Mysore
27
broken clouds
Light
Dark

ವೈಡ್ ಆಂಗಲ್: ಕನ್ನಡ ಚಿತ್ರಗಳ ಎತ್ತಂಗಡಿಗೆ ಕಾರಣವಾಗುತ್ತಿರುವ ಪರಭಾಷಾ ಚಿತ್ರಗಳು

ಮೊನ್ನೆ ಸೋಮವಾರ, ಜನವರಿ ೯ರಂದು ೯೫ನೇ ಅಕಾಡೆಮಿ ಪ್ರಶಸ್ತಿ(ಆಸ್ಕರ್)ಗಳಿಗೆ ಸ್ಪಧಿಸಲು ಅರ್ಹತೆ ಪಡೆದಿರುವ ೩೦೧ ಚಿತ್ರಗಳ ಪಟ್ಟಿ ಪ್ರಕಟವಾಯಿತು. ಹಾಲಿವುಡ್ ಪಾಲಿಗೆ ಸಿನಿಮಾಲೋಕದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಇದು. ಆದರೆ ಈಗ ಅದು ಹಾಲಿವುಡ್‌ಗೆ ಮಾತ್ರ ಸೀಮಿತವಾಗಿಲ್ಲ. ಇತರ ದೇಶಗಳೂ ಅಲ್ಲಿ ಸ್ಪಧಿಸುತ್ತಿವೆ. ಈ ಹಿಂದೆ ಉಳಿದ ದೇಶಗಳ ಚಿತ್ರಗಳಲ್ಲಿ ಯಾವುದಾದರೊಂದು ‘ಅತ್ಯುತ್ತಮ ವಿದೇಶಿ ಚಿತ್ರ’ ಪ್ರಶಸ್ತಿ ಪಡೆಯುತ್ತಿತ್ತು. ಈಗ ಆ ಪ್ರಶಸ್ತಿಗೆ ‘ಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರ’ ಎಂದು ಮರುನಾಮಕರಣ ಮಾಡಲಾಗಿದೆ. ಈ ಪ್ರಶಸ್ತಿಗಾಗಿ ಪ್ರತಿಯೊಂದು ದೇಶದಿಂದ ಒಂದು ಚಿತ್ರವನ್ನು ಕಳುಹಿಸಲಾಗುತ್ತದೆ. ಈ ಬಾರಿ ಭಾರತದಿಂದ ‘ದ ಚೆಲ್ಲೋ ಶೋ’, ಗುಜರಾತಿ ಚಿತ್ರವನ್ನು ಕಳುಹಿಸಲಾಗಿದೆ. ಪ್ರಶಸ್ತಿಗಾಗಿ ೨ನೇ ಹಂತದ ಆಯ್ಕೆಯಲ್ಲಿ ಈ ಚಿತ್ರವೂ ಇದೆ.

ಆಸ್ಕರ್ ಪ್ರಶಸ್ತಿಗೆ ಪರಿಗಣಿಸಲು ಯಾವುದೇ ದೇಶದ, ಯಾವುದೇ ಭಾಷೆಯ ಚಿತ್ರ, ಅಮೆರಿಕದ ಲಾಸ್ ಏಂಜಲೀಸ್ ಕೌಂಟಿ, ನ್ಯೂಯಾರ್ಕ್ ನಗರ, ಕೊಲ್ಲಿ ಪ್ರದೇಶ, ಚಿಕಾಗೋ, ಇಲಿನಾಯ್ಸ್, ಮಿಯಾಮಿ, ಫ್ಲೋರಿಡಾ ಮತ್ತು ಅಟ್ಲಾಂಟಾ, ಜಾರ್ಜಿಯಾ ಈ ನಗರಗಳ ಯಾವುದಾದರೊಂದು ಚಿತ್ರಮಂದಿರದಲ್ಲಿ ಆಯಾ ವರ್ಷದ ಜ.೧ ಮತ್ತು ಡಿ.೩೧ ನಡುವೆ ಪ್ರವೇಶದರ ಪಡೆದು ಕನಿಷ್ಠ ಏಳು ದಿನಗಳ ಪ್ರದರ್ಶನ ಕಂಡಿರಬೇಕು. ಹಾಗೆ ತೆರೆಕಂಡು ಅರ್ಹತೆ ಪಡೆದ ಚಿತ್ರಗಳಲ್ಲಿ ಭಾರತದಿಂದ ಹೊಂಬಾಳೆ ಸಂಸ್ಥೆಗಾಗಿ ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’, ಜಾಕ್ ಮಂಜು ಅವರಿಗಾಗಿ ಅನೂಪ್ ಭಂಡಾರಿ ನಿರ್ದೇಶಿಸಿ, ಸುದೀಪ್ ಮುಖ್ಯಭೂಮಿಕೆ ನಿರ್ವಹಿಸಿದ ‘ವಿಕ್ರಾಂತ್‌ರೋಣ’ ಸೇರಿವೆ. ಇವುಗಳ ಜೊತೆಗೆ ಭಾರತದಿಂದ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’, ಸಂಜಯ್ ಲೀಲಾ ಭನ್ಸಾಲಿಯವರ ‘ಗಂಗೂಬಾಯಿ ಖಾತಿಯಾವಾಡಿ’, ಮಾಧವನ್ ಅವರ ‘ರಾಕೆಟ್ರಿ: ದ ನಂಬಿ ಎಫೆಕ್ಟ್’, ‘ಮಿ ವಸಂತರಾವ್’, ‘ತುಜ್ಯಾಸಾಥಿ ಕಹೀಹೈ’, ‘ದ ಕಾಶ್ಮೀರ ಫೈಲ್ಸ್’, ‘ಇರವಿನ್‌ನಿಳಲ್’ ಚಿತ್ರಗಳು ಸೇರಿವೆ.

