-ಪ್ರೊ.ಆರ್.ಎಂ. ಚಿಂತಾಮಣಿ
ಕಳೆದ ಸೆಪ್ಟೆಂಬರ್ ೪ ಭಾನುವಾರ ಉದ್ಯಮಿ ಮತ್ತು ಟಾಟಾ ಸನ್ಸ್ ಮಾಜಿ ಚೇರ್ಮನ್ (೨೦೧೨-೧೬) ಸೈರಸ್ ಮಿಸ್ತ್ರಿ ಕಾರು ಅಪಘಾತದಲ್ಲಿ ನಿಧನರಾದರು. ಅವರು ಪ್ರಯಾಣಿಸುತ್ತಿದ್ದ ಅವರ ಮಿತ್ರನ ಮರ್ಸಿ ಡೆಸ್ ಬೆಂಜ್ ಐಷಾರಾಮಿ ಕಾರು ಅಪಘಾತವಾ ದಾಗ ಗಂಟೆಗೆ ೧೪೦ ಕಿ.ಮೀ.ವೇಗದಲ್ಲಿ ಓಡುತ್ತಿತ್ತು ಮತ್ತು ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮಿಸ್ತ್ರಿ ಮತ್ತು ಕೆಪಿಎಂಜಿ ಆಡಿಟ್ ಮತ್ತು ಸಂಶೋಧನಾ ಸಂಸ್ಥೆಯ ಜಾಗತಿಕ ಯೋಜನೆಗಳ ಮುಖ್ಯಸ್ಥ ಜಹಾಂಗೀರ ಪಂಡೋಲೆ ಇಬ್ಬರೂ ಸೀಟ್ ಬೆಲ್ಟ್ ಹಾಕಿಕೊಂಡಿರಲಿಲ್ಲ. ಇಬ್ಬರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು. ಅರ್ಥವ್ಯವಸ್ಥೆಗೆ ಉಪಯುಕ್ತವಾಗಿದ್ದ ಇಬ್ಬರನ್ನು ಕಳೆದುಕೊಳ್ಳಬೇಕಾಯಿತು. ವಾಹನ ಚಾಲನೆ ಮಾಡುತ್ತಿದ್ದ ಮಹಿಳಾ ವೈದ್ಯೆ ಮತ್ತು ಪಕ್ಕದಲ್ಲಿ ಕುಳಿತಿದ್ದ (ಮುಂದಿನ ಸೀಟಿನಲ್ಲಿ) ಅವರ ಪತಿ ದಾರಿಯಸ್ ಪಂಡೊಲೆ ಅವರು ಸೀಟ್ ಬೆಲ್ಟ್ ಹಾಕಿಕೊಂಡಿದ್ದರು. ಅವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ರಸ್ತೆ ಸುರಕ್ಷತಾ ತಜ್ಞರು ಮತ್ತು ಪೊಲೀಸರ ಅಭಿಪ್ರಾಯದಂತೆ ಈ ಅಪಘಾತ ದಲ್ಲಿ ಮೂರು ಪ್ರಮುಖ ಅಂಶಗಳನ್ನು ಗಮನಿಸಬೇಕು. ಒಂದು- ವಾಹನದ ಮಿತಿ ಮೀರಿದ ವೇಗ. ಎರಡು- ಹಿಂದಿನ ಸೀಟಿನಲ್ಲಿ ಕುಳಿತವರು ರಕ್ಷಣಾತ್ಮಕ ವ್ಯವಸ್ಥೆ ಯಾಗಿರುವ ಸೀಟ್ ಬೆಲ್ಟ್‌ಗಳನ್ನು ಧರಿಸದೇ ಇರುವುದು. ಮೂರು- ಸೇತುವೆ ಗಳಲ್ಲಿ ಹೊಂದಿಕೊಂಡಂತೆ ರಸ್ತೆ ನಿರ್ಮಾಣದಲ್ಲಿರುವ ದೋಷಗಳೂ ಕಾರಣ ವಾಗಿಬಹುದು. ಇದಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರೂ ದನಿಗೂಡಿಸುತ್ತಾರೆ. ಇದೇ ಸಮಯದಲ್ಲಿ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ಅವರು ಹೈವೆ ನಿರ್ಮಾಣದಲ್ಲಿ ದೋಷ ಮುಕ್ತ ವಿವರವಾದ ಯೋಜನಾ ವರದಿಗಳನ್ನು ಪಡೆಯುವುದೇ ಕಷ್ಟದ ಕೆಲಸ ಎನ್ನುತ್ತಾರೆ. ಇನ್ನು ನಿರ್ಮಾಣದ ಹಂತದಲ್ಲಿಯೂ ತಪ್ಪುಗಳಾಗಬಹುದು. ಇಂಥದನ್ನು ತಪ್ಪಿಸ ಬೇಕು. ದೇಶದ ಒಟ್ಟು ರಸ್ತೆಗಳ ಶೇ.