Mysore
15
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

`ಯುದ್ಧಕಾಂಡ’ 100 ದಿನ ಓಡುತ್ತದೆ ಎಂಬ ನಂಬಿಕೆ ಇದೆ: ಅಜೇಯ್‍ ರಾವ್‍

ajai rao yuddhakanda film box office collection

ಅಜೇಯ್‍ ರಾವ್‍ ಅಭಿನಯದ ಮತ್ತು ನಿರ್ಮಾಣದ ‘ಯುದ್ಧಕಾಂಡ’ ಚಿತ್ರದ ಗಳಿಕೆ ಕುಸಿದಿದೆ. ಮೊದಲ ಮೂರು ದಿನ ಒಳ್ಳೆಯ ಪ್ರದರ್ಶನ ಕಂಡ ಚಿತ್ರವು ಸೋಮವಾರದ ನಂತರ ಸ್ವಲ್ಪ ತಣ್ಣಗಾಗಿದೆ. ಆದರೆ, ಚಿತ್ರ ನೋಡಿದವರೆಲ್ಲರೂ ಒಳ್ಳೆಯ ಮಾತುಗಳನ್ನಾಡುತ್ತಿರುವುದು ಖುಷಿಯಾಗುತ್ತಿದೆ ಎಂದು ಅಜೇಯ್‍ ಹೇಳಿಕೊಂಡಿದ್ದಾರೆ.

‘ಯುದ್ಧಕಾಂಡ’ ಚಿತ್ರದ ಕುರಿತು ಮಾತನಾಡಲು ಅಜೇಯ್‍ ತಮ್ಮ ತಂಡದವರೊಂದಿಗೆ ಮಾಧ್ಯಮದವರೆದುರು ಬಂದಿದ್ದರು. ಈ ಸಂದರ್ಭದಲ್ಲಿ ನಿರ್ದೇಶಕ ಪವನ್‍, ಸಂಕಲನಕಾರ ಶ್ರೀ, ಅರ್ಚನಾ ಜೋಯಿಸ್‍, ಪ್ರಕಾಶ್‍ ಬೆಳವಾಡಿ ಮುಂತಾದವರು ಹಾಜರಿದ್ದರು.

ಮೊದಲು ಮಾಧ್ಯಮದವರಿಗೆ ಧನ್ಯವಾದ ತಿಳಿಸಿದ ಅಜೇಯ್‍, ‘ನಮ್ಮ ಚಿತ್ರವನ್ನು ಈವರೆಗೂ ನೋಡಿರುವ ಒಬ್ಬ ಪ್ರೇಕ್ಷಕರಿಂದ ಸಹ ನಮ್ಮ ಚಿತ್ರದ ಬಗ್ಗೆ ನೆಗೆಟಿವ್ ಮಾತು ಬಂದಿಲ್ಲ ಎಲ್ಲರು 100% ಮೆಚ್ಚಿಕೊಂಡಿದ್ದಾರೆ. ಪ್ರೇಕ್ಷಕರು ನನ್ನ ಚಿತ್ರದ ಬಗ್ಗೆ ಆಡಿರುವ ಪಾಸಿಟಿವ್ ಮಾತುಗಳು ನಮಗೆ ಇನ್ನಷ್ಟು ಶಕ್ತಿ ತುಂಬಿದೆ. ಈ ಚಿತ್ರ ಜನರ ಮನಸ್ಸಿಗೆ ಬಹಳ ಹತ್ತಿರವಾಗಿದೆ ಅಂತ ಹೇಳಬಹುದು. ಅಜೇಯ್ ರಾವ್ ಇಂತಹ ಚಿತ್ರ ಮಾಡಿದ್ದ ಅಂತ ನಾನು ಹೋದ ಮೇಲು ನೆನಪಿಸಿಕೊಳ್ಳುವ ಚಿತ್ರ ‘ಯುದ್ದಕಾಂಡವಾಗಿದೆ’ ಎಂದರು.

