Mysore
25
overcast clouds
Light
Dark

ಹಸಿದವರ ಬಗ್ಗೆ ಚಿಂತಿಸಬೇಕೊ? ಹೊಟ್ಟೆ ತುಂಬಿದವರ ಬಗ್ಗೆಯೊ?

ಜನರಹಸಿವು ನೀಗಿಸುವ ಆಹಾರವನ್ನು ಕೀಳಾಗಿ ನೋಡಲು ಅಂತಃಕರಣ ಬರಡಾದವರಿಂದ ಮಾತ್ರ ಸಾಧ್ಯ!
ಚೈತ್ರಿಕಾ ಹರಗಿ

ಅಧಿಕಾರದಲ್ಲಿರುವವರು ೨೦೨೮-೨೯ ರ ಹೊತ್ತಿಗೆ ಭಾರತವನ್ನು ೫ ಟ್ರಿಲಿಯನ್ ಎಕಾನಮಿ ಮಾಡುತ್ತೇವೆ ಎನ್ನುತ್ತಾರೆ! ಆದರೆ ನಮ್ಮ ಆರ್ಥಿಕತೆ ಹಿಂದಕ್ಕೆ ಸಾಗುತ್ತಿದೆ. ನಮ್ಮದು ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆ. ಆದರೆ ದೇಶದ ೧೦% ಜನರ ಕೈಯ್ಯಲ್ಲಿ ೭೭% ಸಂಪತ್ತಿದೆ. ತಂತ್ರಜ್ಞಾನ ಮತ್ತು ಸಂಶೋಧನೆಯಲ್ಲಿ ನಮ್ಮ ದೇಶ ಮೇರು ಸ್ಥಾನದಲ್ಲಿದೆ. ಆದರೆ ವೈಜ್ಞಾನಿಕ ಮನೋಭಾವದಲ್ಲಿ ಹಿಂದಿದ್ದೇವೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ನಮ್ಮ ದೇಶದ ಗೌತಮ್ ಅದಾನಿ ನಾಲ್ಕನೇ ಸ್ಥಾನದಲ್ಲಿದ್ದರೆ, ಮುಖೇಶ್ ಅಂಬಾನಿ ೧೦ ನೇ ಸ್ಥಾನದಲ್ಲಿದ್ದಾರೆ. ಆದರೆ ದೇಶದ ೩೦% ಜನಸಂಖ್ಯೆ ಕಡುಬಡತನದಲ್ಲಿದ್ದಾರೆ. ನಾವು ಎಷ್ಟು ಮುಂದಿದ್ದೇವೆ ಎಂದು ಭಾವಿಸಿದ್ದೇವೆಯೊ ಅಷ್ಟೇ ಹಿಂದಿದ್ದೇವೆ.

ಕೋವಿಡ್ ಸಮಯದಲ್ಲಿ ಒಂದೆಡೆ ಅದಾನಿ, ಅಂಬಾನಿಯ ಖಜಾನೆ ತುಂಬುತ್ತಾ ಹೋಯಿತು, ಇನ್ನೊಂದೆಡೆ ಭಾರತದ ಹಸಿವಿನ ಪ್ರಮಾಣ ಏರುತ್ತಾ ಹೋಯಿತು. ಶ್ರೀಮಂತರು ಇನ್ನೂ ಶ್ರೀಮಂತರಾಗುತ್ತಿರುವ ಬಡವರು ಇನ್ನೂ ಬಡವರಾಗುತ್ತಾ ಸಾಗುತ್ತಿರುವ ಹೊತ್ತಲ್ಲಿ ಅಸಮಾನತೆ, ಹಸಿವು, ನಿರುದ್ಯೋಗದ ಬಗ್ಗೆ ಆಡಳಿತ ಪಕ್ಷ, ಮಾಧ್ಯಮಗಳು, ಮಾತನಾಡುವುದು ಬಿಟ್ಟು ಹೊಟ್ಟೆ ತುಂಬಿದವರ ಬಗ್ಗೆ ಮತ್ತು ಹೊಟ್ಟೆ ತುಂಬಿಸಿಕೊಳ್ಳಲು ಸಸ್ಯಾಹಾರ ತಿಂದರೊ ಇಲ್ಲ ಮಾಂಸಾಹಾರ ತಿಂದರೊ ಎಂದೊ ಚರ್ಚೆ ಮಾಡುತ್ತಿರುವುದರ ಬಗ್ಗೆ ಏನನ್ನುವುದು? ಹಸಿವು ನೀಗಿಸುವ ಆಹಾರವನ್ನು ಕೀಳಾಗಿ ನೋಡಲು ಅಂತಃಕರಣ ಬರಡಾದವರಿಂದ ಮಾತ್ರ ಸಾಧ್ಯ.

