Light
Dark

ಸಂಪಾದಕೀಯ: ಆಡಳಿತಕ್ಕೆ ಯಾವುದರತ್ತ ಕಾಳಜಿ? ಕೆಆರ್‌ಎಸ್‌ ಅಣೆಕಟ್ಟೆಯೋ? ಕಲ್ಲು ಗಣಿಗಾರಿಕೆಯೋ?

ಹೌದು. ಹೀಗೊಂದು ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಕಾವೇರಿ ನದಿಗೆ ಅಡ್ಡಲಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮರಮನೆಯ ಚಿನ್ನಾಭರಣವನ್ನು ಮುಂಬೈ ಪೇಟೆಯಲ್ಲಿ ಮಾರಿ ಕನ್ನಂಬಾಡಿ ಅಣೆಕಟ್ಟೆ ನಿರ್ಮಿಸಿದ್ದು, ಆ ಮೂಲಕ ಮೈಸೂರು, ಮಂಡ್ಯ ಜಿಲ್ಲೆಯನ್ನು ಹಸಿರಾಗಿಸಿದ್ದಲ್ಲದೆ, ಬೆಂಗಳೂರಿಗೆ ಕುಡಿಯುವ ನೀರು ತಲುಪಿಸಿದ್ದು, ಶಿಂಷಾ ಜಲವಿದ್ಯುದಾಗಾರದಿಂದ ವಿದ್ಯುತ್ ಉತ್ಪತ್ತಿ ಮಾಡಿ ಮನೆಮನೆಗೆ ದೀಪ ನೀಡಿದ್ದು ಎಲ್ಲವೂ ಇತಿಹಾಸ. ಮಂಡ್ಯ ಜಿಲ್ಲೆಯ ಆರ್ಥಿಕತೆಯ ಸ್ವರೂಪವನ್ನೇ ಬದಲಿಸಿದ್ದು ಈ ಅಣೆಕಟ್ಟೆ!

ಹೀಗಿರುವಾಗ ಜತೆಜತೆಯಲ್ಲೇ ಅಭಿವೃದ್ಧಿ ಕೆಲಸವೂ ಸಾಗಬೇಕು. ಎಂದರೆ ಯಾವುದೇ ಕಟ್ಟಡ ನಿರ್ಮಾಣವಾಗಲು ಭದ್ರ ಬುನಾದಿ ಒದಗಿಸುವುದೇ ಕಲ್ಲು. ಅಣೆಕಟ್ಟೆಯ ಸುಮಾರು ೨೫-೩೦ ಕಿ.ಮೀ. ವ್ಯಾಪ್ತಿಯಲ್ಲಿ ಬೇಬಿಬೆಟ್ಟ ಸೇರಿದಂತೆ ಅನೇಕ ಗಣಿ ಪ್ರದೇಶಗಳಿವೆ. ಬಹಳ ವರ್ಷಗಳಿಂದ ಇಲ್ಲಿ ಗಣಿಗಾರಿಕೆ ನಡೆದಿದೆ. ಇಲ್ಲಿಂದ ಅನೇಕ ನಗರಗಳಿಗೆ, ಗ್ರಾಮೀಣ ಪ್ರದೇಶಗಳಿಗೆ ಸೈಜ್ ಕಲ್ಲು, ಜಲ್ಲಿಕಲ್ಲುಗಳು ಸಹಸ್ರಾರು ಲಾರಿಗಳಲ್ಲಿ ರವಾನೆಯಾಗಿವೆ. ಇಲ್ಲೂ ಸಹಸ್ರಾರು ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಹಲವರು ಸಕ್ರಮ ಮತ್ತೆ ಕೆಲವರು ಅಕ್ರಮ ಗಣಿ ಮಾಡುತ್ತಿದ್ದರೂ ಟೇಬಲ್ ಕೆಳಗಡೆ ವ್ಯವಹಾರದಿಂದ ಎಲ್ಲ ಸರಾಗವಾಗಿ ನಡೆದುಕೊಂಡು ಬಂದಿತ್ತು.

