ವೀರಪ್ಪನ್ ತಂಡದವರಿಗೆ ಷಕೀಲ್ ಹೆಸರು ಗೊತ್ತಿತ್ತೇ ಹೊರತು ಅವರು ಹೇಗಿದ್ದಾರೆಂದು ಯಾರೂ ನೋಡಿರಲಿಲ್ಲ

ಹತ್ಯೆ ನಡೆದು ವಾರಗಳು ಉರುಳಿದಂತೆ ನಡೆದಿದ್ದ ಸಂಗತಿ ಏನು ಎತ್ತ ಹೇಗೆ ನಿಚ್ಚಳವಾಗತೊಡಗಿತು. ಹಿನ್ನೆಲೆಯಲ್ಲಿ ನಡೆದಿದ್ದ ಕಾರ್ಯತಂತ್ರ, ಕಾರಸ್ಥಾನಗಳತ್ತ ಬೆಳಕು ಹರಡಿತು.
ವೀರಪ್ಪನ್‌ನನ್ನು ಹಿಡಿಯಲು ಷಕೀಲ್ ತಮ್ಮದೇ ಆದ ಮಾಹಿತಿದಾರರ ನ್ನು ಸೆಟಪ್ ಮಾಡಿಕೊಂಡಿದ್ದರು. ವೀರಪ್ಪನ್ ಜೊತೆಗೆ ಸಂಪರ್ಕ ಇರುವವರನ್ನು ಕಂಡು, ಸ್ನೇಹ ಬೆಳೆಸಿ ಮಾಹಿತಿದಾರರಾಗುವಂತೆ ಒಲಿಸಿಕೊಂಡಿದ್ದರು. ವೀರಪ್ಪನ್ ಹಿಡಿದವರಿಗೆ ಇಪ್ಪತ್ತು ಲಕ್ಷ ರೂ. ಬಹುಮಾನ ಘೋಷಣೆಯಾಗಿತ್ತು. ಇದನ್ನೇ ಟ್ರಂಪ್ ಕಾರ್ಡ್ ಮಾಡಿಕೊಂಡಿದ್ದ ಷಕೀಲ್ ನಾನಾ ತಂತ್ರಗಳನ್ನು ಹೆಣೆದಿದ್ದರು.
ನಟ್ರಾಜ ಎಂಬ ಬಾರ್ ಮ್ಯಾನೇಜರ್ ಅವರ ಮಾಹಿತಿದಾರರಲ್ಲೊಬ್ಬ. ವೀರಪ್ಪನ್ ಸುಳಿವು ತಿಳಿಸಿಕೊಟ್ಟರೆ ಇಪ್ಪತ್ತು ಲಕ್ಷ ರೂ. ಕೊಡಿಸುವ ಜವಾಬ್ದಾರಿ ತನ್ನದೆಂಬ ಭರವಸೆ ಕೊಟ್ಟಿದ್ದರು.
ನಟ್ರಾಜ ನೋಡಲು ಮಂಗ ಮಂಗನಂತಿದ್ದರೂ ಶಾಣ್ಯಾತನವಿದ್ದವನು. ಒಳೊಳಗೇ ನಾನಾ ಲೆಕ್ಕಾಚಾರಗಳಿದ್ದ ಐನಾತಿ. ‘ಈ ಇಪ್ಪತ್ತು ಲಕ್ಷದಲ್ಲಿ ನಿಮಗೆಷ್ಟು ಕೊಡಬೇಕು ಸಾರು?’ ಎಂದು ಕೇಳಿದ್ದ.
ನನಗೆ ಸರ್ಕಾರ ಸಂಬಳ ಕೊಡುತ್ತೆ ಕಣೋ. ನಮಗೇ ಬೇರೆ ಬಹುಮಾನ ಇದೆ. ಇದು ಪಬ್ಲಿಕ್ ಜನಗಳಿಗೆ ಕೊಡೋ ಬಹುಮಾನ. ಈ ಪೂರಾ ಇಪ್ಪತ್ತು ಲಕ್ಷ, ಸುಳಿವು ಕೊಟ್ಟು ಸಹಾಯ ಮಾಡುವ ನಿಮ್ಮಂಥವರಿಗೆ . . .’ ಎಂದು ಷಕೀಲ್ ನಂಬಿಸಿದ್ದರು.