೦೪ರಷ್ಟಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿಯೇ ಶೇ.೩೯ರಷ್ಟು ಅಪಘಾತಗಳು ಸಂಭವಿಸುತ್ತವೆ ಎಂದು ವರದಿಗಳು ಹೇಳುತ್ತವೆ.
ಹಿಂದಿನ ಸೀಟುಗಳಲ್ಲಿ ಕುಳಿತವರು ಸೀಟ್ ಬೆಲ್ಟ್ ಬಳಸಿದರೆ ಸಾವು ತಡೆ ಯಲು ಶೇ.೨೫ರಷ್ಟು ಸಾಧ್ಯತೆಗಳಿವೆ. ಅದೇ ರೀತಿ ಗಾಯಗಳಾಗುವುದನ್ನು ತಡೆ ಯಲು ಶೇ.೭೫ರಷ್ಟು ಸಾಧ್ಯತೆಗಳಿವೆ ಎಂದು ತಜ್ಞರು ಹೇಳುತ್ತಾರೆ. ಒಂದು ವೇಳೆ ಸೀಟ್ ಬೆಲ್ಟ್ ಧರಿಸದಿದ್ದರೆ ವೇಗವಾಗಿ ಓಡುತ್ತಿದ್ದ ವಾಹನ ಒಮ್ಮೇಲೇ ನಿಂತಾಗ (ಅಪಘಾತವಾದಾಗ) ಹಿಂದಿದ್ದವರ ದೇಹಗಳು ಅದೇ ವೇಗದಲ್ಲಿ ಮುಂದೆ ಹಾರಿ ವಾಹನದ ಗಾಜನ್ನೂ ಸೀಳಿ ಬೀಳುವ ಸಾಧ್ಯತೆಗಳು ಹೆಚ್ಚು. ಇತರರಿಗೂ ಸಾವು ನೋವುಗಳಾಗಬಹುದು.
ಹೈವೆಗಳೂ ಅಪಘಾತಗಳೂ: ೧೯೯೯-೨೦೦೦ ದಿಂದಲೇ ಮೂಲ ಸೌಲಭ್ಯ ಗಳಿಗೆ ಆದ್ಯತೆ ಕೊಡುವ ಯೋಜನೆ ಜಾರಿಯಲ್ಲಿರುವುದರಿಂದ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ವೇಗವಾಗಿ ನಡೆಯುತ್ತಿದೆ. ಉತ್ತರ-ದಕ್ಷಿಣ- ಪೂರ್ವ-ಪಶ್ಚಿಮ ಭಾರತ ಜೋಡಿಸುವ ‘ನ್ಯಾಷನಲ್ ಕ್ವಾಡ್ರಿಲ್ಯಾಟರಲ್’ ಮುಂತಾದ ಯೋಜನೆಗಳು ಜಾರಿಗೊಳ್ಳುತ್ತಿರುವುದರಿಂದ ರಸ್ತೆ ಸಾರಿಗೆ ವ್ಯವಸ್ಥೆ ತೀವ್ರವಾಗಿ ಬೆಳೆಯುತ್ತಿದೆ. ಸದ್ಯ ದೇಶದಲ್ಲಿ ೧,೪೦,೦೦೦ ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿಗಳಿದ್ದು, ಇದನ್ನು ಬೇಗನೆ ೨,೦೦,೦೦೦ ಕಿ.ಮೀ.ಗೆ ಹೆಚ್ಚಿಸುವ ಗುರಿ ಇದೆ ಎಂದು ಮಂತ್ರಿಗಳು ಹೇಳುತ್ತಾರೆ. ಇದಕ್ಕಾಗಿ ನ್ಯಾಷನಲ್ ಹೈವೆ ಅಥಾರಿಟಿ ಆಫ್ ಇಂಡಿಯ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.