ಚಿತ್ರವನ್ನು ಜನ 100 ದಿನಗಳ ತನಕ ತೆಗೆದುಕೊಂಡು ಹೋಗುತ್ತಾರೆ ಎಂಬ ನಂಬಿಕೆ ವ್ಯಕ್ತಪಡಿಸಿದ ಅಜೇಯ್‍, ‘ಚಿತ್ರ ನೋಡಿದವರು ಅವರ ಸ್ನೇಹಿತರಿಗೂ ಈ ಸಿನಿಮಾ ನೋಡುವಂತೆ ಹೇಳುತ್ತಿದ್ದಾರೆ. ಈ ಚಿತ್ರವನ್ನು ಮೊದಲು ನೋಡಿ ಬಿಡುಗಡೆಗೆ ಸಹಕರಿಸಿ ನನ್ನ ಜೊತೆಯಾಗಿ ನಿಂತವರು ನಟ ಯಶ್. ಅವರನ್ನು ಇಂತಹ ಸಂದರ್ಭದಲ್ಲಿ ನಾನು ಮರೆಯುವಂತಿಲ್ಲ. ‘ಯುದ್ದಕಾಂಡ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಜೊತೆಗೆ ಚಿತ್ರದ ಮೊದಲ ಟಿಕೇಟ್‍ಗೆ ಹಣ ನೀಡಿ ರವಿಚಂದ್ರನ್ ಸರ್ ನನಗೆ ಹಾರೈಸಿ ಮತ್ತು ಸದ್ಯದಲ್ಲೇ ಕುಟುಂಬ ಸಮೇತ ಚಿತ್ರ ನೋಡುವುದಾಗಿ ಹೇಳಿದ್ದಾರೆ. ರಕ್ಷಿತಾ ಹಾಗೂ ಪ್ರೇಮ್ ಅವರು ಸಹ ಕರೆ ಮಾಡಿ ವಿಚಾರಿಸಿದ್ದಾರೆ. ‘ನೆನಪಿರಲಿ’ ಪ್ರೇಮ್, ಓಂಪ್ರಕಾಶ್ ರಾವ್ ಮುಂತಾದವರು ಚಿತ್ರ ನೋಡಿ ವಿಡಿಯೋ ಸಂದೇಶದ ಮೂಲಕ ಹಾರೈಸಿದ್ದಾರೆ. ಇವರೆಲ್ಲರಿಗೂ ಹಾಗೂ ಸದಾ ತನ್ನ ಜೊತೆಗಿರುವ ನನ್ನ ತಂಡಕ್ಕೂ ವಿಶೇಷ ಧನ್ಯವಾದಗಳನ್ನು ತಿಳಿಸುತ್ತೇನೆ’ ಎಂದರು ಅಜೇಯ್.

ನಿರ್ದೇಶಕ ಪವನ್‍ ಅವರಿಗೆ ಬಿಡುಗಡೆಗೂ ‌ಮುಂಚೆ ನನಗೆ ಎಲ್ಲಾ ಆಲ್ ದಿ ಬೆಸ್ಟ್ ಹೇಳುತ್ತಿದ್ದರಂತೆ. ಈಗ ಅಭಿನಂದನೆಗಳನ್ನು ಹೇಳುತ್ತಿದ್ದಾರಂತೆ. ಇದಕ್ಕಿಂತ ನನಗೆ ಇನೇನು ಬೇಕು ಎಂದ ನಿರ್ದೇಶಕ ಪವನ್ ಭಟ್, ಚಿತ್ರದ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದರು.

ಪ್ರಕಾಶ್‍ ಬೆಳವಾಡಿ ಅವರ ಪತ್ನಿ ಸಿನಿಮಾ ನೋಡಿ ಭಾವುಕರಾಗಿ ಚಿತ್ರಮಂದಿರದಿಂದಲೇ ಕರೆ ಮಾಡಿದರಂತೆ. ‘ಮನೆಗೆ ಬಂದ ಮೇಲೆ ನಿಮ್ಮ ಪಾತ್ರ ತುಂಬಾ ಚೆನ್ನಾಗಿದೆ. ಮುಂದೆ ಈ ತರಹದ ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳಿ ಎಂದು ಸಲಹೆ ಕೂಡ ನೀಡಿದರು. ಒಂದೊಳ್ಳೆಯ ಚಿತ್ರ ಮಾಡಿ ನಿರ್ಮಾಪಕರು ಹಾಗೂ ನಿರ್ದೇಶಕರು ಗೆದಿದ್ದಾರೆ. ಚಿತ್ರದ ಗೆಲುವಿಗೆ ಎಲ್ಲಕ್ಕಿಂತ ಬಾಯ್ಮಾತಿನ ಪ್ರಚಾರ ಬಹಳ ಮುಖ್ಯ. ಹಾಗಾಗಿ, ಚಿತ್ರ ನೋಡಿದವರು ಹೆಚ್ಚಿನ ಜನರಿಗೆ ಈ ಚಿತ್ರದ ಬಗ್ಗೆ ಹೇಳಿ’ ಎಂದರು ಪ್ರಕಾಶ್ ಬೆಳವಾಡಿ.

‘ಯುದ್ಧಕಾಂಡ’ ಚಿತ್ರದಲ್ಲಿ ಅಜೇಯ್‍ ರಾವ್‍, ಸುಪ್ರಿತಾ ಸತ್ಯನಾರಾಯಣ್‍, ಅರ್ಚನಾ ಜೋಯಿಸ್‍, ಪ್ರಕಾಶ್‍ ಬೆಳವಾಡಿ, ಟಿ.ಎಸ್. ನಾಗಾಭರಣ ಮುಂತಾದವರು ನಟಿಸಿದ್ದಾರೆ.

Tags:
error: Content is protected !!