Mysore
29
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ನನಸಾಯ್ತು ಜಗ್ಗೇಶ್ 40 ವರ್ಷದ ಹಿಂದಿನ ಕನಸು; ಜಗ್ಗೇಶ್‍ ಸ್ಟುಡಿಯೋಸ್‍ ಪ್ರಾರಂಭ

ಕನ್ನಡ ಚಿತ್ರರಂಗದಲ್ಲಿ ನಟರಾಗಿ, ನಿರ್ಮಾಪಕರಾಗಿ ಮತ್ತು ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಜಗ್ಗೇಶ್‍, ಇದೀಗ ಮಲ್ಲೇಶ್ವರದ ಮನೆಯ ಪಕ್ಕದಲ್ಲೇ ಒಂದು ಅತ್ಯಾಧುನಿಕ ಪೋಸ್ಟ್ ಪ್ರೊಡಕ್ಷನ್‍ ಸ್ಟುಡಿಯೋ ಪ್ರಾರಂಭಿಸಿದ್ದಾರೆ. ಚಿತ್ರರಂಗಕ್ಕೆ ಬೇಕಾದ ಹಲವು ಸೌಲಭ್ಯಗಳನ್ನು ಈ ಸ್ಟುಡಿಯೋದ ಮೂಲಕ ನಿರ್ಮಾಪಕರಿಗೆ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಈಗಾಗಲೇ ಕೋಮಲ್‍ ಅಭಿನಯದ ಮತ್ತು ನಿರ್ಮಾಣದ ‘ಯಲಾಕುನ್ನಿ’ ಚಿತ್ರದ ಕೆಲಸಗಳು ಈ ಸ್ಟುಡಿಯೋದಲ್ಲಿ ನಡೆದಿದೆ. ಇದಲ್ಲದೇ ಒಂದು ಹಿಂದಿ ಸಿನಿಮಾ ಹಾಗೂ ಮಲಯಾಳಂ ಸಿನಿಮಾದ ಕೆಲಸವೂ ಆಗಿದೆ.

ಇಂಥದ್ದೊಂದು ಸ್ಟುಡಿಯೋ ಮಾಡುವುದು ಜಗ್ಗೇಶ್‍ ಅವರ ಸುಮಾರು 40 ವರ್ಷಗಳ ಕನಸಂತೆ. ಈ ಕುರಿತು ಮಾತನಾಡಿದ ಅವರು, ‘ಗಾಂಧಿನಗರದಲ್ಲಿ ಒಂದು ಸ್ಟುಡಿಯೋದಲ್ಲಿ ಎನ್.ಎಸ್. ರಾವ್ ಡಬ್ಬಿಂಗ್‍ ಮಾಡುತ್ತಿದ್ದದನ್ನು ನಾನು ಚಿತ್ರರಂಗಕ್ಕೆ ಬಂದ ಹೊಸದರಲ್ಲಿ ನೋಡಿದ್ದೆ. ಆ ಸ್ಟುಡಿಯೋ ನೋಡಿ ಬಹಳ ಖುಷಿಯಾಗಿತ್ತು. ಇಂಥದ್ದೊಂದು ಸ್ಟುಡಿಯೋ ಮಾಡುವುದಕ್ಕೆ ಎಷ್ಟು ಖರ್ಚಾಗುತ್ತಿದೆ ಎಂದು ಕೇಳಿದಾಗ, 10 ಲಕ್ಷ ಎಂದು ಹೇಳಿದ್ದರು. ಮುಂದೊಂದು ದಿನ ನಾನು ಒಂದು ಸ್ಟುಡಿಯೋ ಮಾಡಬೇಕು ಎಂಬ ಆಸೆ ಇತ್ತು. ಅದು ಈಗ ಈಡೇರಿದೆ’ ಎನ್ನುತ್ತಾರೆ.

ಸ್ಟುಡಿಯೋ ವಿಶಾಲವಾಗಿರಬೇಕು ಎಂಬುದು ತಮ್ಮ ಆಸೆಯಾಗಿತ್ತು ಎಂದು ಹೇಳಿಕೊಂಡಿರುವ ಅವರು, ‘ಬಹುತೇಕ ಸಂಗೀತ ನಿರ್ದೇಶಕರು ತಮ್ಮ ತಮ್ಮ ಮನೆಗಳಲ್ಲಿ ಸ್ಟುಡಿಯೋ ಮಾಡಿಕೊಂಡು ಕೆಲಸಗಳನ್ನು ಮಾಡುತ್ತಿರುತ್ತಾರೆ. ವಿಶಾಲವಾದ ಜಾಗ ಇರೋದು ಕಡಿಮೆ. ನನ್ನ ಸ್ಟುಡಿಯೋ ವಿಶಾಲವಾಗಿ ಇರಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಅದೇ ರೀತಿ ಸ್ಟುಡಿಯೋ ವಿಶಾಲವಾಗಿದೆ’ ಎಂದು ಹೇಳಿದ್ದಾರೆ.

ಗ್ರಾಫಿಕ್ಸ್ ಒಂದು ಬಿಟ್ಟರೆ ಮಿಕ್ಕಂತೆ ಈ ಸ್ಟುಡಿಯೋದಲ್ಲಿ ಎಲ್ಲ ಕೆಲಸಗಳನ್ನೂ ಮಾಡಬಹುದು ಎನ್ನುವ ಜಗ್ಗೇಶ್, ‘ಚಿತ್ರೀಕರಣ ಮುಗಿದ ನಂತರ ಫುಟೇಜ್‍ ತಂದುಕೊಟ್ಟರೆ, ಸಿನಿಮಾ ತೆಗೆದುಕೊಂಡು ಹೋಗಬಹುದು. ಗ್ರಾಫಿಕ್ಸ್ ಒಂದು ಬಿಟ್ಟು ಮಿಕ್ಕ ಎಲ್ಲ ಕೆಲಸಗಳು ಇಲ್ಲಿ ಮಾಡಬಹುದು. ಇಲ್ಲಿ ಚಿಕ್ಕ ಬಜೆಟ್, ದೊಡ್ಡ ಬಜೆಟ್ ಸಿನಿಮಾ ಅಂತೇನಿಲ್ಲ. ಎಲ್ಲವನ್ನೂ ಒಂದೇ ತರಹ ಕೆಲಸ ಮಾಡಿಕೊಡಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನದ ಉಪಕರಣಗಳನ್ನು ಅಮೇರಿಕಾದಿಂದ ತರಿಸಿ ಈ ಸ್ಟುಡಿಯೋ ಮಾಡಿದ್ದೇನೆ. ಈಗಾಗಲೇ ನಮ್ಮ ಸ್ಟುಡಿಯೋದಲ್ಲಿ ನಾಲ್ಕೈದು ಚಿತ್ರಗಳ ಕೆಲಸಗಳು ನಡೆಯುತ್ತಿವೆ’ ಎನ್ನುತ್ತಾರೆ.

 

 

Tags: