Mysore
23
overcast clouds

Social Media

ಭಾನುವಾರ, 26 ಜುಲೈ 2026
Light
Dark

ಮುಚ್ಚುತ್ತಿರುವ ಚಿತ್ರಮಂದಿರ

ಮಧುಕರ ಎಂ.ಎಲ್.

ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ ಬಂದಾಗ ಬೆಳ್ಳಿ ಪರದೆಗೆ ಜನ ಪೂಜೆ ಮಾಡಿದ್ದೂ ಉಂಟು. ಹೊಸ ಕಥಾ ಹಂದರದ ಚಿತ್ರಗಳು ನಾಯಕ ನಾಯಕಿಯರನ್ನು ಸೃಷ್ಟಿ ಮಾಡಿದಾಗ ಅಭಿಮಾನಿಗಳು ಹುಟ್ಟಿಕೊಂಡರು. ಪಿಚ್ಚರ್ ಎಂಬುದೇ ಕನಸು. ಅಂತಹ ಕನಸನ್ನು ಕಟ್ಟಿ ಕೊಡುವ ಟಾಕೀಸು ನಮಗೆ ರಮ್ಯ ತಾಣವಾಗಿತ್ತು.

ಅದರ ಎದುರಿಗಿನ ಅಂಗಡಿಗಳು ಅಲ್ಲಿ ಸಿಗುವ ತಿಂಡಿಗಳೂ, ಹೋಟೆಲ್‌ನ ಮಸಾಲೆ ದೋಸೆ, ಕಡ್ಲೆಪುರಿ ಹೀಗೆ ಹತ್ತು ತಿನಿಸುಗಳು ನಮಗೆ ಬಾಯಿ ನೀರು ಬರಿಸುತ್ತಿದ್ದವು. ಕುಟುಂಬ ಸಮೇತರಾಗಿ ಬಂದು ನೋಡುವ ಸಿನಿಮಾಗಳು ಬಂದಾಗ ಎತ್ತಿನ ಗಾಡಿಯಲ್ಲಿ ಕುಟುಂಬ ಸಮೇತರಾಗಿ ಬಂದು ಆ ಸಾಂಸಾರಿಕ ಚಿತ್ರವನ್ನು ತಮ್ಮದೇ ಕಥೆ ಎನ್ನುವಂತೆ ನೋಡುತ್ತಿದ್ದರು. ಕಣ್ಣೀರು ಬರಿಸುವುದು, ಆ ಚಿತ್ರದ ಕೇಡಿ ಪಾತ್ರಧಾರಿಯ ಕಂಡು ‘ಈ ಮಗ ಯಾವ ಪಿಚ್ಚರಲ್ಲೂ ಹಿಂಗೆ ಮಾಡುತ್ತಾನೆ’ ಎಂದು ಆ ಪಾತ್ರಕ್ಕೆ ಶಾಪ ಹಾಕುವುದು ಮತ್ತು ನಾಯಕ ನಾಯಕಿಯರ ಪಾತ್ರಕ್ಕೆ ಲೊಚಗುಟ್ಟುವುದು ಹೆಂಗಸರ ವಾಡಿಕೆಯಾಗಿತ್ತು.

ಇನ್ನು ಅಭಿಮಾನಿಗಳು ತಮ್ಮ ನೆಚ್ಚಿನ ಹೀರೋ ಚಿತ್ರಗಳು ಬಂದಾಗ ಆ ನಾಯಕನ ವಿವಿಧ ಬಗೆಯ ಪಿಕ್ಚರ್, ಫೋಟೋಗಳನ್ನು ಕತ್ತರಿಸಿ ಅಂಟಿಸಿ ಮಾಡಿದ ಸ್ಟಾರ್‌ಗಳನ್ನು ಎತ್ತಿನ ಗಾಡಿಯಲ್ಲಿ ಇಟ್ಟುಕೊಂಡು ಮೆರವಣಿಗೆ ಮಾಡಿ ಚಿತ್ರಮಂದಿರದ ತುಂಬಾ ಕಟ್ಟುವುದು ಒಂದು ರೀತಿಯ ಸಂಭ್ರಮವಾಗಿತ್ತು. ಹಾಗೇ ಮೆರವಣಿಗೆ ಮಾಡಿಕೊಂಡು ಬಂದ ಗುಂಪುಗಳಿಗೆ ಕೇಳಿದ್ದಷ್ಟು ಟಿಕೆಟ್ ಕೊಡುವ ರೂಢಿ ಇತ್ತು. ಇತ್ತೀಚಿನ ದಿನಗಳಲ್ಲಿ ಫ್ಲೆಕ್ಸ್ ಗಳು ತುಂಬಿರುತ್ತವೆ. ತಮ್ಮ ನಾಯಕನ ಜೊತೆಗೆ ತಮ್ಮ ಫೋಟೋದೊಂದಿಗೆ ಹಾಗೆಯೇ ಕ್ಯೂ ನಿಂತು ಟಿಕೆಟ್ ಪಡೆಯುವುದು ಒಂದು ಸಾಹಸವಾಗಿತ್ತು. ಪರಿಚಯದ ಅಭಿಮಾನಿಗಳು ಟಿಕೆಟ್ ಕೊಡಿಸುತ್ತಿದ್ದರು ಮತ್ತು ಕ್ಯೂ ನಲ್ಲಿ ನಿಂತಾಗ ಪಿಚ್ಚರ್ ನೋಡಿದವರು ಹಾಡುಗಳ ಬಗ್ಗೆ ಪೈಟ್‌ಗಳ ಬಗ್ಗೆ, ಹೇಳುತ್ತಿದ್ದರು. ಆ ನೂಕಾಟದಲ್ಲಿ ಅಂಗಿ ಹರಿದು ಹೋಗಿದ್ದು, ಗಾಯವಾಗಿದ್ದು ಗೊತ್ತೇ ಆಗುತ್ತಿರಲ್ಲಿಲ್ಲ. ಟಾಕೀಸಿನ ಮುಂದೆ ಹಲವಾರು ಚಟುವಟಿಕೆಗಳು ನಮ್ಮ ನೆನಪಿಗೆ ಸಾಕ್ಷಿಯಾಗಿವೆ.

