ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅದೆಷ್ಟು ಬ್ಯುಸಿಯಾಗಿರುತ್ತಾರೆ ಎಂದರೆ, ತಮ್ಮದೇ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭಕ್ಕೂ ಬರುವುದಿಲ್ಲ. ಬಹುಶಃ ‘ಗಾಳಿಪಟ 2’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದೇ ಕೊನೆ. ಆ ನಂತರ ಅವರು ತಮ್ಮ ‘45’ ಚಿತ್ರದ ಪತ್ರಿಕಾಗೋಷ್ಠಿಗೆ ಬಂದಿದ್ದರು. ಮಿಕ್ಕಂತೆ ಅರ್ಜುನ್ ಜನ್ಯ ಅವರನ್ನು ಮಾಧ್ಯಮದವರು ನೋಡಿ ಒಂದು ವರ್ಷವಾಗಿದೆ.
ಅರ್ಜುನ್ ಜನ್ಯ ಬಂದು ತಾವೇ ಸಂಗೀತ ಸಂಯೋಜಿಸಿರುವ ಚಿತ್ರಗಳ ಬಗ್ಗೆ ನಾಲ್ಕು ಮಾತಾಡಿದರೆ, ಚಿತ್ರಕ್ಕೆ ಇನ್ನಷ್ಟು ಪ್ರಮೋಷನ್ ಆಗಬಹುದು ಎಂಬ ಲೆಕ್ಕಾಚಾರ ಚಿತ್ರತಂಡಗಳದ್ದು. ಆದರೆ, ಅರ್ಜುನ್ ಕೈಯಲ್ಲಿ ಹತ್ತಾರು ಚಿತ್ರಗಳಿವೆ, ಮೇಲೆ ‘45’ ಚಿತ್ರದ ನಿರ್ದೇಶನ ಬೇರೆ. ಅವರದ್ದೇ ಕೆಲಸಗಳ ಒತ್ತಡವಿರುವುದರಿಂದ ಅವರು ಬರುವುದೇ ಇಲ್ಲ. ಅವರನ್ನು ನೋಡಬೇಕೆಂದರೆ, ಜೀ ಟಿವಿಯ ಕಾರ್ಯಕ್ರಮಗಳಲ್ಲೇ ನೋಡಬೇಕು, ಇಲ್ಲ ಅವರ ಸ್ಟುಡಿಯೋಗೆ ಹೋಗಬೇಕು. ಮಿಕ್ಕಂತೆ ಅರ್ಜುನ್ ಎಲ್ಲೂ ಬರುವುದಿಲ್ಲ.
ಈಗ್ಯಾಕೆ ಈ ಮಾತು ಎಂದರೆ, ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಮೂರು ಹಾಡುಗಳು ಬಿಡುಗಡೆಯಾಗಿವೆ. ಮೂರೂ ಹಾಡುಗಳನ್ನು ಹಿಟ್ ಆಗಿದೆ ಎಂಬ ಕಾರಣಕ್ಕೆ, ಭಾನುವಾರ ಸಂಜೆ ಆನಂದ್ ಆಡಿಯೋದವರು ಒಂದು ಕಾರ್ಯಕ್ರಮ ಆಯೋಜಿಸಿ ಚಿತ್ರಕ್ಕೆ ಹಾಡಿದ ಗಾಯಕರು ಮತ್ತು ಕಲಾವಿದರಿಗೆ ನೆನಪಿನ ಕಾಣಿಕೆ ನೀಡಿದರು. ಹಾಡುಗಳು ಯಶಸ್ವಿಯಾಗುವುದಕ್ಕೆ ಮುಖ್ಯ ಕಾರಣ ಅರ್ಜುನ್ ಜನ್ಯ. ಆದರೆ, ಈ ಸಮಾರಂಭಕ್ಕೂ ಅವರು ಗೈರಾಗಿದ್ದರು. ಕಾರಣ ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದರಂತೆ.
ಅವರ ಅನುಪಸ್ಥಿತಿಯಲ್ಲಿ ಮಾತನಾಡಿದ ನಿರ್ದೇಶಕ ಶ್ರೀನಿವಾಸರಾಜು, ‘ಅರ್ಜುನ್ ಜನ್ಯ ಅವರು ಮ್ಯಾಜಿಕಲ್ ಕಂಪೋಸರ್ ಎಂಬುದು ಎಲ್ಲರಿಗೂ ಗೊತ್ತಿದೆ. ‘ಕೃಷ್ಣಂ ಪ್ರಣಯ ಸಖಿ’ ಒಂದು ಸಂಗೀತಮಯ ಚಿತ್ರವಾಗಬೇಕು ಎಂಬ ಆಸೆ ನನಗಿತ್ತು. ಆದರೆ, ಹೀಗೇ ಆಗುತ್ತದೆ ಎಂದು ಹೇಳುವುದು ಕಷ್ಟ. ಅರ್ಜುನ್ ಬಹಳ ಬ್ಯುಸಿಯಾಗಿದ್ದಾರೆ. ಅದರ ನಡುವೆಯೂ ನಮಗೆ ಸಮಯ ಕೊಟ್ಟು ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದಾರೆ. ಎಲ್ಲಾ ಹಾಡುಗಳು ಹಿಟ್ ಆಗುತ್ತವೆ ಎಂಬ ನಂಬಿಕೆ ನನಗೆ ಮೊದಲ ದಿನದಿಂದಲೇ ಇತ್ತು. ಅದು ಪ್ರೂವ್ ಆಗಿದೆ’ ಎಂದು ಅರ್ಜುನ್ ಜನ್ಯ ಅವರಿಗೆ ಧನ್ಯವಾದ ತಿಳಿಸಿದರು.
‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಹಾಡುಗಳ ಬಗ್ಗೆ ಮಾತನಾಡಿದ ಗಣೇಶ್, ‘ಚಿತ್ರದ ಹಾಡುಗಳು ಹಿಟ್ ಆಗಿವೆ ಅಂತ ಆನಂದ್ ಆಡಿಯೋದವರು ಈ ಕಾರ್ಯಕ್ರಮ ಮಾಡುತ್ತಿದ್ದಾರೆ. ಇತ್ತೀಚೆಗೆ, ಆಡಿಯೋ ಹಿಟ್ ಆಗುವುದು ಬಹಳ ಕಡಿಮೆ. ಮೂರನೇ ಹಾಡು ಯಶಸ್ವಿಯಾದಾಗ ಯಾಕೆ ಇಂಥದ್ದೊಂದು ಕಾರ್ಯಕ್ರಮ ಮಾಡಬಾರದು ಎಂದು ಆನಂದ್ ಆಡಿಯೋದವರು ಈ ಸಮಾರಂಭ ಮಾಡಿದ್ದಾರೆ. ಹಾಡುಗಳು ಯಶಸ್ವಿಯಾಗಿರುವ ಸಂಪೂರ್ಣ ಕ್ರೆಡಿಟ್ ಅರ್ಜುನ್ ಜನ್ಯ ಮತ್ತು ನಿರ್ದೇಶಕ ಶ್ರೀನಿವಾಸರಾಜು ಅವರಿಗೆ ಸಲ್ಲಬೇಕು’ ಎಂದರು.