ಕಳೆದ ವರ್ಷದ ಜನವರಿ ಮೊದಲ ದಿನದಿಂದ ಡಿಸೆಂಬರ್ ಕೊನೆಯ ದಿನದ ವರೆಗೆ ತೆರೆಕಂಡ ಚಿತ್ರಗಳಲ್ಲಿ, ಆಸ್ಕರ್ ಸ್ಪರ್ಧೆಗೆ ಅರ್ಜಿ ಸಲ್ಲಿಸಿದ ಚಿತ್ರಗಳ ಪಟ್ಟಿ ಇದೆ. ಅಮೆರಿಕದಲ್ಲಿ ಯಶಸ್ವಿಯಾಗಿ ಪ್ರದರ್ಶನಕಂಡ ‘ಕೆಜಿಎಫ್ ಚಾಪ್ಟರ್ ೨’ ಮತ್ತು ‘೭೭೭ ಚಾರ್ಲಿ’ ಚಿತ್ರಗಳು ಈ ಪಟ್ಟಿಯಲ್ಲಿಲ್ಲ. ಬಹುಶಃ ಅವು ಅರ್ಜಿ ಸಲ್ಲಿಸುವ ಕೊನೆಯ ದಿನವಾಗಿದ್ದ ನ.೧೫ರ ಒಳಗೆ ಸಲ್ಲಿಸದೆ ಇರಬಹುದು, ಇಲ್ಲವೇ ಸಲ್ಲಿಸುವುದು ಬೇಡ ಎಂದುಕೊಂಡಿರಬಹುದು.

ಕನ್ನಡ ಚಿತ್ರಗಳು ಅಕಾಡೆಮಿ ಪ್ರಶಸ್ತಿಯ ಸ್ಪರ್ಧೆಗೆ ಅರ್ಹತೆ ಪಡೆಯು ತ್ತಿರುವುದು ಮೊದಲೇನಲ್ಲ. ಈ ಹಿಂದೆ ಮಾಸ್ಟರ್‌ಕಿಶನ್ ನಿರ್ದೇಶನದ ‘ಕೇರಾಫ್ ಫುಟ್‌ಪಾತ್ ೨’ ೨೦೧೫ರಲ್ಲಿ, ಅನೂಪ್ ಭಂಡಾರಿ ನಿರ್ದೇಶಿಸಿದ್ದ ‘ರಂಗಿತರಂಗ’ ೨೦೧೬ರಲ್ಲಿ ಅರ್ಹತೆ ಪಡೆದ ಕನ್ನಡ ಚಿತ್ರಗಳಾಗಿದ್ದವು. ಕಿಶನ್ ಅವರಂತೂ, ಆಸ್ಕರ್‌ಗಾಗಿಯೇ ಈ ಚಿತ್ರವನ್ನು ನಿರ್ದೇಶಿಸಿದ್ದೇ ಅಲ್ಲದೆ, ಲಾಸ್‌ಏಂಜಲ್ಸ್ ನಲ್ಲಿರುವ ಲೆಮ್ಲೆ ಚಿತ್ರಮಂದಿರದಲ್ಲಿ ಅದನ್ನು ಒಂದು ವಾರ ಪ್ರದರ್ಶಿಸಿದ್ದರು. ಮೂರು ಪರದೆಗಳ ಆ ಚಿತ್ರಮಂದಿರದಲ್ಲಿ ಸಾಮಾನ್ಯವಾಗಿ ಆಸ್ಕರ್ ಅರ್ಹತೆಗಾಗಿ ಚಿತ್ರಗಳ ಪ್ರದರ್ಶನ ಆಗುವುದೇ ಹೆಚ್ಚು ಎನ್ನಲಾಗಿದೆ.

