‘ಯಾರಿಗೆಬಂತು, ಎಲ್ಲಿಗೆಬಂತು, ನಲವತ್ತೇಳರಸ್ವಾತಂತ್ರ್ಯ’ ಎಂದು ಪ್ರಶ್ನಿಸುತ್ತಲೇ, ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಆಚರಿಸುವ ವೇಳೆಗೇ, ಈ ಸಾಲನ್ನು ಡಿಜಿಟಲ್ ಲೋಕದತ್ತ ಎಳೆದುಕೊಳ್ಳಬಹುದು. ಅದರಲ್ಲೂ ಸಾಮಾಜಿಕತಾಣಗಳು, ಯುಟ್ಯೂಬ್ ವಾಹಿನಿಗಳು, ವೈಯಕ್ತಿಕ ಜಾಲತಾಣಗಳಿಗೆ ಇರುವ ಸ್ವಾತಂತ್ರ್ಯ, ಅದನ್ನು ಬಳಸಿಕೊಳ್ಳುವ ರೀತಿ.
ಮೊನ್ನೆ ವಾಟ್ಸಪ್ ಗುಂಪೊಂದರ ಸುದ್ದಿಯ ಕೊಂಡಿಯೊಂದು ಇತ್ತು. ಅದು ನಿರ್ಮಾಪಕರ ಸಂಘದ ಕಚೇರಿಯಲ್ಲಿ ನಡೆ ವಾಗ್ವಾದ, ಇನ್ನೇನು ಕೈಕೈಮಿಲಾಯಿಸುವ ಕ್ಷಣಗಳ ಚಿತ್ರ. ಸಂಘದ ಚುನಾವಣೆಯ ಕುರಿತಂತೆ ನಡೆದ ಘಟನೆ. ಎಲ್ಲ ಸರಿಯಾಗಿರುತ್ತಿದ್ದರೆ, ನಾಡದು ಭಾನುವಾರ ನಿರ್ಮಾಪಕರ ಸಂಘದ ಚುನಾವಣೆ ನಡೆಯಬೇಕಾಗಿತ್ತು. ಅದಕ್ಕೆ ಚುನಾವಣಾಧಿಕಾರಿಯನ್ನು ನೇಮಿಸಲಾಗಿತ್ತು. ನಂತರ ಅವರನ್ನು ಬದಲಾಯಸಿ, ಇನ್ನೊಬ್ಬರನ್ನು ಆ ಜಾಗಕ್ಕೆ ತರಲಾಯಿತು. ನಾಮಪತ್ರ ಹಿಂದೆಗೆದುಕೊಳ್ಳುವ ದಿನ ಅವರೂ ತಮ್ಮ ಜವಾಬ್ದಾರಿಯಿಂದ ಹೊರಬಂದರು ಎನ್ನುತ್ತಿವೆ ಮೂಲಗಳು. ಬಹುಶಃ ಚುನಾವಣೆ ಮುಂದೂಡಿ, ಸಹಕಾರಿ ಸಂಘಗಳ ನಿಬಂಧಕರೇ ಚುನಾವಣಾಧಿಕಾರಿಯನ್ನು ನೇಮಿಸಬಹುದು, ಇಲ್ಲವೇ ಆಸಕ್ತರು ನ್ಯಾಯಾಲಯದ ಮೆಟ್ಟಲೇರಿ ಚುನಾವಣೆಯೇ ಮುಂದೆ ಹೋದರೂ ಆಶ್ಚರ್ಯವಿಲ್ಲ.
ಮೊನ್ನೆ ನಿರ್ಮಾಪಕರೊಬ್ಬರು ತಮ್ಮ ಚಿತ್ರದ ನಾಯಕ ನಟನ ಪರವಾಗಿ ನಟ ದರ್ಶನ್ ತಮ್ಮ ವಿರುದ್ಧ ದೂರು ನೀಡಿದ್ದು, ಹಲವು ಡಿಜಿಟಲ್ ಮಾಧ್ಯಮಗಳಿಗೆ ಆಹಾರವಾಯಿತು. ನಂತರ ಆ ನಟ, ನಿರ್ದೇಶಕ ಮತ್ತಿತರರು ಆ ನಿರ್ಮಾಪಕರ ವಿರುದ್ಧ ಕೆಲವು ಮಾಧ್ಯಮಗಳ ಮುಂದೆ ಬಂದರು. ತಮ್ಮ ತಮ್ಮ ವಾಟ್ಸಪ್ ಗುಂಪುಗಳಲ್ಲಿ ಅದನ್ನು ಹಂಚಿಕೊಂಡರು.