ಈ ಬಗೆಯ ಸಾಲಿಡ್ ಆಮಿಷ ಒಡ್ಡದಿದ್ದರೆ ಯಾರಾದರೂ ಮಾಹಿತಿ ಯಾಕೆ ನೀಡಿಯಾರು? ಅದರಲ್ಲೂ ವೀರಪ್ಪನ್‌ನಂತಹ ನರಹಂತಕ ವೀರಪ್ಪನ್‌ನನ್ನು ಎದುರು ಹಾಕಿಕೊಂಡು? ಇಂಥವನು ದ್ರೋಹ ಮಾಡಿದ್ದಾನೆ ಎಂಬ ಕೊಂಚ ಸುಳಿವು ಸಿಕ್ಕರೂ ಸಾಕು ಅಂಥವರನ್ನು ವೀರಪ್ಪನ್ ಊರವರೆದುರಿಗೇ ಕೊಚ್ಚಿ ಕೊಚ್ಚಿ ಹಾಕುತ್ತಿದ್ದ. ಅವರ ಮನೆ ಮಠಗಳನ್ನು ಬರ್ಬಾದ್ ಮಾಡಿ ಬಿಸಾಡುತ್ತಿದ್ದ. ಇದು ಇಡೀ ಮಹದೇಶ್ವರದ ಬೆಟ್ಟಸಾಲಿಗೇ ಗೊತ್ತಿದ್ದ ಭಯಾನಕ ಸತ್ಯ. ಯಾರೊಬ್ಬರೂ ಆ ರಿಸ್ಕ್ ತೆಗೆದುಕೊಳ್ಳಲು ತಯ್ಯಾರಿರಲಿಲ್ಲ.
ಹೀಗಿದ್ದಾಗ ಒಂದು ದಿನ ಮಹತ್ವದ ಲೀಡ್ ಸಿಕ್ಕಿತು.
ವೀರಪ್ಪನ್ ಜೊತೆಗೆ ಲಿಂಕಿದೆ ಎಂದು ಹೇಳಲಾದ ನಾಗ್ರಾಜ ಎಂಬಾತ ಇದ್ದಕ್ಕಿದ್ದಂತೆ ಒಂದಷ್ಟು ದಿನ ಮಾಯವಾಗಿದ್ದ. ಕೂಲಿ ಮಾಡಿಕೊಂಡು ಇದ್ದವನು ಎತ್ತ ಹೋದ ಎಂದು ಒಂದಷ್ಟು ದಿನ ಹುಡುಕಿದ್ದಾರೆ. ಗಡಂಗುಗಳಲ್ಲಿ, ಜೂಜು ಅಡ್ಡೆಗಳಲ್ಲಿ ತಲಾಷ್ ಮಾಡಿದ್ದಾರೆ. ಗಂಧದ ಮರ ಕಡಿಯೋದಿಕ್ಕೆ ಹೋದಾಗ, ಯಾವುದೋ ಕಾಡುಪ್ರಾಣಿಯ ಬಾಯಿಗೆ ಸಿಕ್ಕಿರಬೇಕು ಎಂದು ಸುಮ್ಮನಾಗಿದ್ದಾರೆ.
ರಾಮಾಪುರದಲ್ಲಿ ತಿಂಗಳ ನಂತರ ಪುನಃ ಕಾಣಿಸಿಕೊಂಡ ನಾಗ್ರಾಜ ಒಳ್ಳೊಳ್ಳೆ ದಿರಿಸು ತೊಟ್ಟು ದಿಲ್‌ದಾರನಂತೆ ತಿರುಗುತ್ತಾ ಬಾರು, ಅಡ್ಡೆಗಳಲ್ಲಿ ಅಡ್ಡಾಡುವುದು ಎಲ್ಲರ ಹುಬ್ಬೇರಿಸಿತ್ತು.
