‘ಡಾರ್ಲಿಂಗ್’ ಕೃಷ್ಣ ಅಭಿನಯದ ‘ಬ್ರ್ಯಾಟ್’ ಚಿತ್ರವು ನವೆಂಬರ್.14ರಂದು ಬಿಡಗುಡೆಯಾಗುತ್ತಿದೆ. ಈಗಾಗಲೇ ಚಿತ್ರತಂಡ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ಮಧ್ಯೆ, ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ.
ಈಗಾಗಲೇ, ‘ಬ್ರ್ಯಾಟ್’ ಚಿತ್ರದ ಒಂದು ಹಾಡು ಹಾಗೂ ಟೀಸರ್ ಬಿಡುಗಡೆಯಾಗಿತ್ತು. ಈಗ ಉತ್ತರ ಕರ್ನಾಟಕದ ಪ್ರತಿಭೆ, ಬಾಳು ಬೆಳಗುಂದಿ ಹಾಗೂ ಇಂದು ನಾಗರಾಜ್ ಹಾಡಿರುವ ‘ಗಂಗಿ ಗಂಗಿ …’ ಎಂಬ ಐಟಂ ಡ್ಯಾನ್ಸ್ ಬಿಡುಗಡೆಯಾಗಿದೆ. ಈ ಹಾಡಿಗೆ ಬಾಳು ಬೆಳಗುಂದಿ ಅವರೇ ಸಾಹಿತ್ಯ ಬರೆದಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡಿಗೆ ಕೃಷ್ಣ ಮತ್ತು ಅನೈರಾ ಹೆಜ್ಜೆ ಹಾಕಿದ್ದಾರೆ.
ಇದನ್ನೂ ಓದಿ: Asia cup | ಭಾರತಕ್ಕೆ ಸುಲಭ ಜಯ : ಪಾಕಿಸ್ತಾನಕ್ಕೆ ಮುಖಭಂಗ
ಈ ಹಾಡಿನ ಕುರಿತು ಮಾತನಾಡುವ ಬಾಳು, ‘ಕುರಿಗಾಹಿಯಾಗಿದ್ದ ನಾನು, ಅನೇಕ ಜನಪದ ಗೀತೆಗಳನ್ನು ರಚಿಸಿ ಹಾಡುತ್ತಿದ್ದೆ. ಆನಂತರ ‘ಸರಿಗಮಪ’ ಸ್ಪರ್ಧಿಯಾದೆ. ಆ ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ ಅವರು ನಿನ್ನಿಂದ ನನ್ನ ಸಿನಿಮಾವೊಂದರಲ್ಲಿ ಹಾಡಿಸುತ್ತೇನೆ ಅಂತ ಹೇಳಿದ್ದರು. ಈ ಚಿತ್ರದಲ್ಲಿ ಅವಕಾಶ ನೀಡಿದ್ದಾರೆ. ಅವರಿಗೆ, ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ’ ಎಂದು ಧನ್ಯವಾದ ತಿಳಿಸಿದರು.
ಕೃಷ್ಣ ನೃತ್ಯ ಮಾಡಿ ಮೂರ್ನಾಲ್ಕು ವರ್ಷಗಳೇ ಆಗಿತ್ತಂತೆ. ‘ಈ ಹಾಡಿಗೆ ಈ ರೀತಿ ನೃತ್ಯ ಮಾಡಿದ್ದೇನೆ ಅಂದರೆ ಅದಕ್ಕೆ ನಿರ್ದೇಶಕ ಶಶಾಂಕ್ ಅವರೇ ಕಾರಣ. ಈ ಚಿತ್ರದಲ್ಲಿ ನನ್ನ ಲುಕ್ ಕೂಡ ಹೊಸತಾಗಿದೆ. ಈ ಎಲ್ಲಾ ಕ್ರೆಡಿಟ್ ನಿರ್ದೇಶಕರಿಗೆ ಸೇರಬೇಕು. ಇನ್ನೂ ‘ಗಂಗಿ ಗಂಗಿ’ ಹಾಡು ಇಷ್ಟು ಅದ್ದೂರಿಯಾಗಿ ಮೂಡಿ ಬರಲು ನಿರ್ಮಾಪಕ ಮಂಜುನಾಥ್ ಕಂದಕೂರ್ ಅವರಿಗಿರುವ ಸಿನಿಮಾ ಪ್ರೀತಿ. ಇಡೀ ಸಿನಿಮಾ ಇಷ್ಟೇ ಅದ್ದೂರಿಯಾಗಿ ಮೂಡಿಬಂದಿದೆ. ಬಾಳು ಬೆಳಗುಂದಿ ಅವರ ಸಾಹಿತ್ಯ, ಗಾಯನ ಹಾಗೂ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಸೊಗಸಾಗಿದೆ’ ಎಂದರು ಕೃಷ್ಣ.
ಈ ಹಿಂದೆ ‘ಫಸ್ಟ್ ರ‍್ಯಾಂಕ್ ರಾಜು’ ನಿರ್ಮಿಸಿದ್ದ ಮಂಜುನಾಥ್ ಕುಂದಕೂರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೃಷ್ಣಗೆ ನಾಯಕಿಯಾಗಿ ಮನಿಷಾ ಕುಂದುಕೂರು ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಕೃಷ್ಣ ಮತ್ತು ಮನಿಷಾ ಜೊತೆಗೆ ಡ್ರ್ಯಾಗನ್ ಮಂಜು, ಅಚ್ಯುತ್ ಕುಮಾರ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಮತ್ತು ಅಭಿಲಾಷ್ ಕಲ್ಲತ್ತಿ ಛಾಯಾಗ್ರಹಣವಿದೆ.