ಸಚಿವರೇ ಹೇಳಿರುವಂತೆ ದೇಶದಲ್ಲಿ ೨೦೨೧ರಲ್ಲಿ ೫ ಲಕ್ಷಕ್ಕೂ ಹೆಚ್ಚು ರಸ್ತೆ ಅಪಘಾತ ಗಳಾಗಿದ್ದು, ಒಂದೂವರೆ ಲಕ್ಷ ಜನರು ಜೀವ ಕಳೆದುಕೊಂಡಿದ್ದಾರೆ. ನೋವಿನ ಸಂಗತಿ ಏನೆಂದರೆ ಸತ್ತವರಲ್ಲಿ ಶೇ.೬೦ರಷ್ಟು ಜನ ೧೮-೩೫ ವರ್ಷ ವಯಸ್ಸಿನವರು.
ಅಪಘಾತಗಳಿಗೆ ಹಲವು ಕಾರಣಗಳು. ಬಹುತೇಕ ಮಾನವನ ಅವಾಸ್ತವಿಕ, ಕಾಯ್ದೆ ಬಾಹಿರ ಮತ್ತು ಅವೈಜ್ಞಾನಿಕ ನಿರ್ಧಾರಗಳೇ ಹೆಚ್ಚು ಕಾರಣ. ಅವುಗಳಲ್ಲಿ ಒಂದು ವಾಹನದ ಸಾಮರ್ಥ್ಯಕ್ಕಿಂತ ಹೆಚ್ಚು ಸರಕುಗಳನ್ನೋ ಪ್ರಯಾಣಿಕರನ್ನೋ ಸಾಗಿಸುವುದು. ವಾಹನ ನಿಮ್ಮದಾದರೂ ಚಲಿಸುವ ರಸ್ತೆ ಸಾರ್ವಜನಿಕರದ್ದು. ಅಲ್ಲಿ ಇತರ ವಾಹನಗಳು ಮತ್ತು ಜನರು ಸಂಚರಿಸುತ್ತಾರೆ. ಓವರ್ ಲೋಡೆಡ್ ವಾಹನದಿಂದ ರಸ್ತೆಯ ಸುಸ್ಥಿತಿಗೆ ಧಕ್ಕೆಯಾಗಿ ಅಪಘಾತಗಳಿಗೆ ಕಾರಣವಾಗಬ ಹುದು. ಓವರ್‌ಲೋಡ್‌ನಿಂದಾಗಿ ವಾಹನದ ಸವಕಳಿ ಹೆಚ್ಚಾಗುವುದಲ್ಲದೆ ಬಿಡಿ ಭಾಗಗಳಿಗೆ ಪೆಟ್ಟು ಬಿದ್ದು, ರಸ್ತೆಯ ಮಧ್ಯದಲ್ಲಿಯೇ ಕೆಟ್ಟು ನಿಲ್ಲುವಂತಾಗಬಹುದು. ಇದು ಅಪಘಾತಗಳಿಗೆ ಕಾರಣವಾಗಬಹುದು.