ಮೂರು ಕಾಸಿನ ಕೆಲಸ ಮಾಡೋದಿಲ್ಲ. ಇಷ್ಟೊಂದು ಷೋಕಿಗೆ ದುಡ್ಡು ಎಲ್ಲಿಂದ ಬಂತು? ಬಾರಿನ ನಟ್ರಾಜ ಈ ವಿಷಯವನ್ನು ಷಕೀಲ್ ಗೆ ತಿಳಿಸಿದ.
ಮಾಹಿತಿಯನ್ನು ಹೇಗೆ ಹೊರ ತೆಗೆಯಬೇಕೆಂಬುದನ್ನು ಷಕೀಲ್ ಬಿಡಿಸಿ ಹೇಳಿಕೊಟ್ಟರು. ಒಂದು ದಿನ ನಾಗ್ರಾಜನಿಗೆ ಕಂಠ ಪೂರ್ತಿ ಕುಡಿಸಿ ಮಾತಿಗೆಳೆದು ನಟ್ರಾಜ ವಿಷಯ ಹೊರತೆಗೆದ.
೧೦- ೧೨ ದಿನಕ್ಕೊಮ್ಮೆ ನಾಗ್ರಾಜ ರಾಮಾಪುರದಿಂದ ದವಸ ಧಾನ್ಯವನ್ನು ಖರೀದಿಸಿ ಕೊಂಡೊಯ್ದು ವೀರಪ್ಪನ್‌ಗೆ ಒಪ್ಪಿಸುತ್ತಿದ್ದ. ಇದಕ್ಕೆ ಬದಲಾಗಿ ವೀರಪ್ಪನ್ ೨- ೩ ಸಾವಿರ ರೂಪಾಯಿ ಭಕ್ಷೀಸು ಕೊಡುತ್ತಿದ್ದ. ದುಡ್ಡು ಬಂದಂತೆ ನಾಗ್ರಾಜ ಕೂಲಿ ಕೆಲಸಕ್ಕೆ ಹೋಗುವುದನ್ನೇ ಬಿಟ್ಟುಬಿಟ್ಟ. ಷೋಕಿ ಬಟ್ಟೆ ಹಾಕಿಕೊಂಡು, ಎಣ್ಣೆ ಹೊಡೆದುಕೊಂಡು ಅಲ್ಲಿ ಇಲ್ಲಿ ತಿರುಗುತ್ತಿದ್ದ.
ಇವನನ್ನು ಹೇಗೆ ಹ್ಯಾಂಡಲ್ ಮಾಡಬೇಕೆಂಬುದು ಷಕೀಲ್‌ಗೆ ತಿಳಿದಿತ್ತು. ನಟ್ರಾಜನ ಮೂಲಕ ನಾಗ್ರಾಜನಿಗೆ ಹೇಳಿಸಿದರು.
ಆಹಾರ ಧಾನ್ಯ ಕೊಡಲು ವೀರಪ್ಪನ್ ಅಡಗು ದಾಣಕ್ಕೆ ಹೋದ ನಾಗರಾಜ, ‘ನನಗೆ ಗೊತ್ತಿರೋ ಇಬ್ಬರು ಬೆಂಗಳೂರು, ಬಾಂಬೆಯವರ ಜೊತೆ ಸೇರಿಕೊಂಡು ದಂತ, ವಾಸ್ನೆಮರ ( ಶ್ರೀಗಂಧ), ಬಂದೂಕದ ವ್ಯಾಪಾರ ಮಾಡ್ತಿ ದ್ದಾರೆ. ನೀವು ಒಪ್ಪಿದರೆ ಕರೆದುಕೊಂಡು ಬರ್ತೀನಿ’ ಎಂದು ಹೇಳಿದ.