ಪುನೀತ್ ರಾಜ್‌ಕುಮಾರ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಇತ್ತೀಚೆಗೆ ಡಿಜಿಟಲ್ ವಾಹಿನಿಗಳಲ್ಲಿ ಮಾತಿನ ಸಮರ ನಡೆದಿತ್ತು. ಅದಕ್ಕೆ ಕಾರಣವಾದದ್ದು ಅಪ್ಪು ಅವರ ಕುರಿತಂತೆ ದರ್ಶನ್ ಮಾಡಿದ್ದರೆನ್ನಲಾದ ಒಂದು ಪ್ರಸ್ತಾಪ. ಪುನೀತ್ ಅಭಿಮಾನಿಗಳು ಪರಸ್ಪರ ಆರೋಪ ಪ್ರತ್ಯಾರೋಪಗಳ ಭಾಷೆ ತೀರಾ ಕೆಳಮಟ್ಟದ್ದಾಗಿತ್ತು. ಅಭಿಮಾನದ ಆವೇಶದಲ್ಲಿ ತಾವೇನು ಮಾತನಾಡುತ್ತಿದ್ದೇವೆ ಎನ್ನುವ ಅರಿವೂ ಅಲ್ಲಿ ಇದ್ದಂತಿರಲಿಲ್ಲ.
ಇಂತಹ ಸಂದರ್ಭವನ್ನು ಸುದ್ದಿವಾಹಿನಿಗಳಲ್ಲಿ ಕೆಲವು ಬಳಸಿಕೊಳ್ಳುವುದಿದೆ. ಇಲ್ಲೂ ಹಾಗೆಯೇ ಆಯಿತು. ಅಪ್ಪು ಮತ್ತು ದರ್ಶನ್ ಅಭಿಮಾನಿಗಳ ನಡುವೆ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಜಗಳ, ದೂರವಾಣಿ ಮೂಲಕ ಆಡಿದ ಮಾತುಗಳನ್ನು ಅಲ್ಲಿಗೆ ಸೇರಿಸಿ, ಇನ್ನಷ್ಟು ಬಿಸಿಯೇರುವಂತೆ ಮಾಡಿತು. ಸದ್ಯಅದು ತಣ್ಣಗಾಗುತ್ತಿದೆ ಎನ್ನಿ.
ಜನಪ್ರಿಯ ನಟರ ಅಭಿಮಾನಿಗಳ ನಡುವಿನ ಮುಸುಕಿನ ಗುದ್ದಾಟ ಹೊಸದೇನೂ ಅಲ್ಲ. ಎಲ್ಲ ಭಾಷೆಗಳ ಜನಪ್ರಿಯ ನಟರ ಅಭಿಮಾನಿಗಳಲ್ಲೂ ಅದು ಇರುತ್ತಿತ್ತು. ಆರೋಗ್ಯಕರವಾದ, ಕೆಲವೊಮ್ಮೆ ಅನಾರೋಗ್ಯಕರವಾದ ಅಭಿಮಾನದ ಅತಿರೇಕಗಳು. ಹಿಂದೆ ಮುದ್ರಣ ಮಾಧ್ಯಮಗಳು ಮಾತ್ರ ಇದ್ದ ದಿನಗಳಲ್ಲಿ ಅವು ಹೆಚ್ಚು ಬಹಿರಂಗವಾಗುತ್ತಿರಲಿಲ್ಲ. ಇತ್ತೀಚೆಗೆ, ಯಾವುದೇ ನಿಯಂತ್ರಣ ಇಲ್ಲದೆ ಯಾರು ಬೇಕಾದರೂ ಡಿಜಿಟಲ್ ಮಾಧ್ಯಮದಲ್ಲಿ ತಮ್ಮಿಷ್ಟದಂತೆ ಹೇಳುವ, ಬರೆಯುವ ಸ್ವಾತಂತ್ರ್ಯಪಡೆದ ಮೇಲೆ ‘ಆಫ್ ದ ರೆಕಾರ್ಡ್’ಗಳು ಆನ್ ಆಗತೊಡಗಿದವು. ಕಿರುತೆರೆ ನಡುಮನೆಯನ್ನು ಸೇರಿದರೆ, ಇವುಗಳಲ್ಲಿ ಬಹುತೇಕ ‘ಇಣುಕು’ ಪ್ರವೃತ್ತಿಯನ್ನುತಮ್ಮದಾಗಿಸಿಕೊಂಡವು. ಜನಪ್ರಿಯನಟ/ನಟಿಯರ ಖಾಸಗಿ ಬದುಕು ಇವರ ಕ್ಯಾಮರಾಗಳಿಗೆ ಆಹಾರವಾದವು.
