ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈ ಸಮಸ್ಯೆಗಳನ್ನು ಚಿತ್ರರಂಗದವರೆಲ್ಲಾ ಒಟ್ಟಾಗಿ ಕುಳಿತು ಚರ್ಚೆ ಮಾಡಿ, ಸಮಸ್ಯೆಗಳಿಗೆ ಇರುವ ಕಾರಣಗಳನ್ನು ಹುಡುಗಿ ಎಂದು ಹಿರಿಯ ಸಾಹಿತಿ ಮತ್ತು ನಿರ್ದೇಶಕ ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದ್ದಾರೆ.
ಡಾ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ಸ್ವಪ್ನ ಮಂಟಪ’ ಚಿತ್ರವು ಇದೇ ಜುಲೈ.25ರಂದು ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ, ರಂಜನಿ ರಾಘವನ್ ಮುಂತಾದವರು ನಟಿಸಿದ್ದು, ಈ ಚಿತ್ರವು ಬರಗೂರರ ಜನಪ್ರಿಯ ಕಾದಂಬರಿಯನ್ನು ಆಧರಿಸಿದೆ.
ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ‘ಹಿಂದೆ ಒಂದು ಚಿತ್ರ ಯಶಸ್ವಿಯಾಗಿ ನೂರು ದಿನಗಳ ಕಾಲ ಪ್ರದರ್ಶನವಾದಾಗ ಒಂದು ಸಂಭ್ರಮವಿತ್ತು. ಈಗ 10 ದಿನಗಳಿಗೆ ಸಂಭ್ರಮವನ್ನು ಆಚರಿಸಲಾಗುತ್ತದೆ. ಆಗ ಒಂದು ಚಿತ್ರ 25-30 ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿತ್ತು. ಈಗ ಏಕಕಾಲಕ್ಕೆ ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತವೆ. ಕೆಲವು ಚಿತ್ರಗಳನ್ನು ಸಾವಿರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಕೇಳಿದ್ದೇನೆ. ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಮೂರ್ನಾಲ್ಕು ದಿನಗಳಲ್ಲಿ ಹಾಕಿದ ಬಂಡವಾಳ ವಾಪಸ್ಸು ಪಡೆಯುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ, 10 ದಿನಕ್ಕೆ ಸಂಭ್ರಮಾಚರಣೆ ಶುರುವಾಗಿದೆ’ ಎನ್ನುತ್ತಾರೆ.
10 ದಿನಕ್ಕೆ ಸಂಭ್ರಮ ಪಡುತ್ತೇವೆ ಎಂದರೆ, ನಮಗೆ ಹಿನ್ನಡೆಯಾಗುತ್ತಿದೆ ಎಂದರ್ಥ ಎನ್ನುವ ಬರಗೂರು, ‘ಈ ಕುರಿತು ನಾವು ಚರ್ಚೆ ಮಾಡುತ್ತಿಲ್ಲ. ಸಂಬಂಧಪಟ್ಟವರು ಕೂತು, ಯಾಕೆ ಹೀಗಾಗುತ್ತಿದೆ ಎಂದು ಚರ್ಚಿಸಬೇಕು. ಕಾರಣಗಳನ್ನು ಹುಡುಕಬೇಕು. ಒಬ್ಬೊಬ್ಬರಿಗೆ ಒಂದೊಂದು ಅಭಿಪ್ರಾಯಗಳಿರುತ್ತವೆ. ಕನ್ನಡ ಚಿತ್ರರಂಗದಲ್ಲಿ ಹಲವು ಸಂಘ-ಸಂಸ್ಥೆಗಳು ಸಕ್ರಿಯವಾಗಿವೆ. ಆ ಸಂಘ-ಸಂಸ್ಥೆಗಳು ಕೂತು ಚರ್ಚಿಸಬೇಕು. ಇದರಲ್ಲಿ ಸರ್ಕಾರವೂ ತೊಡಗಿಸಿಕೊಳ್ಳಬೇಕು. ಅಂತಹ ಚರ್ಚೆಯಿಂದ ಮಾತ್ರ ನಾವು ಎಲ್ಲಿ ಎಡವುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯ’ ಎನ್ನುತ್ತಾರೆ.