ದೇಶದಲ್ಲಿ ಹಸಿವು ಮತ್ತು ಅಪೌಷ್ಟಿಕತೆಯಿಂದಾಗಿ ಪ್ರತಿದಿನ ಐದು ವರ್ಷದೊಳಗಿನ ೪೫೦೦ ಮಕ್ಕಳು ಸಾಯುತ್ತಾರೆ. ಪ್ರತಿ ವರ್ಷ ಮೂರು ಲಕ್ಷಕ್ಕೂ ಹೆಚ್ಚು ಮಕ್ಕಳು ಹಸಿವಿನಿಂದ ಕಣ್ಮುಚ್ಚುತ್ತಾರೆ ಎಂದು ೨೦೧೭ ರ ರಾಷ್ಟ್ರೀಯ ಆರೋಗ್ಯ ಸಮೀಕ್ಷೆ ವರದಿ ಹೇಳಿದೆ. ಈ ಸನ್ನಿವೇಶ ಈಗ ಬಿಗಡಾಯಿಸಿರುವುದಕ್ಕೆ ಜಾಗತಿಕ ಹಸಿವಿನ ಸೂಚ್ಯಂಕ- ೨೦೨೧ರಲ್ಲಿ ನಾವು ತೀರ ಕೆಳಗಿನ ಸ್ಥಾನದಲ್ಲಿರುವುದೆ ಸಾಕ್ಷಿ. ವಾಸ್ತವವನ್ನೇ ಧಿಕ್ಕರಿಸುವಂತೆ ಕೇಂದ್ರ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ದೇಶದ ಯಾವ ರಾಜ್ಯದಲ್ಲೂ ಹಸಿವಿನಿಂದ ಸಾವುಗಳಾದ ವರದಿಯಾಗಿಲ್ಲ ಎಂದು ಆತ್ಮಸಾಕ್ಷಿ ಕೊಂದುಕೊಂಡು ಸರ್ವೋಚ್ಚ ನ್ಯಾಯಾಲಯದಲ್ಲಿ ಉತ್ತರ ನೀಡುತ್ತದೆ. ಮಾಂಸಾಹಾರದ ಕುರಿತು ಅನಗತ್ಯ ಚರ್ಚೆ ಮಾಡುವ ಮಾಧ್ಯಮಗಳು ನಿಜವಾಗಿಯೂ ಚರ್ಚೆ ಮಾಡಬೇಕಿರುವುದು ಹಸಿದು ಸಾಯುವವರ ಬಗ್ಗೆ.

