ತಮಿಳಿನ ಖ್ಯಾತ ಜನಪದ ಗಾಯಕ ಮತ್ತು ಕನ್ನಡದಲ್ಲಿ ‘ಟಗರು ಬಂತು ಟಗರು’, ‘ಸೂರಿ ಅಣ್ಣಾ’ ಮುಂತಾದ ಜನಪ್ರಿಯ ಹಾಡುಗಳನ್ನು ಹಾಡಿರುವ ಅ್ಯಂಟೋನಿ ದಾಸನ್ ಈಗ ಕನ್ನಡದಲ್ಲಿ ಇನ್ನೊಂದು ಹಾಡನ್ನು ಹಾಡಿದ್ದಾರೆ. ಈ ಬಾರಿ ಅವರು ‘ಪೌಡರ್’ ಚಿತ್ರಕ್ಕೆ ‘ಪರಪಂಚವೇ ಘಮ ಘಮ’ ಎಂಬ ಹಾಡನ್ನು ಹಾಡಿದ್ದು, ಈ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ.
ಸಾಮಾನ್ಯವಾಗಿ ಆ್ಯಂಟೋನಿ ದಾಸನ್ ಅವರ ಹಾಡುಗಳು ಎಂದರೆ ಅದು ಮಾಸ್ ಹಾಡಾಗಿರುತ್ತದೆ ಎಂಬ ನಂಬಿಕೆ ಕೇಳುಗರಲ್ಲಿದೆ. ಆದರೆ, ಇದೇ ಮೊದಲ ಬಾರಿಗೆ ‘ಪೌಡರ್’ ಚಿತ್ರದ ಈ ಲಯ ಪ್ರಧಾನ ಗೀತೆಗೆ ದಾಸನ್ ಧ್ವನಿಯಾಗಿರುವುದು ವಿಶೇಷ.
KRG ಸ್ಟುಡಿಯೋಸ್ ಮತ್ತು TVF ಮೋಷನ್ ಪಿಕ್ಚರ್ಸ್ ಜಂಟಿಯಾಗಿ ನಿರ್ಮಿಸಿರುವ ಚಿತ್ರ ‘ಪೌಡರ್’. ಕಳೆದ ವರ್ಷದ ವರಮಹಾಲಕ್ಷ್ಮೀ ಹಬ್ಬಕ್ಕೆ ಚಿತ್ರ ಪ್ರಾರಂಭವಾಗಿತ್ತು. ಮೊದಲು ಏಪ್ರಿಲ್ ಬಿಡುಗಡೆ ಎಂದು ಹೇಳಲಾಗಿತ್ತಾದರೂ, ಈಗ ಅಂತಿಮವಾಗಿ ಆಗಸ್ಟ್ 23ಕ್ಕೆ ರಾಜ್ಯಾದ್ಯಮತ ಬಿಡುಗಡೆಯಾಗುತ್ತಿದೆ.
ಇದೊಂದು ಕಾಮಿಡಿ ಚಿತ್ರವಾಗಿದ್ದು, ಇಬ್ಬರು ಯುವಕರು ಒಂದು ನಿಗೂಢವಾದ ‘ಪೌಡರ್’ ಪ್ರಭಾವದಿಂದಾಗಿ ಧಿಡೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಇವೆಲ್ಲವನ್ನೂ ಚಿತ್ರದಲ್ಲಿ ತಮಾಷೆಯಾಗಿ ತೋರಿಸಲಾಗಿದೆ. ಈ ಪೌಡರ್‍ನಿಂದ ಅವರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಯುತ್ತದಾ? ಅವರ ಎಲ್ಲಾ ಕನಸುಗಳು ನನಸಾಗುವುದೇ? ಎಂಬುದು ಚಿತ್ರದ ಸಾರಾಂಶ.
ಈ ಹಿಂದೆ ‘ಗುಳ್ಟು’ ಚಿತ್ರವನ್ನು ನಿರ್ದೇಶಿಸಿದ್ದ ಜನಾರ್ದನ್ ಚಿಕ್ಕಣ್ಣ, ಈ ಚಿತ್ರವನ್ನು ನಿರ್ದೇಶಿಸಿದ್ದು, ದೀಪಕ್ ವೆಂಕಟೇಶನ್ ಕಥೆ ರಚಿಸಿದ್ದಾರೆ. ಚಿತ್ರದಲ್ಲಿ ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಅನಿರುದ್ಧ್ ಆಚಾರ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ.