Mysore
26
light rain

Social Media

ಮಂಗಳವಾರ, 08 ಅಕ್ಟೋಬರ್ 2024
Light
Dark

ಕಮಿಷನ್‍ ಆರೋಪ ಸುಳ್ಳು ಎಂದು ಸ್ಪಷ್ಟನೆ ಕೊಟ್ಟ ಎ.ಪಿ. ಅರ್ಜುನ್

‘ಮಾರ್ಟಿನ್‍’ ಚಿತ್ರತಂಡ ದಿನಕ್ಕೊಂದು ಮಾಡಿಕೊಳ್ಳುತ್ತಿದೆ. ಕೆಲವು ತಿಂಗಳ ಹಿಂದಷ್ಟೇ ನಿರ್ಮಾಪಕ ಉದಯ್‍ ಮೆಹ್ತಾ ಮತ್ತು ನಿರ್ದೇಶಕ ಎ.ಪಿ. ಅರ್ಜುನ್‍ ನಡುವಿನ ಜಗಳ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿತ್ತು. ಅದು ತಣ್ಣಗಾಗುವಷ್ಟರಲ್ಲಿ ಇನ್ನೊಂದು ವಿವಾದ ಶುರುವಾಗಿದೆ. ಚಿತ್ರಕ್ಕೆ ಗ್ರಾಫಿಕ್ಸ್ ಮತ್ತು ವಿಎಫ್‍ಎಕ್ಸ್ ಕೆಲಸ ಮಾಡಿರುವ ಸಂಸ್ಥೆಯೊಂದು, ನಿರ್ದೇಶಕ ಅರ್ಜುನ್ ತಮ್ಮಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದೆ.

‘ಮಾರ್ಟಿನ್‍’ ಚಿತ್ರಕ್ಕೆ ಡಿಜಿಟಲ್ ಟೆರೇನ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಎನ್ನುವ ಸಂಸ್ಥೆಯು ಗ್ರಾಫಿಕ್ಸ್ ಮತ್ತು ವಿ.ಎಫ್‍.ಎಕ್ಸ್ ಕೆಲಸ ಮಾಡಿಕೊಟ್ಟಿತ್ತು. ನಿರ್ಮಾಪಕರಿಂದ ದುಬಾರಿ ದುಡ್ಡು ಪಡೆದು ಸರಿಯಾಗಿ ಕೆಲಸ ಮಾಡಿಕೊಡದ ಹಿನ್ನೆಲೆಯಲ್ಲಿ ನಿರ್ಮಾಪಕರು ಇತ್ತೀಚೆಗೆ ಬಸವೇಶ್ವರನಗರ ಪೊಲೀಸ್‍ ಠಾಣೆಯಲ್ಲಿ ಸಂಸ್ಥೆಯ ವಿರುದ್ಧ ದೂರು ನೀಡಿದ್ದರು. ಆ ಸಂಸ್ಥೆಯ ಸತ್ಯ ರೆಡ್ಡಿ ಎನ್ನುವವರನ್ನು ವಿಚಾರಿಸಿದಾಗ, ನಿರ್ದೇಶಕ ಎ.ಪಿ. ಅರ್ಜುನ್‍ ಮತ್ತು ಇತರರಿಗೆ 73 ಲಕ್ಷದಷ್ಟು ಕಮಿಷ್‍ ಕೊಟ್ಟಿರುವುದಾಗಿ ಹೇಳಿದ್ದು, ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಈ ಸಂಬಂಧ ಶುಕ್ರವಾರ ರಾತ್ರಿ ಎ.ಪಿ. ಅರ್ಜುನ್ ಒಂದು ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಈ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಬಗ್ಗೆ ಕೇಳಿಬಂದಿರುವ ಆರೋಪಗಳೆಲ್ಲಾ ಸುಳ್ಳು ಎಂದು ಅವರು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅರ್ಜುನ್‍, ‘ಸತ್ಯ ರೆಡ್ಡಿ ಎನ್ನುವವರು ನಮ್ಮ ಛಾಯಾಗ್ರಾಹಕ, ಸಂಕಲನಕಾರರ ಮೇಲೂ ಆರೋಪ ಮಾಡಿದ್ದಾರೆ. ನಾನು ಹೋಗಿ ವಿಚಾರಣೆಗೆ ಹಾಜರಾಗಿದ್ದೇನೆ. ಎಫ್‍.ಐ.ಆರ್ ಕಾಪಿಯಲ್ಲಿ ನನ್ನ ಹೆಸರೇ ಇಲ್ಲ. ಚಿತ್ರತಂಡದವರ್ಯಾರೂ ದೂರು ಕೊಟ್ಟಿಲ್ಲ, ಈ ಬಗ್ಗೆ ಎಲ್ಲೂ ಯಾರೂ ಮಾತನಾಡಿಲ್ಲ. ಹಾಗಿರುವಾಗ, ನನ್ನ ಹೆಸರು ಎಳೆದು ತರುವುದು ಎಷ್ಟು ಸರಿ? ಎಂಬ ಪ್ರಶ್ನೆ ಹಾಕಿದ್ದಾರೆ ಅರ್ಜುನ್‍.