ಬಂದೂಕು ಎಂಬ ಪದ ಕೇಳಿದೊಡನೆ ವೀರಪ್ಪನ್ ಕಿವಿ ನಿಮಿರಿದವು. ಅವನಿಗೆ ಶಸ್ತ್ರಾಸ್ತ್ರಗಳ ಜರೂರತ್ತು ಬಹಳಿತ್ತು. ದುಡ್ಡಿನ ಬದಲಿಗೆ ಕೊಡುವ ಆನೆ ದಂತದ ಸ್ಟಾಕೂ ಹೇರಳವಾಗಿತ್ತು. ಆದರೆ ಈ ಬಾಂಬೆ ವ್ಯಾಪಾರಿಗಳು ಇವನಿಗೆ ಹೇಗೆ ಗೊತ್ತಾದರು? ‘ ಅವರು ನಿನಗೆ ಹೆಂಗೆ ಪರಿಚಯವಾದರು?’ ವೀರಪ್ಪನ್ ಪ್ರಶ್ನೆ.
‘ನಾನು ವಾಸ್ನೆ ಮರಾನ ಮಾರಲು ಕೋವೈಗೆ (ಕೊಯಮತ್ತೂರು) ತಗೊಂಡು ಹೋಗ್ತೀನಲ್ಲಾ? ಅವರ ಹತ್ರಾನೇ ನಾಕೈದು ವರ್ಷಗಳಿಂದ ಮಾರೋದು. ಹಂಗೆ ಪರಿಚಯ. ಒಳ್ಳೆ ಗ್ಯಾರಂಟೀ ಪಾರ್ಟಿ. ಅನುಮಾನ ಬೇಡಿ ಅಯ್ಯಾ’. ತನ್ನ ಪಟ್ಟ ಶಿಷ್ಯ ಗುರುನಾಥ ಅಲಿಯಾಸ್ ಗುರುನಾಥಾಚಾರಿಯ ಬಳಿ ಮಾತಾಡಿ ‘ವ್ಯಾಪಾರ ಕುದುರಿಸು’ ಎಂದು ಹೇಳಿದವನೇ, ಎಂದಿಗಿಂತ ಹೆಚ್ಚು ಭಕ್ಷೀಸು ಕೊಟ್ಟು ಕಳಿಸಿದ.
ಈ ಗುರುನಾಥ ಎಂಬಾತ ವೀರಪ್ಪನ್ ಗ್ಯಾಂಗಿನಲ್ಲಿ ಎರಡನೇ ಸ್ಥಾನಕ್ಕೇರಿದ್ದ. ಅವನೇ ಸ್ವಂತದ್ದೊಂದು ಪ್ರತ್ಯೇಕ ಗುಂಪು ಕಟ್ಟುವ ಸನ್ನಾಹದಲ್ಲಿದ್ದ ಚತುರ.
ಅವನೊಂದಿಗೆ ಮಾತಾಡಿದ ನಾಗ್ರಾಜ, ಬಂದೂಕು ವ್ಯಾಪಾರಿಗಳನ್ನು ಕರೆ ತರುವುದಾಗಿ ಹೇಳಿ ಒಪ್ಪಿಸಿದ. ಮುಂದಿನ ಯೋಜನೆಯಂತೆ ಶಸ್ತ್ರಾಸ್ತ್ರ ವ್ಯಾಪಾರಿಯ ಸೋಗಿನಲ್ಲಿ ನಾಗ್ರಾಜ ಮತ್ತು ನಟ್ರಾಜರ ಜೊತೆಗೆ ಷಕೀಲ್ ಸೀದಾ ಕಾಡಿಗೇ ಹೋಗಿ ಗುರುನಾಥನನ್ನು ಕಂಡು ಮಾತಾಡಿದ್ದರು!
