. ಆದರೆ, ಚಿತ್ರವನ್ನು ಮೊದಲು ಕನ್ನಡದಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ. ನಂತರ ನೋಡಿಕೊಂಡು, ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡುವುದಕ್ಕೆ ತೀರ್ಮಾನಿಸಿದೆ.

ಇತ್ತೀಚೆಗೆ ‘ಬ್ರ್ಯಾಟ್‍’ ಚಿತ್ರದ ಕನ್ನಡ ಅವತರಣಿಕೆಯ ಟ್ರೇಲರ್‍ ಬಿಡುಡೆಯಾಗಿದೆ. ಸುದೀಪ್‍ ಬಂದು ಟ್ರೇಲರ್‍ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಶಾಂಕ್‍, ‘‘ಕೌಸಲ್ಯ ಸುಪ್ರಜಾ ರಾಮ’ ನಂತರ ಅದೇ ತರಹದ ಇನ್ನೊಂದು ಸಿನಿಮಾ ಮಾಡಬಹುದಿತ್ತು, ಅದನ್ನು ಬಿಟ್ಟು ಹೊಸ ಚಾಲೆಂಜ್‍ ತಗೊಂಡಿದ್ದೀವಿ. ನನಗೆ ಯಾವತ್ತೂ ಒಂದು ಜಾನರ್‍ಗೆ ಅಂಟಿಕೊಳ್ಳುವುದಕ್ಕೆ ಇಷ್ಟವಿಲ್ಲ. ಹಾಗಾಗಿ, ಬೇರೆ ತರಹದ ಪ್ರಯತ್ನ ಮಾಡಿದ್ದೃವೆ. ಇದು ಪ್ಯಾನ್‍ ಇಂಡಿಯಾ ಸಿನಿಮಾ ಆದರೂ, ಮೊದಲು ಕನ್ನಡದಲ್ಲಿ ಬಿಡುಗಡೆ ಮಾಡ್ತೀವಿ, ನಂತರ ಬೇರೆ ಭಾಷೆಗಳಲ್ಲಿ ನೋಡಿಕೊಂಡು ಬಿಡುಗಡೆ ಮಾಡ್ತೀವಿ’ ಎಂದರು.

ಇದನ್ನು ಓದಿ: ‘ವೃಷಭ’ಗೆ ಟೈಟಲ್ ಸಮಸ್ಯೆ: ಅಳಲು ತೋಡಿಕೊಂಡ ಚಿತ್ರತಂಡ ತಂಡ

ಈ ಚಿತ್ರವು ನಾಯಕ ಕೃಷ್ಣ ಅವರ ಇಮೇಜ್‍ ಬದಲಾಯಿಸುತ್ತದೆ ಎಂಬ ನಂಬಿಕೆ ಇದೆ ಎನ್ನುವ ಶಶಾಂಕ್‍, ‘‘ಕೃಷ್ಣ ಆರಡಿ ಇದ್ದಾರೆ. ಅವರೊಬ್ಬ ಆ್ಯಕ್ಷನ್‍ ಹೀರೋ. ಅವರು ಯಾವತ್ತೂ ನನಗೆ ರೊಮ್ಯಾಂಟಿಕ್‍ ಹೀರೋ ಆಗಿ ಕಾಣಿಸಲೇ ಇಲ್ಲ, ‘ಲವ್ ಮಾಕ್ಟೇಲ್‍’ ಹಿಟ್‍ ಆಗಿ ಅವರು ರೊಮ್ಯಾಂಟಿಕ್‍ ಹೀರೋ ಆದರು. ‘ಬ್ರ್ಯಾಟ್‍’ ಚಿತ್ರ ಅವರ ಇಮೇಜ್‍ ಸಂಪೂರ್ಣ ಬದಲಾಯಿಸುತ್ತದೆ ಎಂಬ ನಂಬಿಕೆ ಇದೆ’ ಎಂದರು.

ಈ ‘ಬ್ರ್ಯಾಟ್‍’ ಎಂಬ ಪದದಲ್ಲಿರುವ ಒಂದಂಶ ಕೃಷ್ಣನಲ್ಲಿಲ್ಲ ಎನ್ನುವ ಸುದೀಪ್‍, ‘ಕೃಷ್ಣ ಕ್ರಿಕೆಟ್‍ ಆಡುತ್ತಾರೆ, ಊಟ ಮಾಡುತ್ತಾರೆ, ಮನೆಗೆ ಹೋಗುತ್ತಾರೆ. ಅದೂ ಅವರ ಮನಗೇ ಹೋಗುತ್ತಾರೆ. ಅವರಿಗೆ ಯಾವ ಅಭ್ಯಾಸಗಳೂ ಇಲ್ಲ. ನಾವು ಅವರನ್ನು ಕ್ಲೀನ್‍ ಕೃಷ್ಣಪ್ಪ ಎನ್ನುತ್ತೇವೆ. ಅವರನ್ನು ಇಟ್ಟುಕೊಂಡು ಈ ಟೈಟಲ್‍ ಇಡೋದಕ್ಕೆ ಧೈರ್ಯ ಬೇಕು. ಶಶಾಂಕ್‍ ತಮ್ಮ ಸಾಮರ್ಥ್ಯಕ್ಕೆ ತಕ್ಕ ಹಾಗೆ ಇನ್ನೂ ಸಿನಿಮಾ ಮಾಡಿಲ್ಲ. ತಲೆಯಿಂದ ಎಲ್ಲರನ್ನೂ ತೆಗೆದು ಹಾಕಿ, ನಿಮಗೋಸ್ಕರ ಕಥೆ ಬರೆಯಿರಿ. ಅದು ನಿಮ್ಮ ಜೀವನದ ದೊಡ್ಡ ಹಿಟ್‍ ಆಗುತ್ತದೆ’ ಎಂದು ಹಾರೈಸಿದರು.

ಡಾಲ್ಫಿನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಮಂಜುನಾಥ್ ಕಂದಕೂರ್ ನಿರ್ಮಿಸಿರುವ, ಶಶಾಂಕ್ ನಿರ್ದೇಶನದ ‘ಬ್ರ್ಯಾಟ್‍’ ಚಿತ್ರವು ಅಕ್ಟೊಬರ್ 31ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಕೃಷ್ಣಗೆ ನಾಯಕಿಯಾಗಿ ಮನಿಷಾ ಕುಂದುಕೂರು ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಕೃಷ್ಣ ಮತ್ತು ಮನಿಷಾ ಜೊತೆಗೆ ಡ್ರ್ಯಾಗನ್‍ ಮಂಜು, ಅಚ್ಯುತ್‍ ಕುಮಾರ್‍, ರಮೇಶ್‍ ಇಂದಿರಾ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್‍ ಜನ್ಯ ಸಂಗೀತ ಮತ್ತು ಅಭಿಲಾಷ್‍ ಕಲ್ಲತ್ತಿ ಛಾಯಾಗ್ರಹಣವಿದೆ.

Tags:
error: Content is protected !!