ಕೆಲವರು ತಮ್ಮ ಖಾಸಗಿ ಬದುಕನ್ನೇ ಜನಪ್ರಿಯತೆಗಾಗಿ ಬೀದಿಗೆ ತರುವುದಿದೆ. ಅದು ಅವರ ಪ್ರಕಾರ ಸ್ವಾತಂತ್ರ್ಯ. ಪ್ರಾಮಾಣಿಕತೆ, ಪಾರದರ್ಶಕ ಬದುಕು! ಇತ್ತೀಚೆಗೆ ಒಟಿಟಿ ತಾಣದಲ್ಲಿ ನೇರಪ್ರಸಾರದ ಬಿಗ್‌ಬಾಸ್ ರಿಯಾಲಿಟಿ ಕಾರ್ಯಕ್ರಮದ ಕುರಿತಂತೆ ಇಂತಹದೊಂದು ಮಾತು ಕೇಳಿ ಬರುತ್ತಿದೆ. ಅಲ್ಲಿರುವ ಸ್ಪರ್ಧಿಗಳ ವೈಯಕ್ತಿಕ ಬದುಕನ್ನುಅವರೇ ಬಯಲು ಮಾಡಿಕೊಂಡಿದ್ದಾರೆ.
ಜನಪ್ರಿಯ ನಟರ ಅಭಿಮಾನಿಗಳು ಬೇರೆ, ಅಭಿಮಾನಿ ಸಂಘಗಳು ಬೇರೆ. ಕೆಲವು ನಟರು ತಮ್ಮ ಅಭಿಮಾನಿ ಸಂಘಗಳನ್ನು ಪೋಷಿಸುವುದಿದೆ. ನಟ ರಜನೀಕಾಂತ್ ಅಭಿಮಾನಿ ಸಂಘಗಳು ಅವರ ರಾಜಕೀಯ ಬದುಕಿನ ಪ್ರವೇಶಕ್ಕೆ ಬೆಂಬಲ ಘೋಷಿಸಿದ್ದಿದೆ. ಕೊನೆಗೆ ತಮ್ಮ ಅನಾರೋಗ್ಯದ ಕಾರಣ ಅವರು ರಾಜಕೀಯಕ್ಕೆ ಬರದಿರಲು ನಿರ್ಧರಿಸಿದರೆನ್ನಿ.
ಅಭಿಮಾನಿಗಳನ್ನು ‘ದೇವರುಗಳು’ ಎಂದು ಕರೆದ ಡಾ.ರಾಜಕುಮಾರ್ ಅವರು ಕೂಡಾ ತಮ್ಮ ಹೆಸರಿನ ಅಭಿಮಾನಿಗಳ ಸಂಘದ ಕುರಿತಂತೆ ತಾಳಿದ್ದ ನಿಲುವು ಬಹಳ ಮಂದಿಗೆ ತಿಳಿದಿರಲಾರದು. ೧೯೮೯ರಲ್ಲಿ ಈ ಸಂಘ ರೈಲು ರೋಕೊ ಚಳವಳಿ ಹಮ್ಮಿಕೊಂಡ ಸಂದರ್ಭದಲ್ಲಿ ಅವರು ಪತ್ರಿಕಾ ಹೇಳಿಕೆಯೊಂದನ್ನು ನೀಡಿ, ‘ಈ ಸಂಘದೊಡನೆ ನನಗಾಗಲೀ, ನನ ್ನಕುಟುಂಬದ ಯಾರೊಬ್ಬ ಸದಸ್ಯರಿಗಾಗಲೀ ಯಾವುದೇ ರೀತಿಯ ಸಂಬಂಧವಿಲ್ಲ. ಹಾಗೂ ನನ್ನ ಒಪ್ಪಿಗೆ ಇಲ್ಲದೆ ಮತ್ತು ನನಗೆ ತಿಳಿಸದೆ ನನ್ನಹೆಸರು ಮತ್ತು ಭಾವಚಿತ್ರಗಳನ್ನು ಈ ಸಂಘದವರು ಬಳಸುತ್ತಿದ್ದಾರೆ. ಕಲಾವಿದನಾಗಿ ನಾನು ನನ್ನ ಅಭಿಮಾನಿಗಳಿಂದ ಪ್ರೀತಿವಿಶ್ವಾಸಗಳನ್ನು ಅಪೇಕ್ಷಿಸುತ್ತೇನೆಯೇ ವಿನಾ ನನ್ನಹೆಸರಿನಲ್ಲಿ ಯಾವುದೇ ಸಂಘವನ್ನಾಗಲೀ, ಅಥವಾ ಸಂಸ್ಥೆಯನ್ನಾಗಲೀ ರಚಿಸುವುದು ನನಗೆ ಸ್ವಲ್ಪವೂ ಇಷ್ಟವಿಲ್ಲವೆಂದು ಅನೇಕ ವರ್ಷಗಳ ಹಿಂದೆಯೇ ಸ್ಪಷ್ಟಪಡಿಸಿದ್ದೇನೆ’ ಎಂದಿದ್ದರು. ಮುಂದೆ ೧೯೯೧ರ ಡಿಸೆಂಬರ್ ತಿಂಗಳಲ್ಲಿ ನಡೆದ ಬೆಂಗಳೂರು ಬಂದ್ ವೇಳೆ ಆದ ಹಿಂಸಾತ್ಮಕ ಘಟನೆಗಳಲ್ಲಿ ಸಂಘದ ಜೊತೆ ಅವರ ಹೆಸರೂ ಥಳಕು ಹಾಕಿಕೊಂಡ ನಂತರ ಅದನ್ನು ಬರಖಾಸ್ತು ಮಾಡಲಾಗಿತ್ತು.