ಈಗಾಗಲೇ ಹತ್ತು ವಿಭಾಗಗಳಿಗೆ ಸ್ಪಽಸಲಿರುವ ಚಿತ್ರಗಳನ್ನು ಅಕಾಡೆಮಿ ಪ್ರಕಟಿಸಿದೆ. ಅದರಲ್ಲಿ ಅಂತಾರಾಷ್ಟ್ರೀಯ ಚಿತ್ರ, ಅತ್ಯುತ್ತಮ ಗೀತೆ, ಅತ್ಯುತ್ತಮ ಹಿನ್ನೆಲೆ ಸಂಗೀತ ವಿಭಾಗಗಳು ಸೇರಿದ್ದು, ‘ಆರ್‌ಆರ್‌ಆರ್’ನ ‘ನಾಟುನಾಟು’ ಹಾಡು ಸೇರಿದೆ. ಅದು ಲಹರಿ ಸಂಸ್ಥೆ ಹೊರತಂದ ಆಡಿಯೊ. ‘ದ ಚೆಲ್ಲೋ ಶೋ’ ಚಿತ್ರದ ಸಂಕಲನಕಾರರು ದಕ್ಷಿಣ ಕನ್ನಡದವರು.

ಈಗ ಆಯ್ಕೆಯಾದ ಚಿತ್ರಗಳಲ್ಲಿ ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಪೋಷಕ ನಟಿ, ಅತ್ಯುತ್ತಮ ಅನಿಮೇಶನ್ ಚಿತ್ರ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಉಡುಪು ವಿನ್ಯಾಸ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಸಂಕಲನ, ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ಮಾಣ ವಿನ್ಯಾಸ (ಕಲಾ ನಿರ್ದೇಶನ), ಅತ್ಯುತ್ತಮ ಚಿತ್ರಕಥೆ (ಒರಿಜಿನಲ್), ಅತ್ಯುತ್ತಮ ಚಿತ್ರಕಥೆ (ಅಡಾಪ್ಟೆಡ್) ಇವುಗಳ ಆಯ್ಕೆಯಾಗಬೇಕು. ಅದು ಇನ್ನೂ ಎರಡು ಹಂತಗಳಲ್ಲಿ ನಡೆಯಲಿದೆ. ಅಕಾಡೆಮಿಯ ಹತ್ತು ಸಾವಿರದಷ್ಟು ಮಂದಿ ವಿವಿಧ ವಿಭಾಗಗಳ ಸದಸ್ಯರು ತಮ್ಮ ತಮ್ಮ ವಿಭಾಗಗಳ ಶ್ರೇಷ್ಠರನ್ನು ಗುರುತಿಸಲು, ನಿನ್ನೆ (ಜ.೧೨)ಯಿಂದ ಆಯ್ಕೆ ಪ್ರಕ್ರಿಯೆ ಆರಂಭಿಸಿದ್ದು, ೧೭ರಂದು ಕೊನೆಯಾಗಲಿದೆ. ಜನವರಿ ೨೪ರಂದು ಅಂತಿಮ ಹಂತದಲ್ಲಿ ಸ್ಪಽಸಲಿರುವ ಚಿತ್ರಗಳ, ಕಲಾವಿದ, ತಂತ್ರಜ್ಞರ ಪ್ರಕಟಣೆ ಆಗಲಿದೆ. ಅಂತಿಮ ಆಯ್ಕೆ ಮಾರ್ಚ್ ೨ರಿಂದ ೭ರವರೆಗೆ ನಡೆಯಲಿದೆ. ಪ್ರಶಸ್ತಿ ಪ್ರದಾನ ಮಾರ್ಚ್ ೧೨ರಂದು ನಡೆಯಲಿದೆ. ಅತ್ಯುತ್ತಮ ಚಿತ್ರವನ್ನು ಹೊರತು ಪಡಿಸಿ, ವಿವಿಧ ವಿಭಾಗಗಳಿಗೆ ಆಯಾ ವಿಭಾಗದ ಸದಸ್ಯರು ಮತ ನೀಡುತ್ತಾರೆ.