ಆದರೆ, ಶಾಸಕರಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯ ಅವರು ಈ ಗಣಿಗಾರಿಕೆಗಳಿಂದ ಕೆಆರ್‌ಎಸ್‌ಗೆ ಅಪಾಯ ಒದಗಿಬಂದಿದೆ ಎಂದು ಮೊದಲಬಾರಿಗೆ ದನಿಯೆತ್ತಿದರು. ಅಲ್ಲಿಂದ ಇಲ್ಲಿನವರೆಗೂ ಕಲ್ಲುಗಣಿಗಾರಿಕೆ ವಿರುದ್ಧದ ಹೋರಾಟ ಸಾಗುತ್ತಲೇ ಬಂದಿದೆ. ತೀರಾ ಇತ್ತೀಚೆಗೆ ಮಂಡ್ಯ ಸಂಸದೆ ಸುಮಲತಾ ಡ್ಯಾಂನಲ್ಲಿ ಬಿರುಕು ಬಿಟ್ಟಿದೆ ಎಂದಾಗ ಬೆಚ್ಚಿಬಿದ್ದವರು ಅಧಿಕಾರಿಗಳಲ್ಲ ಜನಸಾಮಾನ್ಯರು! ಯಾವ ಸ್ಥಳದಲ್ಲಿ ಬಿರುಕು ಬಿಟ್ಟಿದೆ ಎಂದು ಅವರೂ ಹೇಳಲಿಲ್ಲ, ಇಂಜಿನಿಯರ್‌ಗಳೂ ಅದನ್ನು ಸ್ಪಷ್ಟವಾಗಿ ಕೇಳಿ ತಿಳಿಯಲು ಮುಂದಾಗಲೇ ಇಲ್ಲ. ಎಂದರೆ ಡ್ಯಾಂನಲ್ಲಿ ಬಿರುಕು ಬಿಟ್ಟಿದೆ ಎಂದು ಸಂಸದರೇ ಹೇಳಿದರೂ ಜನಸಾಮಾನ್ಯರಿಗೆ ವಾಸ್ತವಾಂಶ ತಿಳಿಸುವ ಗೋಜಿಗೆ ಸರ್ಕಾರ ಮುಂದಾಗಲೇ ಇಲ್ಲ.

ಹಿಂದೆ ಅಣೆಕಟ್ಟೆಯಿಂದ ವರುಣಾ ನಾಲೆಗೆ ನೀರು ದೊರಕಿಸಲು ಅಣೆಕಟ್ಟೆಯಲ್ಲೇ ಸ್ಪೋಟ ಮಾಡಿರಲಿಲ್ಲವೇ? ಈಗ ಅಣೆಕಟ್ಟೆಯಿಂದ ಇಪ್ಪತ್ತು ಕಿ.ಮೀ. ದೂರದಲ್ಲಿ ಸ್ಪೋಟ ಮಾಡಿದರೆ ಅಣೆಕಟ್ಟೆ ಅದುರುತ್ತದಾ? ಎಂಬ ಪ್ರಶ್ನೆ ಗಣಿ ಮಾಲೀಕರದು. ಹೀಗೆ ಆರಂಭವಾದ ಗಣಿ ಗಲಾಟೆ ಈಗ ತಾರಕಕ್ಕೇರಿದೆ.
ತಜ್ಞರಿಂದ ಪ್ರಾಯೋಗಿಕ ಸ್ಫೋಟ ನಡೆಸಿ ನಿಜಾಂಶ ತಿಳಿಯೋಣ ಎಂಬುದು ಜಿಲ್ಲಾಡಳಿತದ ಯೋಜನೆ. ಡ್ಯಾಂ ತುಂಬಿ ನಿಂತಿದೆ ಈ ಸನ್ನಿವೇಶದಲ್ಲಿ ಸ್ಫೋಟ ನಡೆಸಿದರೆ ಆಗುವ ಪರಿಣಾಮದ ಬಗ್ಗೆ ಅರಿವಿಲ್ಲವೇ ಎಂದು ರೈತಸಂಘದವರು ಬಿಗಿಪಟ್ಟು ಹಿಡಿದಿದ್ದಾರೆ. ಯಾವುದೇ ಕಾರಣಕ್ಕೂ ಸ್ಫೋಟಕ್ಕೆ ಅವಕಾಶ ನೀಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ೨.೪೫ ಲಕ್ಷ ಹೆಕ್ಟೇರ್ ಭೂಮಿ ಹಾಗೂ ಕೋಟ್ಯಂತರ ಜನರಿಗೆ ಕುಡಿಯುವ ನೀರು ಕೆಆರ್‌ಎಸ್ ನಿಂದ ಲಭ್ಯವಾಗುತ್ತಿದೆ. ಇದರ ಸುರಕ್ಷತೆ ಕಡೆಗಣಿಸಿ ಅಧಿಕಾರಿಗಳು ಪರೀಕ್ಷಾರ್ಥ ಸ್ಫೋಟಕ್ಕೆ ಅನುಮತಿ ನೀಡುವ ಮೂಲಕ ಗಣಿ ಮಾಲೀಕರ ಹಿತ ಕಾಯುತ್ತಿದ್ದಾರೆ ಎಂಬುದು ರೈತ ನಾಯಕರ ಆರೋಪ. ಅಣೆಕಟ್ಟೆಯ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಆದರೆ ರೈತ ಸಂಘದವರು, ಸಂಸದರು ಇಲ್ಲಿ ಬಂದು ರಾಜಕಾರಣ ಮಾಡಲು ಮುಂದಾಗಿದ್ದಾರೆ. ಪ್ರಾಯೋಗಿಕ ಸ್ಫೋಟ ನಡೆಸಿ ತಜ್ಞರು ನೀಡುವ ವರದಿಯ ತನಕ ಏಕೆ ಕಾಯಬಾರದು ಎಂಬ ಪ್ರಶ್ನೆ ಗಣಿಮಾಲೀಕರದ್ದು.

