Mysore
23
overcast clouds

Social Media

ಗುರುವಾರ, 30 ಜುಲೈ 2026
Light
Dark

ಸತ್ಯಮಂಗಲ-ಮೀಣ್ಯಂ ರಸ್ತೆಯಲ್ಲಿ ಸಂಚಾರ ದುಸ್ತರ

ಮಾದೇಶ್ ಗೌಡ

ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ

ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ ಸತ್ಯಮಂಗಲದಿಂದ ಮೀಣ್ಯಂ ಗ್ರಾಮದವರೆಗೆ ಸಂಪರ್ಕ ಕಲ್ಪಿಸುವ ೫ ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಪ್ರಾಣದ ಹಂಗು ತೊರೆದು ಸಂಚರಿಸುವಂತಾಗಿದೆ.

ತಾಲ್ಲೂಕಿನ ರಾಮಾಪುರ ಹೋಬಳಿ ಕೇಂದ್ರದಿಂದ ದಿನ್ನಳ್ಳಿ, ಮೀಣ್ಯಂ, ಹೂಗ್ಯಂ, ನಾಲ್‌ರೋಡ್, ಮಾರ್ಟಳ್ಳಿ ಮಾರ್ಗವಾಗಿ ಒಡೆಕೆಹಳ್ಳ ತಲುಪುವ ೭೨ ಕಿ.ಮೀ. ರಸ್ತೆಯಲ್ಲಿ ಹಿಂದೆ ಶಾಸಕರಾಗಿದ್ದ ಆರ್. ನರೇಂದ್ರ ಅವರು ಸುಮಾರು ೬೦ ಕಿ.ಮೀ. ಅಭಿವೃದ್ಧಿಪಡಿಸಿದ್ದರು. ಆದರೆ ಸತ್ಯಮಂಗಲ, ಸೂಳೆಕೋಬೆ, ಮೀಣ್ಯಂ, ಕೊಪ್ಪ ಗ್ರಾಮದ ಸಮೀಪದ ೫ ಕಿ.ಮೀ. ಹಾಗೂ ನಾಲ್‌ರೋಡ್‌ನಿಂದ ಕೂಡ್ಲೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದಲ್ಲಿ ಅಲ್ಲಲ್ಲಿ ಅಭಿವೃದ್ಧಿ ಪಡಿಸದೇ ಇರುವುದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ.

ರಸ್ತೆಯುದ್ದಕ್ಕೂ ಆಳವಾದ ಗುಂಡಿಗಳು, ಕಿತ್ತು ಹೋಗಿರುವ ಡಾಂಬರು ಮತ್ತು ಹೊಂಡಗಳು ಕಾಣಸಿಗುತ್ತಿವೆ. ಇದರಿಂದಾಗಿ ೧೦ ನಿಮಿಷದಲ್ಲಿ ಕ್ರಮಿಸಬೇಕಾದ ದೂರಕ್ಕೆ ಈಗ ೧ ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತಿದೆ. ಪ್ರತಿದಿನ ವಾಹನಗಳು ಗುಂಡಿಗೆ ಬಿದ್ದು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ. ಈ ಮಾರ್ಗದ ಎರಡೂ ಬದಿಯಲ್ಲಿ ದಟ್ಟ ಕಾಡು ಇರುವುದರಿಂದ ಹುಲಿ, ಚಿರತೆ, ಕಾಡು ಎಮ್ಮೆ, ಕರಡಿ ಸೇರಿದಂತೆ ವನ್ಯಮೃಗಗಳ ಹಾವಳಿಯಿದ್ದು, ದಾಳಿ ಭೀತಿ ಸವಾರರನ್ನು ಕಾಡುತ್ತಿದೆ.

ರಸ್ತೆ ಸಂಪೂರ್ಣ ಗುಂಡಿಮಯವಾಗಿರುವುದರಿಂದ ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಗ್ರಾಮಸ್ಥರು ತುರ್ತು ಚಿಕಿತ್ಸೆಗೂ ಪರದಾಡುವಂತಾಗಿದೆ. ಹಲವಾರು ಬಾರಿ ಲೋಕೋಪಯೋಗಿ ಇಲಾಖೆಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹಲವಾರು ವರ್ಷಗಳಿಂದ ರಸ್ತೆ ಅಭಿವೃದ್ಧಿಪಡಿಸುವಂತೆ ಶಾಸಕ ಮಂಜುನಾಥ್ ರವರಿಗೆ ಮನವಿ ಮಾಡಲಾಗಿದೆ. ಆದರೆ, ರಸ್ತೆ ಅಭಿವೃದ್ಧಿ ಮಾಡಿಲ್ಲ. ಮುಂದಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿ ಮಾಡದಿದ್ದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

” ಸತ್ಯಮಂಗಲದಿಂದ ಕೊಪ್ಪ ಗ್ರಾಮದವರೆಗಿನ ಐದು ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲು ೧೩ ಕೋಟಿ ರೂ. ವೆಚ್ಚದಲ್ಲಿ ಕ್ರಿಯಾಯೋಜನೆ ತಯಾರು ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ನಂತರ ರಸ್ತೆ ಅಭಿವೃದ್ಧಿಪಡಿಸಲಾಗುವುದು.”

ಚಿನ್ನಣ್ಣ, ಎಇಇ, ಮಹದೇಶ್ವರ ಬೆಟ್ಟ ಉಪವಿಭಾಗ

” ಸತ್ಯಮಂಗಲ ಗ್ರಾಮದಿಂದ ಕೊಪ್ಪ ಗ್ರಾಮದವರೆಗಿನ ರಸ್ತೆ ಸಂಪೂರ್ಣವಾಗಿ ಗುಂಡಿಮಯವಾಗಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಕಾಡು ಪ್ರಾಣಿಗಳ ಹಾವಳಿ ಇರುವುದರಿಂದ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ತೆರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಸಕರು ಇತ್ತ ಗಮನಹರಿಸಿ ರಸ್ತೆ ಅಭಿವೃದ್ಧಿಪಡಿಸಬೇಕು.”

-ನಾಗರಾಜು, ಕೊಪ್ಪ ನಿವಾಸಿ

 

 

Tags:
error: Content is protected !!