ಈ ಮತಗಳ ಎಣಿಕೆಯನ್ನು ಪ್ರೈಸ್ ವಾಟರ್‌ಹೌಸ್ ಕೂಪರ್ಸ್ ಹೆಸರಿನ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯ ತಂಡವೊಂದು ರಹಸ್ಯ, ಸುರಕ್ಷಿತ ಸ್ಥಳದಲ್ಲಿ ಮಾಡುತ್ತದೆ. ಸರಿಸುಮಾರು ಈ ಕೆಲಸಕ್ಕಾಗಿ ೧೭೦೦ ಗಂಟೆಗಳು ಬೇಕಾಗುತ್ತದೆ ಎನ್ನುವುದು ಕಂಪೆನಿಯ ಹೇಳಿಕೆ. ಈ ಆಯ್ಕೆಯ ಪ್ರಕಟಣೆ ಪ್ರಶಸ್ತಿ ಪ್ರದಾನದ ವೇದಿಕೆಯಲ್ಲೇ ಆಗುತ್ತದೆ. ಅಂತಿಮ ಹಂತದಲ್ಲಿರುವ ಎಲ್ಲ ಸ್ಪಧಿಗಳೂ ಈ ಸಮಾರಂಭದಲ್ಲಿ ಹಾಜರಿರುತ್ತಾರೆ.

ಭಾರತದಿಂದ ಅಽಕೃತ ಆಯ್ಕೆಯಾಗದೆ ಇದ್ದ ‘ಆರ್‌ಆರ್‌ಆರ್’ ಚಿತ್ರದ ನಿರ್ದೇಶಕ ರಾಜಮೌಳಿ ತಮ್ಮ ಚಿತ್ರದ ಪ್ರಚಾರವನ್ನು ಆಸ್ಕರ್ ಸದಸ್ಯರ ಗಮನಕ್ಕೆ ತರುವ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಮೊನ್ನೆ ಆ ಚಿತ್ರದ ‘ನಾಟುನಾಟು’ ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಂದದ್ದು, ಅವರ ಪ್ರಚಾರಕ್ಕೆ ಪೂರಕವಾಗಲಿದೆ. ‘ಆರ್‌ಆರ್‌ಆರ್’ ಚಿತ್ರದ ತಂಡವಿಡೀ ಈಗ ಅಮೆರಿಕದಲ್ಲಿ ಪ್ರಚಾರದಲ್ಲಿ ನಿರತವಾಗಿದೆ. ಅದಕ್ಕಾಗಿ ಕೋಟಿಗಟ್ಟಲೆ ಹಣ ವೆಚ್ಚ ಮಾಡುವುದಾಗಿ ಅವರು ಅದಾಗಲೇ ಪ್ರಕಟಿಸಿದ್ದಾರೆ. ಸ್ಪರ್ಧೆಯಲ್ಲಿರುವ ‘ಕಾಂತಾರ’ ಮತ್ತು ‘ವಿಕ್ರಾಂತ್‌ರೋಣ’ ಚಿತ್ರಗಳ ಪ್ರಚಾರದ ಕುರಿತಂತೆ ಇನ್ನೂ ವಿವರಗಳು ಹೊರಬಂದಿಲ್ಲ. ಅರ್ಹತೆ ಪಡೆದ ಚಿತ್ರಗಳ ವಿವರದಲ್ಲಿ ಅದರಲ್ಲಿ ನಟಸಿರುವ ಕಲಾವಿದರ ಹೆಸರುಗಳನ್ನೂ ಪ್ರಕಟಿಸಿದ್ದು, ಅವರೂ ಸ್ಪರ್ಧೆಗೆ ಅರ್ಹರು ಎಂದು ಪ್ರಕಟಿಸಲಾಗಿದೆ. ಇತರ ಪ್ರಶಸ್ತಿಗಳಿಗೆ ಸಂಬಂಧಪಟ್ಟಂತೆ ಅಕಾಡೆಮಿಯ ನಿಯಮಾವಳಿಗೆ ಅನುಗುಣವಾಗಿ ಆಯ್ಕೆ ನಡೆಯುತ್ತದೆ.