ಈ ನಡುವೆ, ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರು, ಬೇಬಿ ಬೆಟ್ಟದ ೧,೬೫೦ ಎಕರೆ ಪ್ರದೇಶ ೧೯೫೦ರಿಂದಲೇ ರಾಜವಂಶಸ್ಥರಿಗೆ ಸೇರಿದೆ. ಭಾರತ ಸರ್ಕಾರದ ಜತೆ ಮೈಸೂರು ಸಂಸ್ಥಾನ ಮಾಡಿಕೊಂಡ ಆಸ್ತಿ ಹಂಚಿಕೆಯ ಪತ್ರದಲ್ಲೂ ಬೇಬಿ ಬೆಟ್ಟ ರಾಜಮನೆತನಕ್ಕೆ ಸೇರಿದ್ದೆಂದು ಉಲ್ಲೇಖ ಇದೆ. ಇದು ಖಾಸಗಿ ಆಸ್ತಿ. ಇಲ್ಲಿ ಪ್ರಾಯೋಗಿಕ ಸ್ಪೋಟ ಮಾಡುವುದು ಸರಿಯಲ್ಲ. ಸ್ಪೋಟಕ್ಕೆ ತಜ್ಞರು ಸರ್ಕಾರಿ ಜಾಗವನ್ನು ಗುರುತಿಸಿಕೊಳ್ಳಬೇಕು ಎಂದು ತಮ್ಮ ಹಕ್ಕು ಮಂಡಿಸಿದ್ದಾರೆ.

ಬೇಬಿ ಬೆಟ್ಟದ ಜಾಗವನ್ನು ಉದ್ದೇಶಪೂರ್ವಕವಾಗಿ ಬಿ ಖರಾಬು ಪಟ್ಟಿಗೆ ಸೇರಿಸಲಾಗಿತ್ತು. ಹೀಗಾಗಿ ನಾನು ಆ ಜಾಗದ ವಿಚಾರದಲ್ಲಿ ನ್ಯಾಯಾಲಯಕ್ಕೆ ಹೋಗಿರಲಿಲ್ಲ. ಮೈಸೂರಿನ ಕುರುಬಾರಹಳ್ಳಿ ಬಿ ಖರಾಬು ಜಾಗದ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಮಾನವಾಗಿದ್ದು, ಅರಮನೆ ಪರ ತೀರ್ಪು ಬಂದಿದೆ. ಆ ತೀರ್ಪು ಬೆಟ್ಟದ ಜಾಗಕ್ಕೂ ಅನ್ವಯವಾಗಲಿದ್ದು, ಆ ಜಾಗ ನಮ್ಮ ವ್ಯಾಪ್ತಿಗೆ ಬಂದರೆ ನಾನು ಅಲ್ಲಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂಬುದು ಪ್ರಮೋದಾ ದೇವಿ ಅವರ ಸ್ಪಷ್ಟ ನುಡಿ.

ಇದಕ್ಕೆ ಪೂರಕವಾಗಿಯೇ ರೈತಸಂಘ ಕೂಡ ಅಮೃತ್‌ಮಹಲ್ ಕಾವಲ್ ಉಳಿಸಿ ಹೋರಾಟ ಆರಂಭಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದರು. ಇತ್ತ ಹೋರಾಟಕ್ಕೊಂದು ತಿರುವು ನೀಡಿದಂತೆ ಕಲ್ಲು ಗಣಿ ಕಾರ್ಮಿಕನೊಬ್ಬ ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ವಿಚಾರವನ್ನು ಮುಂದು ಮಾಡಿ ಗಣಿ ಮಾಲೀಕರು, ಪೋಷಕರು, ಗ್ರಾಮಸ್ಥರು ಗಣಿಗಾರಿಕೆಗೆ ಅನುಮತಿ ನೀಡದಿದ್ದರೆ ಇನ್ನಷ್ಟು ಸಾವು-ನೋವುಗಳನ್ನು ಕಾಣಬೇಕಾಗುತ್ತದೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇದೆಲ್ಲದರ ನಡುವೆ ಹೈರಾಣಾಗಿರುವವರು ಮಾತ್ರ ಬಡ ಕೂಲಿ ಕಾರ್ಮಿಕರು ಎನ್ನುವಂತೆಯೇ ಜಿಲ್ಲಾಡಳಿತದ ಅಧಿಕಾರಿಗಳು ಕೂಡ ಸ್ವತಂತ್ರ ನಿರ್ಧಾರಕ್ಕೆ ಬರಲಾಗದೆ ಚಡಪಡಿಸುತ್ತಿರುವುದು ಸ್ಪಷ್ಟವಾಗಿದೆ.

ಗಣಿ ಕಾರ್ಮಿಕರ ಬದುಕು ಎಷ್ಟು ಮುಖ್ಯವೋ ಅಣೆಕಟ್ಟೆಯ ಸುರಕ್ಷತೆಯೂ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರ ವೈಜ್ಞಾನಿಕ ತಂತ್ರಜ್ಞಾನ ಬಳಸಿಕೊಂಡು ನಿರ್ಧಾರಕೈಗೊಳ್ಳಬೇಕಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