‘ನನ್ ಮಗಳೇ ಹೀರೋಯಿನ್’, ‘ಎಂ.ಆರ್.ಪಿ’ ಚಿತ್ರಗಳನ್ನು ನಿರ್ದೇಶಿಸಿದ್ದ ಎಸ್.ಕೆ.ಬಾಹುಬಲಿ ಇದೀಗ ಅಜೇಯ್ ರಾವ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪಿ.ಕೆ. ಪ್ರೊಡಕ್ಷನ್ಸ್ ಮೂಲಕ ನಿರ್ಮಾಪಕ ಕಿರಣ್ ಅವರು ಮೊದಲ ಬಾರಿಗೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು.
ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಬಾಹುಬಲಿ ಕಥೆ, ಚಿತ್ರಕಥೆ ಬರೆದಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಬಾಹುಬಲಿ, ‘ಇದೊಂದು ಫ್ಯಾಮಿಲಿ ಥ್ರಿಲ್ಲರ್. ಚಿತ್ರದಲ್ಲಿ ರಾಷ್ಟ್ರೀಯ ಮಟ್ಟದ ಕಥೆ ಇದೆ. ಇದೊಂದು ಮಧ್ಯಮ ವರ್ಗದ ಕುಟುಂಬದ ಕಥೆ ಇದೆ. ಚಿತ್ರದಲ್ಲಿ ಅಜೇಯ್ ಅವರಿಗೆ ನಾಯಕಿಯಾಗಿ ಮಲೈಕಾ ವಸುಪಾಲ್ ಇದ್ದಾರೆ’ ಎಂದು ಮಾಹಿತಿ ನೀಡಿದರು.
ಸಾಮಾನ್ಯವಾಗಿ ಲವ್ವರ್ ಬಾಯ್ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಅಜೇಯ್ ರಾವ್, ಈ ಚಿತ್ರದಲ್ಲಿ ನಾಲ್ಕು ಶೇಡ್‍ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಪೈಕಿ ಒಂದರಲ್ಲಿ ಬೋಳು ತಲೆಯ ಲುಕ್‍ನಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಅದರ ಕುರಿತು ಮಾತನಾಡುವ ಬಾಹುಬಲಿ, ‘ಈ ಲುಕ್‍ಗಾಗಿ ಅಜೇಯ್ ತಲೆ ಬೋಳಿಸಿದ್ದಾರಾ? ಎಂದು ಹಲವರು ಕೇಳಿದರು. ಇಲ್ಲ, ಅದೊಂದು ವಿಗ್. ಅಳತೆ ತೆಗೆದುಕೊಂಡು, ಮುಂಬೈನಲ್ಲಿ ವಿಗ್ ಮಾಡಿಸಿದ್ದೇವೆ. ‘ಜವಾನ್’ ಚಿತ್ರದಲ್ಲಿ ಶಾರುಖ್ ಖಾನ್‍ಗೆ ವಿಗ್ ಮಾಡಿಕೊಟ್ಟವರೇ, ನಮ್ಮ ಚಿತ್ರಕ್ಕೂ ಮಾಡುತ್ತಿದ್ದಾರೆ. ಈ ಮೇಕಪ್‍ಗೆ ಐದು ತಾಸು ತಗಲುತ್ತದೆ. ಎಸಿಯಲ್ಲೇ ಕೆಲಸ ಮಾಡಬೇಕು. ಬೆವರು ಬಂದರೆ ವಿಗ್ ಹಾಳಾಗುತ್ತದೆ. ಈ ವಿಗ್ ಎರಡು ದಿನ ಮಾತ್ರ ಇರುತ್ತದೆ. ಈ ಗೆಟಪ್‍ನಲ್ಲಿ 10ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಬೇಕಾಗುತ್ತದೆ’ ಎಂದರು.
ಮನರಂಜನೆಯ ಸುದ್ದಿ ಮಿಸ್ ಆಗಲ್ಲ ಇಲ್ಲಿ..
ಅಜೇಯ್ ರಾವ್ ಮಾತನಾಡಿ, ’ಯುದ್ದಕಾಂಡ’ ಚಿತ್ರೀಕರಣ ಸಮಯದಲ್ಲಿ ಬಾಹುಬಲಿ ಬಂದು ಈ ಕಥೆ ಹೇಳಿದರು. ಕೇಳಿದ ಕೂಡಲೇ ಇಷ್ಟವಾಯ್ತು. ಏನೋ ಒಂದು ಸಾಧನೆ ಮಾಡಬೇಕೆಂದು ಹೊರಟಾಗ ಆತ ಏನೆಲ್ಲಾ ಎದುರಿಸಬೇಕಾಗುತ್ತದೆ ಎಂಬುದನ್ನು ಈ ಸಿನಿಮಾ ಮೂಲಕ ಬಾಹುಬಲಿ ಅವರು ಹೇಳ ಹೊರಟಿದ್ದಾರೆ’ ಎಂದರು.
ಈ ಹೆಸರಿಡದ ಚಿತ್ರಕ್ಕೆ ಯೋಗಾನಂದ್ ಮುದ್ದಾನ್ ಸಂಭಾಷಣೆ, ಅರ್ಜುನ್ ಜನ್ಯ ಸಂಗೀತ, ಸುಜ್ಞಾನ್ ಛಾಯಾಗ್ರಹಣ ಮತ್ತು ಕೆ.ಎಂ. ಪ್ರಕಾಶ್ ಅವರ ಸಂಕಲನವಿದೆ.





