ವಿನೋದ್ ಪ್ರಭಾಕರ್ ಅಭಿನಯದ ‘ಮಾದೇವ’ ಇತ್ತೀಚೆಗೆ 25 ದಿನಗಳ ಪ್ರದರ್ಶನ ಕಂಡಿದೆ. ಈ ಮಧ್ಯೆ, ವಿನೋದ್ ಅಭಿನಯದ ‘ಬಲರಾಮನ ದಿನಗಳು’ ಚಿತ್ರದ ಚಿತ್ರೀಕರಣ ಮುಗಿದಿದೆ.
ಇದು ವಿನೋದ್ ಪ್ರಭಾಕರ್ ಅಭಿನಯದ 25ನೇ ಸಿನಿಮಾ, ಕೆ.ಎಂ. ಚೈತನ್ಯ ನಿರ್ದೇಶನದ 10ನೇ ಸಿನಿಮಾ. ಇದೊಂದು 70-80ರ ಕಾಲಘಟ್ಟದ ಚಿತ್ರವಾಗಿದ್ದು, ಆಗಿನ ಕಾಲದ ಭೂಗತಲೋಕದ ಕಥೆಯಾಗಿದೆ. ವಿಶೇಷವೆಂದರೆ, ಕೆ.ಎಂ. ಚೈತನ್ಯ ಅವರ ಮೊದಲ ನಿರ್ದೇಶನದ ‘ಆ ದಿನಗಳು’ ಚಿತ್ರದಲ್ಲಿ ಅತುಲ್ ಕುಲಕರ್ಣಿ ಮತ್ತು ಆಶೀಶ್ ವಿದ್ಯಾರ್ಥಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈಗ ಸುಮಾರು 15 ವರ್ಷಗಳ ನಂತರ ಇಬ್ಬರೂ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ‘ಆ ದಿನಗಳು’ ಖ್ಯಾತಿಯ ಕೆ.ಎಂ. ಚೈತನ್ಯ ನಿರ್ದೇಶಿಸುತ್ತಿದ್ದಾರೆ. ವಿನೋದ್‍ಗೆ ನಾಯಕಿಯಾಗಿ ಪ್ರಿಯಾ ಆನಂದ್ ಅಭಿನಯಿಸುತ್ತಿದ್ದಾರೆ. ಹೆಸರಾಂತ ಕಲಾವಿದರಾದ ಅತುಲ್ ಕುಲಕರ್ಣಿ, ಆಶಿಶ್ ವಿದ್ಯಾರ್ಥಿ, ವಿನಯ್ ಗೌಡ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಸಂತೋಷ್ ನಾರಾಯಣ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ವೇಣು ಛಾಯಾಗ್ರಹಣವಿದೆ.
ಈ ಚಿತ್ರಕ್ಕೆ ಬೆಂಗಳೂರು, ಮೈಸೂರು, ಶಿವಮೊಗ್ಗ, ಸಕಲೇಶಪುರ ಮುಂತಾದ ಕಡೆ 80 ದಿನಗಳ ಚಿತ್ರೀಕರಣ ನಡೆದಿದೆ. ಸದ್ಯದಲ್ಲೇ ಪೋಸ್ಟ್ ಪ್ರೊಡಕ್ಷನ್ ವರ್ಕ್ ಆರಂಭವಾಗಲಿದೆ.