ವೀರಪ್ಪನ್ ತಂಡದವರಿಗೆ ಷಕೀಲ್ ಹೆಸರು ಗೊತ್ತಿತ್ತೇ ಹೊರತು ಅವರು ಹೇಗಿದ್ದಾರೆಂದು ಯಾರೂ ನೋಡಿರಲಿಲ್ಲ. ನಾಲ್ಕಾರು ಪತ್ರಿಕೆಗಳನ್ನು ತರಿಸಿಕೊಳ್ಳುತ್ತಿದ್ದ ವೀರಪ್ಪನ್ ಗ್ಯಾಂಗು, ಸುದ್ದಿ ಓದುವುದಕ್ಕಿಂತ ಪೊಲೀಸ್ ಅಧಿಕಾರಿಗಳ ಫೋಟೋ ನೋಡಿ ಗುರ್ತು ಮಾಡಿಕೊಳ್ಳುವುದರಲ್ಲಿ ನಿಗಾ ವಹಿಸಿತ್ತು. ಎಷ್ಟೇ ಹುಡುಕಿದರೂ ಷಕೀಲ್ ಮುಖ ಹೇಗಿದೆ ಎಂಬ ಸುಳಿವು ಅವರಿಗೆ ಸಿಕ್ಕಿರಲಿಲ್ಲ.
ಎಸ್‌ಐ ಷಕೀಲ್ ಎಂಎಂ ಹಿಲ್ಸ್‌ಗೆ ಹೋಗಿದ್ದೇ ವೀರಪ್ಪನ್ ಮಟಾಷ್ ಮಾಡಲು. ನಾವು ಯಾವುದಾದರೂ ಮಾತಾಡುವಾಗ ವೀರಪ್ಪನ್ ಸಂಗತಿ ಬಂದರೆ ಸಾಕು. ಚೊಂಚು ಹೊಕ್ಕಿದಂತೆ ಆಡೋರು.
‘ಕಾಡಿನ ಯಾವ ಬಿಲದಲ್ಲಿ ಅವಿತಿದ್ದರೂ ನಾನು ಬಿಡೋದಿಲ್ಲ. ಅವನ ಮೇಲೆ ಬುಲೆಟ್ ಟ್ಟ ಮಾಡಿ ಬಿಡ್ತೀನಿ’ ಎನ್ನೋರು. ಪೊಲೀಸ್ ಸಂಘದ ನಾಲ್ಕಾರು ಮೀಟಿಂಗ್ ಗಳಲ್ಲಿ ಅವರ ಫೋಟೋ ತೆಗೆಯಲು ಹೋದರೆ ಸಾಕು ‘ನೊ ನೋ ನೋ ಫೋಟೋ ಗೀಟೋ ಬೇಡಿ’ ಎನ್ನುತ್ತಿದ್ದರು. ಅತಿ ಅನ್ನಿಸಿ ನನ್ನಲ್ಲೊಂದು ಕುಹಕದ ನಗೆ ಒಳಗೇ ಮೂಡುತ್ತಿತ್ತು.
ದುರಂತ ನಡೆದ ಮೇಲೆ ಅವರ ಉದ್ದೇಶ ಅರ್ಥವಾಯಿತು. ವೀರಪ್ಪನ್ ಗ್ಯಾಂಗಿನೊಳಕ್ಕೆ ಹೇಗಾದರೂ ನುಸುಳಿ ಹೋಗಿ ಜ್ಞ್ಛಿಜ್ಝಿಠ್ಟಿಠಿಛಿ ಆಗಿ ಅವನನ್ನು ಹಿಡಿಯಲು ನಾನಾ ಪ್ಲ್ಯಾನ್ ಹಾಕಿದ್ದರು. ಅದಕ್ಕಾಗಿಯೇ ಏನೋ ಅವರು ತಮ್ಮ ಫೋಟೋ ತೆಗೆಯಲು ಬಿಡುತ್ತಿರಲಿಲ್ಲ. ಮಹತ್ವದ ಘಟನೆಗಳ ಫೋಟೋಗಳು ಪತ್ರಿಕೆಯಲ್ಲಿ ಪ್ರಕಟವಾದರೂ ಅದರಲ್ಲಿ ಅವರು ಇರುತ್ತಿರಲಿಲ್ಲ. ತಮ್ಮ ಮುಖ ಚಹರೆ ಯಾವ ಕಾರಣಕ್ಕೂ ತಿಳಿಯಕೂಡದು ಎಂಬ ಮುಂಜಾಗ್ರತೆ. ಆತ ಸತ್ತಮೇಲೆ ಅರಿವಾಗಿ ಮನದಲ್ಲೇ ವಂದಿಸಿದೆ.