ಆಹಾರೋತ್ಪಾದನೆಯಲ್ಲಿ ಜಗತ್ತಿನಲ್ಲಿ ಮುಂದಿದ್ದೇವೆ, ಆದರೆ ಜನರ ಹೊಟ್ಟೆ ತುಂಬಿಸುವುದರಲ್ಲಿ ಹಿಂದೆ ಬಿದ್ದಿದ್ದೇವೆ. ಭಾರತದಲ್ಲಿ ತಯಾರಾದ ಆಹಾರದಲ್ಲಿ ೪೦% ಸರಿಯಾದ ಗೋದಾಮು ವ್ಯವಸ್ಥೆಯಿಲ್ಲದೆ, ಸರಬರಾಜು ವ್ಯವಸ್ಥೆಯಿಲ್ಲದೆ ಪ್ರತಿವರ್ಷ ಹಾಳಾಗುತ್ತಿದೆ. ಸರ್ಕಾರದ ಗೋದಾಮುಗಳು, ಸರಬರಾಜು ವ್ಯವಸ್ಥೆ, ಅಧಿಕಾರಿಗಳ ನಿರ್ಲಕ್ಷ್ಯ, ಇದರ ಜೊತೆ ಜಾಗೃತರಾಗಿ ಇದನ್ನೆಲ್ಲಾ ಪ್ರಶ್ನಿಸದ ಹೊಟ್ಟೆ ತುಂಬಿದ ಜನರ ಬೇಜವಾಬ್ದಾರಿತನ ಎಂತಹದ್ದು? ದೇಶದ ಜನರ ಹಸಿವು ಹಿಂಗಿಸಲಾಗದ ನಮ್ಮ ಅಭಿವೃದ್ಧಿಯ ಪರಿಕಲ್ಪನೆಗಳು ಎಂತಹವು? ಅವು ಯಾರ ಹೊಟ್ಟೆ ತುಂಬಿಸುತ್ತಿವೆ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕು.

ಅಸಮಾನತೆ, ಹಸಿವು ತಾಂಡವವಾಡುತ್ತಿರುವಾಗ ಕೇಂದ್ರ ಪಡಿತರ ಯೋಜನೆಗಳನ್ನು ನಿಲ್ಲಿಸುವ ಆಲೋಚನೆ ಎಂತಹ ಕಡು ಕೆಟ್ಟದ್ದಿರಬಹುದು. ನಮ್ಮ ಕೇಂದ್ರ ಸರ್ಕಾರ ಅನ್ನಭಾಗ್ಯಕ್ಕೆ ರಾಜ್ಯಕ್ಕೆ ನೀಡುವ ಅನುದಾನ ನಿಲ್ಲಿಸುತ್ತಿದೆ. ಯಾವಾಗೆಲ್ಲ ಕೇಂದ್ರದ ಪಡಿತರ ಯೋಜನೆಗಳಲ್ಲಿ ಆಹಾರದ ಹಕ್ಕಿನ ವಿಚಾರದಲ್ಲಿ ನ್ಯಾಯಾಲಯಕ್ಕೆ ದೂರುಗಳು ಸಲ್ಲಿಕೆಯಾಗಿವೆಯೊ ಆಗೆಲ್ಲಾ ಸುಪ್ರೀಂ ಕೋರ್ಟ್ ಮಧ್ಯಂತರ ತೀರ್ಪುಗಳನ್ನು ನೀಡುತ್ತಾ ಬಂದಿದೆ. ಅನ್ನಪೂರ್ಣ ಅನ್ನ ಯೋಜನೆ, ಅಂತ್ಯೋದಯ ಅನ್ನ ಯೋಜನೆ ಕುರಿತಂತೆ ಕೋರ್ಟ್ ಕೆಲವು ಮಧ್ಯಂತರ ಆದೇಶ ಹೊರಡಿಸಿದೆ.

