ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಅಧ್ಯಾಯ 1’ ಚಿತ್ರದ ಬಿಡುಗಡೆಗೆ ಕೇವಲ 20 ದಿನಗಳಿದ್ದರೂ, ಚಿತ್ರತಂಡ ಹೆಚ್ಚು ಪ್ರಚಾರ ಮಾಡುತ್ತಿಲ್ಲ. ಸದ್ದಿಲ್ಲದೆ ಕೆಲಸದಲ್ಲಿ ನಿರತವಾಗಿದೆ. ಹೀಗಿರುವಾಗಲೇ, ಚಿತ್ರಕ್ಕೆ ಪಂಜಾಬ್‍ನ ಖ್ಯಾತ ಗಾಯಕ ಮತ್ತು ನಟ ದಿಲ್ಜಿತ್ ದೋಸಾಂಜ್ ಒಂದು ಹಾಡು ಹಾಡಿದ್ದಾರೆ.
ಈ ವಿಷ್ಯವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ದಿಲ್ಜಿತ್, ಮೂಲ ‘ಕಾಂತಾರ’ ಸಿನಿಮಾ ತಮ್ಮ ಮೇಲೆ ಮಾಡಿದ ಪರಿಣಾಮವನ್ನು ಸ್ಮರಿಸಿದ್ದಾರೆ. ‘ರಿಷಬ್ ಶೆಟ್ಟಿ ಅವರಿಗೆ ನನ್ನ ಸಲಾಂ. ಅವರು ನಿಜಕ್ಕೂ ಒಂದು ಮಾಸ್ಟರ್‌ಪೀಸ್ ಚಿತ್ರವನ್ನು ನಿರ್ಮಿಸಿದ್ದಾರೆ. ಆ ಸಿನಿಮಾದೊಂದಿಗೆ ನನಗೆ ವೈಯಕ್ತಿಕ ನಂಟಿದೆ, ಅದನ್ನು ಹೇಳಲು ಸಾಧ್ಯವಿಲ್ಲ. ಆದರೆ, ಚಿತ್ರಮಂದಿರದಲ್ಲಿ ‘ವರಾಹ ರೂಪಂ’ ಹಾಡು ಬಂದಾಗ, ಆನಂದ ಭಾಷ್ಪದಿಂದ ಕಣ್ಣು ತುಂಬಿಕೊಂಡಿದ್ದೆ’ ಎಂದು ಭಾವುಕರಾಗಿ ಬರೆದಿದ್ದಾರೆ.
ಇದನ್ನು ಓದಿ: ಸಿನಿಮಾ ನಿರ್ಮಾಣದತ್ತ ಪ್ರಜ್ವಲ್: ಪುರಾತನ ಫಿಲಂಸ್ ಜೊತೆ ನಿರ್ಮಾಣ
‘ಕಾಂತಾರ – ಅಧ್ಯಾಯ 1’ ಚಿತ್ರಕ್ಕಾಗಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರೊಂದಿಗೆ ಕೆಲಸ ಮಾಡಿದ ಬಗ್ಗೆಯೂ ದಿಲ್ಜಿತ್ ಸಂತಸ ವ್ಯಕ್ತಪಡಿಸಿದ್ದಾರೆ. ‘ಕೇವಲ ಒಂದೇ ದಿನದಲ್ಲಿ ಅವರಿಂದ ಸಾಕಷ್ಟು ಕಲಿತುಕೊಂಡೆ’ ಎಂದು ತಿಳಿಸಿದ್ದಾರೆ.
‘ಕಾಂತಾರ ಚಾಪ್ಟರ್ 1’ ಚಿತ್ರವು ಅಕ್ಟೋಬರ್ 02ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸಿದ್ದು, ರಿಷಭ್ ಶೆಟ್ಟಿ ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ರುಕ್ಮಿಣಿ ವಸಂತ್, ಅಚ್ಯುತ್ ಕುಮಾರ್, ಗುಲ್ಶನ್ ದೇವಯ್ಯ ಮುಂತಾದವರು ನಟಿಸಿದ್ದು, ಚಿತ್ರವು ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.





