ಮದುವೆಯಾಗಿ ಗಂಡ-ಮನೆ-ಮಕ್ಕಳು ಎಂದು ಬ್ಯುಸಿಯಾಗಿದ್ದ ಅಮೂಲ್ಯ, ಇದೀಗ ಮತ್ತೆ ನಟನೆಗೆ ಮರಳಿದ್ದಾರೆ. 2017ರಲ್ಲಿ ಬಿಡುಗಡೆಯಾದ ‘ಮುಗುಳು ನಗೆ’ ಚಿತ್ರದಲ್ಲೊಂದು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇ ಕಡಿಮೆ. ಆ ನಂತರ ಅಮೂಲ್ಯ ಯಾವುದೇ ಚಿತ್ರದಲ್ಲೂ ನಟಿಸಿರಲಿಲ್ಲ. ಇದೀಗ ಅವರು ‘ಪೀಕಬೂ’ ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಅಂದಹಾಗೆ, ಅಮೂಲ್ಯ ಅವರನ್ನು ವಾಪಸ್ಸು ಕರೆತರುತ್ತಿರುವುದು ನಿರ್ದೇಶಕ ಮಂಜು ಸ್ವರಾಜ್. ಸದ್ಯ, ‘ಸರಳ ಸುಬ್ಬರಾವ್’ ಎಂಬ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವ ಮಂಜು ಸ್ವರಾಜ್, ದಶಕದ ಹಿಂದೆ ‘ಶ್ರಾವಣಿ ಸುಬ್ರಹ್ಮಣ್ಯ’ ಚಿತ್ರವನ್ನು ನಿರ್ದೇಶಿಸಿದ್ದರು. ಗಣೇಶ್ ಮತ್ತು ಅಮೂಲ್ಯ ಅಭಿನಯದ ಈ ಚಿತ್ರವು ಶತದಿನ ಕಂಡಿತ್ತು.
ಇದನ್ನು ಓದಿ: ಮೂರ್ನಾಲ್ಕು ವರ್ಷಗಳ ನಂತರ ಕೃಷ್ಣ ಡ್ಯಾನ್ಸ್ ಮಾಡಿದ ಹಾಡೊಂದು ಬಿಡುಗಡೆ
ಇದೀಗ ಅಮೂಲ್ಯ ಅವರನ್ನು ಪುನಃ ಚಿತ್ರರಂಗಕ್ಕೆ ಕರೆತರುತ್ತಿದ್ದಾರೆ ಮಂಜು ಸ್ವರಾಜ್. ಭಾನುವಾರ, ಅಮೂಲ್ಯ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ‘ಪೀಕಬೂ’ ಚಿತ್ರದ ಘೋಷಣೆಯಾಗಿದೆ. ಹೊಸ ಟೀಸರ್ ಬಿಡುಗಡೆ ಮಾಡುವ ಮೂಲಕ ಈ ಚಿತ್ರದ ಘೋಷಣೆಯಾಗಿದೆ. ಚಾರ್ಲಿ ಚಾಪ್ಲಿನ್ ಶೈಲಿಯಲ್ಲಿ ಅಮೂಲ್ಯ ನೃತ್ಯ ಮಾಡುವ ಸನ್ನಿವೇಶಗಳು ಈ ಟೀಸರ್‍ನಲ್ಲಿದ್ದು, ವಿ. ನಾಗೇಂದ್ರ ನೃತ್ಯ ನಿರ್ದೇಶನ ಮಾಡಿದ್ದಾರೆ.
‘ಪೀಕಬೂ’ ಎಂದರೆ ಕಣ್ಣಾಮುಚ್ಚಾಲೆ ಎಂದರ್ಥ. ಕಮರ್ಷಿಯಲ್ ಅಂಶಗಳ ಜೊತೆಗೆ ಸಂದೇಶವಿರುವಂತಹ ಚಿತ್ರವಿದು. ಈ ಚಿತ್ರದಲ್ಲಿ ಅಮೂಲ್ಯ ನಾಯಕಿಯಾಗಿ ನಟಿಸುತ್ತಿದ್ದು, ನಾಯಕ ಯಾರು ಎಂಬ ವಿಷಯವನ್ನು ಚಿತ್ರತಂಡ ಬಹಿರಂಗಗೊಳಿಸಿಲ್ಲ. ಈ ಚಿತ್ರಕ್ಕೆ ಸುರೇಶ್ ಬಾಬು ಛಾಯಾಗ್ರಹಣ ಮತ್ತು ವೀರ್ ಸಮರ್ಥ್ ಸಂಗೀತವಿದೆ.
‘ಪೀಕಬೂ’ ಚಿತ್ರವನ್ನು ಶ್ರೀ ಕೆಂಚಾಂಬಾ ಫಿಲಂಸ್ ಅಡಿಯಲ್ಲಿ ಗಣೇಶ್ ನಿರ್ಮಾಣ ಮಾಡುತ್ತಿದ್ದಾರೆ.