ಹಸಿವಿನಿಂದ ದೇಶದಲ್ಲಿ ಆಗುತ್ತಿರುವ ಸಾವುಗಳು ಜನರು ಗೌರವಯುತವಾಗಿ ಜೀವಿಸುವ ಹಕ್ಕನ್ನು ಕಿತ್ತುಕೊಳ್ಳುತ್ತಿರುವ ಕುರಿತಂತೆ ಸಾಮಾಜಿಕ ಹೋರಾಟಗಾರರಾದ ಅನುನ್ ಧವನ್, ಇಶಾನ್ ಧವನ್ ಹಾಗೂ ಕುಂಜನಾ ಸಿಂಗ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಯ ವೇಳೆ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಾದ ಎನ್.ವಿ.ರಮಣ ಅವರು ಪ್ರತಿ ರಾಜ್ಯದ ಪ್ರಥಮ ಕರ್ತವ್ಯ ಜನರು ಹಸಿವಿನಿಂದ ಬಳಲದಂತೆ ನೋಡಿಕೊಳ್ಳುವುದು ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅನ್ನ ಭಾಗ್ಯಕ್ಕೆ ಕೇಂದ್ರ ನೀಡುತ್ತಿರುವ ಅನುದಾನವನ್ನು ಕಡಿತ ಮಾಡುವ ಬಗ್ಗೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸುತ್ತದೆಯೆ ನೋಡಬೇಕು.

ಆರ್ಥಿಕವಾಗಿ ದೇಶ ಪ್ರಗತಿಯಾಗುವುದರ ಜೊತೆಗೆ ನೈತಿಕವಾಗಿ ವೈಚಾರಿಕವಾಗಿ ವೈಜ್ಞಾನಿಕವಾಗಿ ಸಮಾಜ ಬೆಳೆಯುತ್ತಾ ಸಾಗಬೇಕು. ಮೂಲಭೂತವಾದಿಗಳ ಕಪಿಮುಷ್ಟಿಯಲ್ಲಿರುವ ದೇಶ ಮಾತ್ರ ನಿಜವಾದ ಸಮಸ್ಯೆಗಳನ್ನು ಬಿಟ್ಟು ಜನರು ಏನನ್ನು ತಿನ್ನಬೇಕು, ಏನನ್ನು ತೊಡಬೇಕು ಎಂದು ತನ್ನ ನೀತಿಗಳ ಮೂಲಕ ಮತ್ತು ಸರ್ಕಾರದ ಪರ ವಕ್ತಾರಿಕೆ ವಹಿಸುವವರ ಮೂಲಕ ನಿರ್ದೇಶಿಸುತ್ತದೆ.

ಭಾರತದಲ್ಲಿ ೧೦ ರಲ್ಲಿ ೭ ಜನ ಮಾಂಸಾಹಾರಿಗಳು. ಇಲ್ಲಿನ ಬಹುತೇಕ ದೇವರಿಗೆ ಮಾಂಸಾಹಾರ ನೈವೇದ್ಯ ಮಾಡಲಾಗುತ್ತದೆ. ಶೋಷಿತರ ದೇವರಾದ ಮಾರಿ, ಶಿವ, ದುರ್ಗೆ ಇತ್ಯಾದಿ ಬ್ರಾಹ್ಮಣಶಾಹಿಗಳ ಕಪಿಮುಷ್ಟಿಯಿಂದ ಬಿಡಿಸಬೇಕು. ನಂಬಿಕೆಯ ಹೆಸರಲ್ಲಿ ಶೋಷಕವರ್ಗ ಕಟ್ಟಿಕೊಟ್ಟ ಮೂಢ ನಂಬಿಕೆಯನ್ನು ಪ್ರಶ್ನಿಸಬೇಕು. ಮಾಂಸಾಹಾರದ ಬಗ್ಗೆ ಹೆಚ್ಚೆಚ್ಚು ಮಾತನಾಡಿ ಕೀಳರಿಮೆ ತೊಲಗಿಸಬೇಕು. ಮಾಂಸಾಹಾರ ಅಶುದ್ಧಿ ಎಂದು ಶೋಷಕ ವರ್ಗದವರು ನಮ್ಮ ಮನಸ್ಸಿನಲ್ಲಿ ತಲತಲಾಂತರದಿಂದ ಬಿತ್ತಿದ ವಿಚಾರಗಳನ್ನು ತರ್ಕಕ್ಕೆ ಒಳಪಡಿಸುವ ಮೂಲಕ ಅದೊಂದು ಮೌಢ್ಯ ಎಂದು

