ಈ ವಾರ ಬಿಡುಗಡೆಯಾದ ಆರು ಚಿತ್ರಗಳ ಜೊತೆಗೆ ದೀಕ್ಷಿತ್ ಶೆಟ್ಟಿ ಮತ್ತು ಬೃಂದಾ ಆಚಾರ್ಯ ಅಭಿನಯದ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಚಿತ್ರ ಸಹ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರವು ಒಂದು ವಾರಕ್ಕೆ ಮುಂದಕ್ಕೆ ಹೋಗಿದ್ದು, ನವೆಂಬರ್ 27ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.
ಹೌದು, ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಚಿತ್ರವು ನ.21ರಂದು ಬಿಡುಗಡೆಯಾಗಬೇಕಿತ್ತು. ನಟಿ ಬೃಂದಾ ಆಚಾರ್ಯ ತಮ್ಮ ಎರಡು ಚಿತ್ರಗಳು (‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಮತ್ತು ‘ಮಾರುತ’) ಒಂದೇ ದಿನ ಬಿಡುಗಡೆಯಾಗುತ್ತದೆ ಎಂದು ಖುಷಿಯಿಂದ ಹೇಳಿಕೊಂಡಿದ್ದರು. ಇದು ತಮ್ಮ ವೃತ್ತಿಜೀವನದಲ್ಲೇ ಒಂದು ದಾಖಲೆ ಆಗಲಿದೆ ಎಂದು ಖುಷಿಪಟ್ಟಿದ್ದರು. ಆದರೆ, ತಾಂತ್ರಿಕ ಕಾರಣಗಳಿಂದ ಚಿತ್ರ ಒಂದು ವಾರ ಮುಂದಕ್ಕೆ ಹೋಗಿದೆ. ನ.21ರ ಬದಲು ನ.27ರಂದು ಬಿಡುಗಡೆಯಾಗುತ್ತಿದೆ.
ಇದನ್ನು ಓದಿ: ನವೆಂಬರ್ 21ರಂದು ಎರಡು ಚಿತ್ರಗಳ ಜೊತೆಗೆ ಬರ್ತಿದ್ದಾರೆ ಬೃಂದಾ ಆಚಾರ್ಯ
ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಸಿದ್ಧವಾಗಿರುವ ಈ ಚಿತ್ರವನ್ನು ‘ರಂಗಿ ತರಂಗ’, ‘ಅವನೇ ಶ್ರೀಮನ್ನಾರಾಯಣ’ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ಎಚ್.ಕೆ. ಪ್ರಕಾಶ್ ನಿರ್ಮಿಸಿದ್ದು, ಅಭಿಷೇಕ್ ಎಂ ನಿರ್ದೇಶನ ಮಾಡಿದ್ದಾರೆ. ಅಭಿಷೇಕ್ ಇದಕ್ಕೂ ಮೊದಲು ‘ಸಿಂಪಲ್’ ಸುನಿ ಅವರ ಜೊತೆಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದವರು. ಜೊತೆಗೆ ರಕ್ಷಿತ್ ಶೆಟ್ಟಿ ಹಾಗೂ ಸಚಿನ್ ಶೆಟ್ಟಿ ಸೇರಿ ಪಿನಾಕ ಎಂಬ VFX ಸ್ಟುಡಿಯೋ ಸಹ ನಡೆಸುತ್ತಿದ್ದಾರೆ. ಈಗ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.
‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಚಿತ್ರದಲ್ಲಿ ದೀಕ್ಷಿತ್‍ಗೆ ಮತ್ತು ಬೃಂದಾ ಆಚಾರ್ಯ ಜೊತೆಗೆ, ಉಷಾ ಭಂಡಾರಿ, ಗೋಪಾಲಕೃಷ್ಣ ದೇಶಪಾಂಡೆ, ಶ್ರೀವತ್ಸ, ಅಶ್ವಿನ್ ರಾವ್ ಪಲ್ಲಕ್ಕಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ, ಅಭಿಷೇಕ್ ಜಿ ಕಾಸರಗೋಡು ಛಾಯಾಗ್ರಹಣವಿದೆ.