ಡಿಜಿಟಲ್ ಮಾಧ್ಯಮಗಳಿಲ್ಲದ ದಿನಗಳವು. ಈಗ ಹಾಗಿಲ್ಲ. ಯಾರು ಬೇಕಾದರೂ ಏನು ಬೇಕಾದರೂ ಸಾಮಾಜಿಕ ತಾಣಗಳ ಮೂಲಕ, ಡಿಜಿಟಲ್ ವಾಹಿನಿಗಳ ಮೂಲಕ ತಾರಾಲೋಕಕ್ಕೆ ಇಣುಕಬಹುದು. ಅಲ್ಲಿನ ಕುರಿತು ತಮಗೆ ತೋಚಿದಂತೆ ಹೇಳಬಹುದು. ಟ್ವಿಟರ್, ಇನ್ಸ್ಟಾಗ್ರಾಂ, ಫೇಸ್‌ಬುಕ್‌ಗಳ ಮೂಲಕ ತಮ್ಮ ಅಭಿಮಾನಿಗಳನ್ನುಸೆಲೆಬ್ರಿಟಿಗಳು ತಲಪಬಹುದು. ಇದು ಕೆಲವೊಮ್ಮೆ ಪೂರಕವಾದರೆ ಕೆಲವೊಮ್ಮೆ ಉದ್ಯಮದಲ್ಲಿ ಮಾರಕವೂ ಆಗಬಹುದು.
ಇತ್ತೀಚೆಗೆ ಕನ್ನಡದ ಇಬ್ಬರು ಜನಪ್ರಿಯ ನಟರ ನಡುವಿನ ಸ್ನೇಹಕ್ಕೆ ಇದು ಕುತ್ತಾದ ಪ್ರಸಂಗವನ್ನು ಅವರಅಭಿಮಾನಿಗಳು ಮರೆತಿರಲಾರರು.
ಪುನೀತ್ ರಾಜಕುಮಾರ್ ಅವರ ನಿಧನಾ ನಂತರ, ಕೆಲವು ದಿನಗಳ ಕಾಲ ಎಲ್ಲ ಜನಪ್ರಿಯ ನಟರ ಅಭಿಮಾನಿಗಳೂ ತಮ ್ಮತಮ ್ಮಭಿನ್ನಾಭಿಪ್ರಾಯಗಳನ್ನು ಮರೆತು, ಪ್ರತಿಯೊಬ್ಬ ನಟರ ಚಿತ್ರಗಳನ್ನುಪ್ರೋತ್ಸಾಹಿಸುವ ನಿರ್ಧಾರದ ಮಾತುಗಳು, ಹೇಳಿಕೆಗಳು ಸಾಮಾಜಿಕ ತಾಣಗಳಲ್ಲಿ ಕಾಣಿಸಿಕೊಂಡಿದ್ದು ಕನ್ನಡ ಚಿತ್ರರಂಗದ ದೃಷ್ಟಿಯಿಂದ ತುಂಬಾ ಆರೋಗ್ಯಕರವಾದ ಯೋಚನೆ ಇದು. ಆದರೆ ಅದು ಕಾರ್ಯಗತವಾಗುವ ಸೂಚನೆ ಇದೆಯೇ? ಸಂಬಂಧಪಟ್ಟವರೇ ಹೇಳಬೇಕು.