Mysore
27
clear sky

Social Media

ಶನಿವಾರ, 31 ಜನವರಿ 2026
Light
Dark

‘45’ ಚಿತ್ರ ಮುಂದಕ್ಕೆ ಹೋಗುವ ಸಾಧ್ಯತೆ; ಅಧಿಕೃತ ಘೋಷಣೆ ಬಾಕಿ

45 kannada movie release date update

ಶಿವರಾಜಕುಮಾರ್‌, ಉಪೇಂದ್ರ, ರಾಜ್‍ ಬಿ. ಶೆಟ್ಟಿ ಜೊತೆಯಾಗಿ ನಟಿಸಿರುವ ‘45’ ಚಿತ್ರವು ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಈ ಬಗ್ಗೆ ಚಿತ್ರರಂಗದ ವಲಯದಲ್ಲಿ ಗುಸುಗುಸು ಕೇಳಿಬರುತ್ತಿದ್ದು, ಚಿತ್ರತಂಡದ ವತಿಯಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಆದರೆ, ಸದ್ಯದಲ್ಲೇ ಚಿತ್ರತಂಡದಿಂದ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ.

‘45’ ಚಿತ್ರವು ಆಗಸ್ಟ್ 15ರಂದು ಪ್ಯಾನ್ ಇಂಡಿಯಾ ಚಿತ್ರವಾಗಿ ದೇಶಾದ್ಯಂತ ಬಿಡುಗಡೆಯಾಗಬೇಕಿದೆ. ಈಗಾಗಲೇ ಘೋಷಣೆಯೂ ಆಗಿದೆ. ಆದರೆ, ಚಿತ್ರದ ಕೆಲಸಗಳು ಮುಗಿದಿಲ್ಲವಂತೆ. ಚಿತ್ರದ ಗ್ರಾಫಿಕ್ಸ್ ಕೆಲಸ ಕೆನಡಾದ MARZ ಸ್ಟುಡಿಯೋದಲ್ಲಿ ನಡೆಯುತ್ತಿದ್ದು, ಕೆಲಸಗಳು ಮುಗಿದಿಲ್ಲವಂತೆ. ಚಿತ್ರದ ಮೊದಲ ಕಾಪಿ ಬರುವುದು ಆಗಸ್ಟ್ ತಿಂಗಳಾದ್ದರಿಂದ, ಚಿತ್ರವನ್ನು ಸೆಪ್ಟೆಂಬರ್‍ಗೆ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.

ಇದಲ್ಲದೆ, ಇನ್ನೊಂದು ಕಾರಣವೂ ಸುದ್ದಿಯಲ್ಲಿದೆ. ಆಗಸ್ಟ್ 15ರಂದು ರಜನಿಕಾಂತ್‍ ಅಭಿನಯದ ‘ಕೂಲಿ’ ಮತ್ತು ಹೃತಿಕ್‍ ರೋಶನ್‍ ಹಾಗೂ ಜ್ಯೂನಿಯರ್‍ NTR ಅಭಿನಯದ ‘ವಾರ್‍ 2’ ಚಿತ್ರ ಬಿಡುಗಡೆಯಾಗುತ್ತಿದೆ. ಈ ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿರುವುದರಿಂದ, ಚಿತ್ರಮಂದಿರ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಬಹುದು ಎಂಬುದು ಚಿತ್ರತಂಡದ ಲೆಕ್ಕಾಚಾರ. ಅದರಿಂದ ತಪ್ಪಿಸಿಕೊಳ್ಳುವುದಕ್ಕೆ ಚಿತ್ರವನ್ನು ಸೆಪ್ಟೆಂಬರ್‍ ತಿಂಗಳಿಗೆ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದರ ಕುರಿತಾಗಿ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ.

ಕೆಲವು ತಿಂಗಳುಗಳ ಹಿಂದೆ ಶಿವರಾಜಕುಮಾರ್, ಉಪೇಂದ್ರ, ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ, ಗೀತಾ ಶಿವರಾಜಕುಮಾರ್‌, ನಿರೂಪಕಿ ಅನುಶ್ರೀ ಮುಂತಾದವರು ಮುಂಬೈ, ಹೈದರಾಬಾದ್‍, ಚೆನ್ನೈ ಮತ್ತು ಕೊಚ್ಚಿಯಲ್ಲಿ ಚಿತ್ರದ ಪ್ರಚಾರ ಮಾಡಿ ಬಂದಿದ್ದಾರೆ.

ಸೂರಜ್‍ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ರಮೇಶ್‍ ರೆಡ್ಡಿ ನಿರ್ಮಾಣದ ‘45’ ಚಿತ್ರದಲ್ಲಿ ಶಿವರಾಜಕುಮಾರ್, ಉಪೇಂದ್ರ, ರಾಜ್‍ ಬಿ. ಶೆಟ್ಟಿ ಜೊತೆಗೆ ಕೌಸ್ತುಭ ಮಣಿ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್‍ ಜನ್ಯ ಸಂಗೀತ ಮತ್ತು ಸತ್ಯ ಹೆಗಡೆ ಛಾಯಾಗ್ರಹಣವಿದೆ.

Tags:
error: Content is protected !!