ತಾನು ಚಿತ್ರರಂಗದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದಿರುವುದಾಗಿ ಹೇಳುವ ಅವರು, ‘ನಾನು 18 ವರ್ಷಗಳ ಕಾಲ ಶ್ರಮಪಟ್ಟಿದ್ದೇನೆ. ಹೀಗಿರುವಾಗ, ಹೀಗೆಲ್ಲಾ ಆರೋಪ ಎದುರಿಸುವುದಕ್ಕೆ ಬೇಸರವಾಗುತ್ತದೆ. ನಮ್ಮ ಸುತ್ತಮುತ್ತ ಇರುವವರಿಗೆ ನಾವೇನು ಎಂದು ಗೊತ್ತಿರುತ್ತದೆ. ಆದರೆ, ಯಾವುದೋ ದೂರದ ಹಳ್ಳಿಯಲ್ಲಿ ಇವೆಲ್ಲಾ ನೋಡುತ್ತಿರುವವರಿಗೆ ನಮ್ಮ ಮೇಲೆ ಕೆಟ್ಟ ಅಭಿಪ್ರಾಯ ಬರುತ್ತದೆ. ಒಂದು ಮನೆ ಕಟ್ಟೋದು ತುಂಬಾ ಕಷ್ಟ. ಕೆಡವುವುದು ಬಹಳ ಸುಲಭ. ನನ್ನ ಇಷ್ಟು ವರ್ಷಗಳ ಯಾರೂ ನನ್ನ ಬೆನ್ನುಲುಬಾಗಿ ನಿಂತಿಲ್ಲ. ಆದರೆ, ಬೆಳೆದ ಮೇಲೆ ಹೀಗೆ ಮಾಡುವುದು ಸರಿಯಲ್ಲ’ ಎನ್ನುತ್ತಾರೆ ಅರ್ಜುನ್.

ಉದಯ್‍ ಮೆಹ್ತಾ ನಿರ್ಮಾಣದ ‘ಮಾರ್ಟಿನ್‍’ ಚಿತ್ರಕ್ಕೆ ಎ.ಪಿ. ಅರ್ಜುನ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಣಿಶರ್ಮ ಸಂಗೀತ ಮತ್ತು ರವಿ ಬಸ್ರೂರು ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಕೆ.ಎಂ. ಪ್ರಕಾಶ್‍ ಸಂಕಲನ ಮತ್ತು ಸತ್ಯ ಹೆಗಡೆ ಛಾಯಾಗ್ರಹಣ ಇರುವ ಈ ಚಿತ್ರದಲ್ಲಿ ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಮಾಳವಿಕಾ ಅವಿನಾಶ್‍ ಮುಂತಾದವರು ನಟಿಸಿದ್ದಾರೆ.

Tags: