Mysore
19
clear sky

Social Media

ಬುಧವಾರ, 04 ಮಾರ್ಚ್ 2026
Light
Dark

ಹಿರಿತೆರೆಗೆ ಬೇಬಿ ರೀತು ಸಿಂಗ್‍: ‘ನನ್ನ ಮಗಳೇ ಸೂಪರ್ ಸ್ಟಾರ್‍’ಗೆ ನಾಯಕಿ

Nanna Magale superstar

ಕೆಲವು ವರ್ಷಗಳ ಹಿಂದೆ ‘ನನ್‍ ಮಗಳೇ ಹೀರೋಯಿನ್‍’ ಎಂಬ ಚಿತ್ರ ಕನ್ನಡದಲ್ಲಿ ಬಿಡುಗಡೆಯಾಗಿತ್ತು. ಇದೀಗ, ‘ನನ್ನ ಮಗಳೇ ಸೂಪರ್ ಸ್ಟಾರ್’ ಎಂಬ ವಿಭಿನ್ನ ಹೆಸರಿನ ಚಿತ್ರವೊಂದು ಸದ್ದಿಲ್ಲದೆ ಸೆಟ್ಟೇರಿದೆ. ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಯಾದ ‘ಸೀತಾರಾಮ’ದಲ್ಲಿ ನಟಿಸಿ, ನೋಡುಗರ ಮನ ಗೆದ್ದಿದ್ದ ಬೇಬಿ ರೀತು ಸಿಂಗ್, ‘ನನ್ನ ಮಗಳೇ ಸೂಪರ್ ಸ್ಟಾರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಶೇಷಾದ್ರಿಪುರದ ಎ.ವಿ. ವರದಾಚಾರ್ ಕಲಾಕ್ಷೇತ್ರದಲ್ಲಿ ನೆರವೇರಿತು. ಸಾಹಿತಿ ಬಿ.ಆರ್.ಲಕ್ಷ್ಮಣರಾವ್, ಪರಿಸರ ಪ್ರೇಮಿ ರೇವತಿ ಕಾಮತ್ ಹಾಗೂ ನಿರ್ದೇಶಕ ನಂಜುಂಡೇಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರಕ್ಕೆ ಶುಭ ಕೋರಿದರು. ಹನಿ ಫಿಲಂ ಮೇಕರ್ಸ್ ಲಾಂಛನದಲ್ಲಿ ಎನ್.ಎ.ಶಿವಕುಮಾರ್ (ಕುಮಾರ್ ನೊಣವಿನಕೆರೆ) ನಿರ್ಮಿಸುತ್ತಿರುವ ಈ ಚಿತ್ರವನ್ನು ಆಯುರ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

ಅಪ್ಪ – ಅಮ್ಮನಿಗೆ‌ ತಮ್ಮ ಮಕ್ಕಳು ಸೂಪರ್ ಸ್ಟಾರ್ ಆಗಬೇಕೆಂಬ ಕನಸು. ಜೊತೆಗೆ ತಾವು ಅಂದುಕೊಂಡಂತೆ ಅವರು ಇರಬೇಕು ಎಂಬ ಆಸೆ. ಅದರಲ್ಲೂ ಈ ಸ್ವಭಾವ ತಾಯಿಗೆ ಸ್ವಲ್ಪ ಹೆಚ್ಚು. ಆದರೆ, ಮಕ್ಕಳಿಗೂ ಅವರದೇ ಆಸೆ ಇರುತ್ತದೆ. ತಂದೆ-ತಾಯಿ ತಮ್ಮ ಆಸೆಯನ್ನು ಮಕ್ಕಳ ಮೇಲೆ ಬಲವಂತವಾಗಿ ಹೇರಿದರೆ, ಮಕ್ಕಳು ಏನೆಲ್ಲಾ ತೊಂದರೆ ಅನುಭವಿಸುತ್ತಾರೆ ಎಂಬ ಅಂಶವೇ ಈ ಚಿತ್ರದ ಕಥೆಯಂತೆ.

ಇದುವರೆಗೂ ಸಂಕಲನಕಾರರಾಗಿ ಕೆಲಸ ಮಾಡಿದ್ದ ಆಯುರ್‍ಗೆ ನಿರ್ದೇಶಕರಾಗಿ ಇದು ಮೊದಲ ಚಿತ್ರ. ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಆಯುರ್‍, ‘ಮಕ್ಕಳಿಗೆ ಅವರ ಆಸೆ ಪೂರೈಸುವುದಕ್ಕೆ ಬಿಡಿ ಎಂಬ ಸಂದೇಶ ಈ ಚಿತ್ರದಲ್ಲಿದೆ. ಈ ಚಿತ್ರದಲ್ಲಿ ರಿಯಾಲಿಟಿ ಶೋ ಕಥೆ ಕೂಡ ಇದೆ. ಬೆಂಗಳೂರಿನಲ್ಲೇ 30 ದಿನಗಳ ಚಿತ್ರೀಕರಣ ನಡೆಯಲಿದೆ. ನಮ್ಮ ಚಿತ್ರದಲ್ಲಿ ಮೂರು ಹಾಡುಗಳಿದ್ದು, ಮೂರು ಹಾಡುಗಳನ್ನು ಬಿ.ಆರ್.ಲಕ್ಷ್ಮಣರಾವ್ ಅವರೆ ಬರೆದಿದ್ದಾರೆ. ಕೆವಿನ್ ಸಂಗೀತ ನೀಡಿದ್ದಾರೆ’ ಎಂದರು.

ಇದುವರೆಗೂ ವಿಲನ್ ಪಾತ್ರಗಳಲ್ಲೇ ಹೆಚ್ಚಾಗಿ ಗುರುತಿಸಿಕೊಂಡಿದ್ದ ಚೆಲುವರಾಜು, ಈ ಚಿತ್ರದಲ್ಲಿ ಇದುವರೆಗೂ ಮಾಡದ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರಂತೆ. ಅವರ ಪತ್ನಿಯಾಗಿ ಸಂಭ್ರಮಶ್ರೀ ನಟಿಸುತ್ತಿದ್ದು, ಮಗಳಾಗಿ ರೀತು ಸಿಂಗ್‍ ಅಭಿನಯಿಸುತ್ತಿದ್ದಾರೆ. ಪರಿಸರವಾದಿ ರೇವತಿ ಕಾಮತ್‍ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರಂತೆ.

Tags:
error: Content is protected !!