ಷಕೀಲರ ಈ ಮುಂಜಾಗ್ರತೆಯಿಂದಾಗಿ ಸಾವಿನ ಬಾಯಿಗೇ ಹೊಕ್ಕಿದ್ದರೂ ಅನೇಕ ಬಾರಿ ಬಚಾವಾಗಿ ಬರಲು ಸಾಧ್ಯವಾಗಿತ್ತು.
ನಿಗದಿತ ದಿನ ಮೂವರೂ ಕಾಡಿಗೆ ಹೋಗಿ ಗುರುನಾಥನನ್ನು ಕಂಡು ಮಾತಾಡಿದ್ದರು. ವೀರಪ್ಪನ್‌ನ ಬಲಗೈ ಭಂಟನಾಗಿದ್ದ ಗುರುನಾಥ ಎತ್ತರದ ಆಳು. ಆನೆ ದಂತ , ಶ್ರೀಗಂಧದ ವ್ಯಾಪಾರ ಮತ್ತು ಆಹಾರ ಸಾಮಗ್ರಿಗಳ ಖರೀದಿ ಇತ್ಯಾದಿಗಳನ್ನು ಮಾಡುತ್ತಿದ್ದವನು ಅವನೇ. ಈ ಗುರುನಾಥನ ತಲೆಗೆ ಸರ್ಕಾರ ಹತ್ತು ಲಕ್ಷ ರೂಪಾಯಿ ಘೋಷಿಸಿತ್ತು. ವೀರಪ್ಪನ್ ಮತ್ತು ಗುರುನಾಥನನ್ನು ಹಿಡಿದುಕೊಟ್ಟರೆ ಮೂವತ್ತು ಲಕ್ಷ ರೂಪಾಯಿ ಸಿಗುತ್ತದೆ ಎಂಬ ಆಮಿಷವನ್ನು ಷಕೀಲ್ ರಸವತ್ತಾಗಿ ಒಡ್ಡಿದ್ದರು. ನಟ್ರಾಜ ನಾಗ್ರಾಜ ಇಬ್ಬರೂ ಹಸಿದ ತೋಳಗಳಂತೆ ನಾಲಿಗೆ ಚಾಚಿ ಕಾಯುತ್ತಿದ್ದರು! ಕಾಯುತ್ತಿದ್ದುದರಲ್ಲಿ ಆಶ್ಚರ್ಯವಿರಲಿಲ್ಲ. ಬಾಂಬೆಯ ಬಂದೂಕು ವ್ಯಾಪಾರಿಯ ಏಜೆಂಟ್ ಎಂಬಂತೆ ಸೋಗು ಹಾಕಿದ್ದ ಷಕೀಲರನ್ನು ಗುರುನಾಥನಿಗೆ ನಾಗ್ರಾಜ ಪರಿಚಯಿಸಿದ. ಇಬ್ಬರ ನಡುವೆ ಮಾತುಕತೆ ಹಿಂದಿ ತಮಿಳಿನಲ್ಲಿ ನಡೆಯಿತು. ನಟ್ರಾಜನೇ ಅವಾಂತರದ ಭಾಷಾಂತರಕಾರಿ!
( ಮುಂದುವರಿಯುತ್ತದೆ)