ಜನರಿಗೆ ತಿಳಿಸಬೇಕು. ಇದೆಲ್ಲದಕ್ಕೂ ಮೊದಲು ಮುಕ್ತವಾಗಿ ಒಂದು ವಿಚಾರವನ್ನು ಸ್ವೀಕರಿಸುವ, ಆಲೋಚಿಸುವ ಕ್ರಮವನ್ನು ಮನುಷ್ಯ ಸ್ವತಃ ರೂಢಿಸಿಕೊಳ್ಳಬೇಕು.

ಶಾಲೆಯಲ್ಲಿ ಮೊಟ್ಟೆ ಕೊಡಬೇಡಿ ಎನ್ನುವವರು, ಅದರ ಬದಲು ಶೇಂಗಾ ಚಿಕ್ಕಿ, ಬಾಳೆಹಣ್ಣು ನೀಡುತ್ತೇವೆ ಎಂದ ಶಿಕ್ಷಣ ಸಚಿವರು ಶೋಷಕ ವರ್ಗದವರೆ. ಆಹಾರದಲ್ಲಿ, ಜಾತಿಯಲ್ಲಿ ಮೇಲು ಕೀಳಿಲ್ಲ ಎಂದು ಮಕ್ಕಳಿಗೆ ಕಲಿಸಬೇಕಾದ ಶಾಲೆಗಳಲ್ಲಿ ಆಹಾರ ಪದ್ಧತಿಯ ಕುರಿತಂತೆ ಅಶುದ್ಧಿ ಎಂಬ ಅಭಿಪ್ರಾಯ ಸೃಷ್ಟಿಸುವ ಕೆಲಸವನ್ನು ಸರ್ಕಾರ ಮಾಡಲು ಮುಂದಾಗಿದ್ದು ನೀಚತನ. ದೇಶದ ೧೯ ಕೋಟಿ ಜನರು ರಾತ್ರಿ ಊಟವಿಲ್ಲದೆ ಹಸಿವಿನಿಂದ ಮಲಗುತ್ತಿದ್ದಾರೆ ಎಂಬ ವಿಷಯ ಸಂಕಟಕಾರಿ.

ಹಸಿವಿನ ಬೇಗೆಯಲ್ಲಿ ಬೇಯುತ್ತಿರುವ ಕಡುಬಡ ರಾಷ್ಟ್ರಗಳಾದ ಯೆಮೆನ್ ಮತ್ತು ಸೋಮಾಲಿಯದ ಹತ್ತಿರ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ನಮ್ಮ ದೇಶವಿದೆ. ಈ ವಿಷಯ ನಮಗೆ ಕಳವಳ ಉಂಟು ಮಾಡಬೇಕು. ನಮ್ಮ ಅಂತಃಕರಣ ಚುಚ್ಚಬೇಕು. ನಾಚಿಕೆ ತರಿಸಬೇಕು. ಇದನ್ನು ನಾವು ಸರ್ಕಾರಕ್ಕೆ ಪ್ರಶ್ನಿಸಬೇಕು ಎಂಬುದು ಮುಖ್ಯವಾಗಬೇಕೆ ಹೊರತು ರಾಜಕಾರಣಿಯೊಬ್ಬರು ಮಾಂಸಾಹಾರ ತಿಂದು ದೇವಸ್ಥಾನಕ್ಕೆ ಹೋದರು ಎಂಬುದಲ್ಲ. ಚರ್ಚೆಯಾಗಬೇಕಾದುದ್ದು ಚರ್ಚೆಯಾಗದಿರುವುದು ಮತ್ತು ಕ್ಷುಲ್ಲಕ ವಿಚಾರಗಳು ಬಹುಚರ್ಚೆಗೊಳಪಡುತ್ತಿರುವುದು ಇಂದಿನ ದುರಂತ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