ಸಚಿವರೇ ಹೇಳಿರುವಂತೆ ಎಲ್ಲ ಮಾದರಿ ವಾಹನಗಳಲ್ಲಿಯ ರಕ್ಷಣಾತ್ಮಕ ವ್ಯವಸ್ಥೆಗಳನ್ನು (ಹಿಂದಿನ ಸೀಟುಗಳೂ ಸೇರಿ ಎಲ್ಲ ಸೀಟುಗಳಿಗೂ ಏರ್‌ಬ್ಯಾಗ್ ಅಳವಡಿಸುವದೂ ಸೇರಿ) ಸುಧಾರಿಸಲಾಗುವುದು. ಹಿಂದಿನ ಸೀಟಿನಲ್ಲಿದ್ದವರಿಗೂ ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗು ವುದು. ಇಷ್ಟೇ ಸಾಲದು. ತಪ್ಪಿದಲ್ಲಿ ಅಪರಾಧವೆಂದು ಪರಿಗಣಿಸಿ ದಂಡವನ್ನು ವಿಧಿಸಬೇಕು. ಕಟ್ಟುನಿಟ್ಟಾಗಿ ಕಾಯ್ದೆ ಜಾರಿಯಾಗಬೇಕು. ಇದೆಲ್ಲದರ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವ್ಯಾಪಕ ಪ್ರಚಾರ ಮತ್ತು ಮಾಹಿತಿ ವಿಸ್ತರಣೆಯಾಗಬೇಕು. ತಪ್ಪಿದವರು ಶಿಕ್ಷೆಯಿಂದ ಯಾವುದೇ ರೀತಿಯಿಂದ ತಪ್ಪಿಸಿಕೊಳ್ಳಲಿಕ್ಕಾಗುವುದಿಲ್ಲ ಎಂಬ ವಾತಾವರಣ ನಿರ್ಮಿಸಬೇಕು.
ಒಂದು ಅಭಿಪ್ರಾಯದಂತೆ ರಸ್ತೆ ಸುರಕ್ಷಿತತೆಗೆ ನಾಲ್ಕು E(ಇ)ಗಳ ಅವಶ್ಯಕತೆ ಇದೆ. 1. EDUCATION (ಶಿಕ್ಷಣ) ಜನರಲ್ಲಿ ಅರಿವು ಮೂಡಿಸುವುದು. 2.ENFORCEMENT (ಜಾರಿಗೊಳಿಸುವದು) ಕಾಯ್ದೆಗಳನ್ನು ಅನುಷ್ಠಾನಗೊಳಿ ಸುವುದು (ಆಡಳಿತ). 3.ENGINEERING -ತಾಂತ್ರಿಕವಾಗಿ ರಸ್ತೆಗಳು ಮತ್ತು ವಾಹನಗಳನ್ನು ಸುಸ್ಥಿತಿಯಲ್ಲಿಡುವುದು ಮತ್ತು 4.EMERGENCY CARE- ತುರ್ತು ಚಿಕಿತ್ಸಾ ವ್ಯವಸ್ಥೆ. ಈ ಎಲ್ಲ ನಾಲ್ಕರಲ್ಲೂ ಸರ್ಕಾರ, ವಾಹನ ತಯಾರಕರು, ಮಾಲೀಕರು ಮತ್ತು ಚಾಲಕರು, ಪ್ರಯಾಣಿಕರು ಮತ್ತು ಸಾರ್ವಜನಿಕರು ಸಮನಾಗಿ ಜವಾಬ್ದಾರರು.