ಆಸ್ಕರ್ ಅಂಗಳದಲ್ಲಿ ಕನ್ನಡ ಚಿತ್ರಗಳ ಜೊತೆಗೆ, ದಕ್ಷಿಣದ ತಮಿಳು, ತೆಲುಗು ಚಿತ್ರಗಳೂ ಇವೆಯಷ್ಟೆ, ಅದು ಖುಷಿಯ ವಿಷಯ. ಆದರೆ, ಈ ವಾರ ತೆರೆಗೆ ಬರುತ್ತಿರುವ ತಮಿಳು, ತೆಲುಗು ಚಿತ್ರಗಳು, ಪ್ರದರ್ಶನ ಕಾಣುತ್ತಿರುವ ಹೊಸ ಕನ್ನಡ ಚಿತ್ರಗಳನ್ನು ಅಲ್ಲಿಂದ ಎತ್ತಂಗಡಿ ಮಾಡುತ್ತಿವೆ. ಸಂಕ್ರಾಂತಿಯ ಸಂಭ್ರಮ ಆ ಚಿತ್ರಗಳಿಗಾದರೆ, ಕನ್ನಡ ಚಿತ್ರಗಳ ಪಾಲಿಗೆ ವಿಭ್ರಮವೇ ಸರಿ. ಕಳೆದ ವಾರ ತೆರೆಕಂಡ ಬಹುತೇಕ ಕನ್ನಡ ಚಿತ್ರಗಳ ಎತ್ತಂಗಡಿಯಾಗಿವೆ.

ಈ ವಾರ ತೆರೆ ಕಾಣುತ್ತಿರುವ ಚಿತ್ರಗಳಲ್ಲಿ ‘ವಿರಾಟಪುರ ವಿರಾಗಿ’ ಚಿತ್ರಕ್ಕೆ ಈ ಅಂಕಣ ಮುಗಿಸುವ ಹೊತ್ತಿಗೆ ಬುಕ್ ಮೈ ಶೋ ದಲ್ಲಿ ಕೇವಲ ಒಂದು ಪ್ರದರ್ಶನ ಬೆಂಗಳೂರಿನಲ್ಲಿತ್ತು! ‘ಆರ್ಕೆಸ್ಟ್ರಾ ಮೈಸೂರು’ ಮತ್ತು ‘ಮಂಕುಬಾಯಿ ಫಾಕ್ಸಿರಾಣಿ’ ಚಿತ್ರಗಳಿಗೂ ಬೆರಳೆಣಿಕೆಯ ಪ್ರದರ್ಶನಗಳು!. ತಮಿಳು ಮತ್ತು ತೆಲುಗು ಚಿತ್ರಗಳು ತಲಾ ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಾಣುತ್ತಿವೆ. ಹಿಂದೆಲ್ಲ ಇಂತಹ ಸಂದರ್ಭಗಳಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯು ಮುಂದೆ ಬಂದು ಕನ್ನಡ ಚಿತ್ರಗಳ ಹಿತ ಕಾಯುವ ಪ್ರಯತ್ನ ಮಾಡುತ್ತಿತ್ತು. ನೆರೆಯ ರಾಜ್ಯದಲ್ಲಿ ತೆಲುಗು ಚಿತ್ರ ನಿರ್ಮಾಪಕರ ಸಂಘ, ಸಂಕ್ರಾಂತಿಯ ವೇಳೆ ತೆಲುಗು ಚಿತ್ರಗಳಿಗೆ ಆದ್ಯತೆ ನೀಡಬೇಕು, ಬಾಕಿ ಇದ್ದ ಚಿತ್ರಮಂದಿರಗಳಲ್ಲಿ ಇತರ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಪ್ರದರ್ಶಕರನ್ನು ಒತ್ತಾಯಿಸಿದೆ. ಕನ್ನಡ ಚಿತ್ರೋದ್ಯಮದ ಸಂಘಟನೆಗಳೋ..!?

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