ಹುಡುಗರಾದ ನಮಗೆ ಟಿಕೆಟ್‌ಗೆ ಕಾಸು ಹೊಂದಿಸುವುದು ಸಾಕಾಗಿತ್ತು. ಯಾರದೋ ತೆಂಗಿನ ತೋಟದಲ್ಲಿ ಕಾಯಿ ಕದ್ದು ಮಾರಿ ಗಾಂಧಿ ಕ್ಲಾಸಿಗೆ ತಿಂಡಿಗೆ ಕಾಸನ್ನು ಸರಿ ಮಾಡಿಕೊಳ್ಳುತ್ತಿದ್ದೆವು. ಸಂಜೆ ಶೋಗೆ ಮೊದಲು ಬಂದು ಟಾಕೀಸಿನ ಎದುರಿಗೆ ನಿಂತು ರಾತ್ರಿಯ ನಿಶ್ಶಬ್ದದ ಸಮಯದಲ್ಲಿ ಕಥೆ ಕೇಳುತ್ತಿದ್ದೆವು. ಸಂಜೆ ಶೋ ಶುರುವಾದ ನಂತರ ಟಾಕೀಸಿನ ಬಾಗಿಲು ತೆಗೆಯುತ್ತಿದ್ದರು. ಇಂಟರ್ವಲ್‌ನಲ್ಲಿ ನಾವು ಹೇಗೋ ಟಾಕೀಸಿನ ಒಳಗೆ ಸೇರುತ್ತಿದ್ದೆವು, ಸೈಕಲ್ ಸ್ಟ್ಯಾಂಡ್ ನಮ್ಮ ಅಡಗುತಾಣವಾಗಿತ್ತು ಮತ್ತು ಆಚೆ ನಿಂತು ಡೈಲಾಗ್ ಕೇಳಿ ನಾವು ನಟರಂತೆ ನಾಟಕ ಮಾಡುತ್ತಿದ್ದೆವು. ಟಾಕೀಸು ಕೂಡ ಒಂದು ರೀತಿಯ ಕಲಿಕೆಯ ಶಾಲೆಯಾಗಿತ್ತು. ಪ್ರೇಮಿಗಳಿಗೆ ಅವರ ಭೇಟಿ ತಾಣವಾಗಿತ್ತು. ಆ ಪಿಚ್ಚರ್‌ನ ಜೋಡಿಯಂಗೆ ಇರಬೇಕು ಎಂದು ಆಣೆ ಭಾಷೆ ಮಾಡಿಕೊಳ್ಳುವುದಕ್ಕೆ ಈ ಟಾಕೀಸುಗಳು ಸಾಕ್ಷಿಯಾಗಿರುತ್ತಿದ್ದವು.

ನಾನು ಈ ಯಳಂದೂರಿಗೆ ಬಂದು ಸುಮಾರು ಹದಿನೆಂಟು ವರ್ಷಗಳಾಯಿತು. ಮುಚ್ಚಿರುವ ಮಹದೇಶ್ವರ ಚಿತ್ರ ಮಂದಿರ ನೋಡಿದಾಗ ನಮ್ಮೂರಿನ ಚಿತ್ರಮಂದಿರಗಳೇ ಕಣ್ಮುಂದೆ ಬರುತ್ತವೆ. ಹಲವಾರು ನೆನಪಿಗೆ ಸಾಕ್ಷಿಯಾದ ಟಾಕೀಸುಗಳ ಟಾಕ್ ನಿಂತಿದೆ. ಎಂದು ಮನಸ್ಸು ಯೋಚನೆ ಮಾಡುತ್ತ ಖಾಲಿಯಾದ ಟಿಕೆಟ್ ಕೌಂಟರ್‌ನೊಮ್ಮೆ ದಿಟ್ಟಿಸಿ ನೋಡಿದೆ

” ಯಳಂದೂರಿನ ಮಹದೇಶ್ವರ ಚಿತ್ರಮಂದಿರಕ್ಕೆ ಸುಮಾರು ೫೦ ವರ್ಷಕ್ಕೂ ಹೆಚ್ಚು ಇತಿಹಾಸವಿದೆ. ಆದರೆ ಇಂದಿಗೂ ಕೂಡ ಯಾವುದೇ ಬಿರುಕಿಲ್ಲದೇ ನಿಂತಿರುವ ಈ ಟಾಕೀಸಿನ ಬಾಗಿಲು ಮಾತ್ರ ಖಾಯಮ್ಮಾಗಿ ಮುಚ್ಚಿದೆ”

 

 

Tags:
error: Content is protected !!