ಸಾರ್ವಜನಿಕರ ಹೊಣೆಗಾರಿಕೆ: ಎಲ್ಲರೂ ಚಾಚೂ ತಪ್ಪದೆ ರಸ್ತೆ ನಿಯಮ ಗಳನ್ನು ಪಾಲಿಸಬೇಕು. ಯಾರೂ ವೃತ್ತಗಳ ಮೂಲೆಗಳಲ್ಲಿ ಗುಂಪುಗೂಡಿ ನಿಲ್ಲಬಾರದು, ದ್ವಿಚಕ್ರ ವಾಹನಗಳನ್ನು ನಿಲ್ಲಿಸಿಕೊಂಡು ಮಾತನಾಡುತ್ತ ನಿಲ್ಲಬಾರದು, ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಬಾರದು, ವಾಹನ ದಟ್ಟಣೆ ಇರುವ ರಸ್ತೆಗಳಲ್ಲಿ ಪಾದಚಾರಿಗಳು ಎಲ್ಲೆಂದರಲ್ಲಿ ರಸ್ತೆ ದಾಟಬಾರದು, ವಾಹನ ಚಾಲಕರು ನಗರಗಳಲ್ಲಿ ವೇಗದ ನಿಯಮಗಳನ್ನು ಪಾಲಿಸಬೇಕು.
ದ್ವಿಚಕ್ರಗಳ ವಾಹನಗಳಲ್ಲಿ ಇಬ್ಬರೇ ಸವಾರರಿದ್ದು, ಇಬ್ಬರೂ ಹೆಲ್ಮೆಟ್ ಧರಿಸಿರಬೇಕು. ವಾಹನದ ವೇಗ ಮತ್ತು ಸದ್ದು ನಿಯಂತ್ರಣದಲ್ಲಿರಬೇಕು. ಕಾರು ಮತ್ತು ಇತರ ವಾಹನಗಳಲ್ಲಿ ಪ್ರಯಾಣಿಸುವವರು ಆಯಾ ವಾಹನಗಳ ನಿಯಮಗಳನ್ನು ಪಾಲಿಸಲೇಬೇಕು. ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿಯ ರಸ್ತೆಗಳನ್ನು ಸುಸ್ಥಿತಿಯಲ್ಲಿಡಬೇಕು. ಇವೆಲ್ಲ ಕಾಯ್ದೆಗಳ ಲ್ಲಿವೆ. ಆದರೆ ಪಾಲನೆಯಲ್ಲಿ ಲೋಪಗಳಾಗುತ್ತಿವೆ. ಕಾಯ್ದೆ ಜಾರಿ ಅಧಿಕಾರಿಗಳು (ಪೊಲೀಸರು) ತಪ್ಪು ಎಸಗಿದವರನ್ನು ನಿರ್ದಾಕ್ಷಿಣ್ಯವಾಗಿ ದಂಡಿಸಬೇಕು ಮತ್ತು ಅದು ಪ್ರಚುರಪಡಿಸಲ್ಪಡಬೇಕು.
ಒಂದು ಮಾತು: ಸೀಟ್ ಬೆಲ್ಟ್ ಧರಿಸದೇ ಸತ್ತ ಪ್ರಮುಖರು ಸೈರಸ್ ಮಿಸ್ತ್ರಿ ಒಬ್ಬರೇ ಅಲ್ಲ. ೧೯೯೭ರಲ್ಲಿ ಬ್ರಿಟನ್‌ನ ಪ್ರಿನ್ಸೆಸ್ ಡಯಾನಾ, ಖ್ಯಾತ ಹಾಸ್ಯ ಕಲಾವಿದ ಜಸ್‌ಪಾಲ್ ಬಟ್ಟಿ ೨೦೧೨ರಲ್ಲಿ, ಅರ್ಥಶಾಸ್ತ್ರಜ್ಞ ಜಾನ್ ಫೋರ್ಬ್ಸ್ ನ್ಯಾಶ್ ಜೂನಿ ಯರ್ ೨೦೧೫ರಲ್ಲಿ ಮತ್ತು ೨೦೧೪ರಲ್ಲಿ ಅಂದಿನ ಕೇಂದ್ರ ಮಂತ್ರಿ ಗೋಪಿನಾಥ ಮುಂಡೆ- ಇದೇ ಕಾರಣಗಳಿಂದ ಅಪಘಾತಗಳಲ್ಲಿ ಅಸು ನೀಗಿದರೆಂದು ವರದಿಗಳು ಹೇಳುತ್ತವೆ.