Mysore
23
overcast clouds
Light
Dark

ಒಂದು ರೂಪಾಯಿಗೆ ಊಟ ಕೊಡುವ ವಿ.ವೆಂಕಟರಮಣನ್

ಪಂಜು ಗಂಗೊಳ್ಳಿ

ಇದು ಎಂತಹ ತುಟ್ಟಿ ಕಾಲವೆಂದರೆ ೫ ರೂಪಾಯಿಗೆ ಒಂದು ಒಳ್ಳೆಯ ಚಾಕೊಲೆಟ್ ಕೂಡ ಸಿಗದು. ಅಂತಹದರಲ್ಲಿ, ಒಂದು ರೂಪಾಯಿಗೆ ಅನ್ನ, ಸಾಂಬಾರು, ರಸಂ ಇರುವ ಊಟ ಸಿಗುತ್ತದೆ ಅಂದರೆ ಯಾರಾದರೂ ನಂಬುವರೇ? ತಮಿಳುನಾಡಿನ ಚೆನ್ನೈಯಿಂದ ೫೦೦ ಕಿಮೀ ದೂರದಲ್ಲಿರುವ ಈರೋಡ್‌ನಲ್ಲಿ  ವಿ.ವೆಂಕಟರಮಣನ್ ಎನ್ನುವವರು ತಮ್ಮ ‘ಶ್ರೀ ಎಎಮ್‌ವಿ ಹೋಮ್ಲಿ ಮೆಸ್’ನಲ್ಲಿ ಕಳೆದ ಒಂದು ದಶಕಕ್ಕಿಂತಲೂ ಹಿಂದಿನಿಂದ ಬಡಬಗ್ಗರಿಗೆ ಒಂದು ರೂಪಾಯಿಗೆ ಊಟ ಕೊಡುತ್ತಿದ್ದಾರೆ.

‘ಶ್ರೀ  ಎಎಮ್‌ವಿ ಹೋಮ್ಲಿ ಮೆಸ್’ ಹೇಳಿಕೊಳ್ಳುವಷ್ಟು ದೊಡ್ಡ ಹೋಟೆಲೇನಲ್ಲ. ಇದರ ಮಾಲೀಕರಾದ ವಿ.ವೆಂಕಟರಮಣನ್ ಆಗರ್ಭ ಶ್ರೀಮಂತರೂ ಅಲ್ಲ. ಈ ಹೋಟೆಲು ವ್ಯಾಪಾರದಿಂದ ಬಂದ ಲಾಭದಲ್ಲೇ ವೆಂಕಟರಮಣನ್‌ರ ಸಂಸಾರ ನಡೆಯಬೇಕು. ಅವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳು. ಪತ್ನಿ ಯೋಗ ಟೀಚರ್. ಅವರ ಎರಡನೇ ಮಗಳು ಪರೀಕ್ಷೆಯಲ್ಲಿ ಉತ್ತಮ ಮಾರ್ಕು ಪಡೆದರೂ ಇಂಜಿನಿಯರಿಂಗ್ ಕಾಲೇಜಿಗೆ ಸೇರಿಸಲು ಹಣದ ಮುಗ್ಗಟ್ಟು ಎದುರಾಗಿ, ರಾಮಕೃಷ್ಣ ಮಠ ಅವರ ನೆರವಿಗೆ ಬರಬೇಕಾಯಿತು.

ಇಂತಹ ಪರಿಸ್ಥಿತಿಯಲ್ಲೂ ೬೦ ವರ್ಷ ಪ್ರಾಯದ ವೆಂಕಟರಮಣನ್ ಚಿಂತಿಸುವುದು ತನ್ನ ಲಾಭವನ್ನು ಹೇಗೆ ಹೆಚ್ಚಿಸಿಕೊಳ್ಳಲಿ ಎಂಬ ಬಗ್ಗೆ ಅಲ್ಲ, ಬದಲಿಗೆ ಒಂದು ರೂಪಾಯಿಗೆ ಊಟ ನೀಡುವುದನ್ನು ಹೇಗೆ ಮುಂದುವರಿಸಲಿ ಎಂಬ ಬಗ್ಗೆ.

೨೦೦೮ರ ಒಂದು ದಿನ ಒಬ್ಬರು ಮಹಿಳೆ ಶ್ರೀ  ಎಎಮ್‌ವಿ  ಹೋಮ್ಲಿ ಮೆಸ್‌ಗೆ ಬರುತ್ತಾರೆ. ಅವರ ಗಂಡ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.   ಶ್ರೀ  ಎಎಮ್‌ವಿ  ಹೋಮ್ಲಿ ಮೆಸ್ಸಲ್ಲಿ ೧೦ ರೂಪಾಯಿಗಳಿಗೆ ಆರು ಇಡ್ಲಿಗಳು ಸಿಗುವುದು ತಿಳಿದು ಆ ಮಹಿಳೆ ಬಂದಿದ್ದರು. ಆದರೆ, ಆವತ್ತು ಅಷ್ಟೊತ್ತಿಗೆ ಇಡ್ಲಿಯೆಲ್ಲ ಖಾಲಿಯಾಗಿದ್ದರಿಂದ ದೋಸೆ ಖರೀದಿಸುವಂತೆ ವೆಂಕಟರಮಣನ್ ಆಕೆಗೆ ಹೇಳುತ್ತಾರೆ. ದೋಸೆ ಹತ್ತು ರೂಪಾಯಿಗೆ ಮೂರು. ಆಕೆಯ ಬಳಿ ಇದ್ದುದು ಬರೇ ಹತ್ತು ರೂಪಾಯಿ ಮಾತ್ರ. ಹತ್ತು ರೂಪಾಯಿ ಕೊಟ್ಟು ಮೂರು ದೋಸೆ ಖರೀದಿಸಿದರೆ ಅದು ತನಗೂ ತನ್ನ ಗಂಡನಿಗೂ  ಸಾಲದು ಎಂದು ಆಕೆ ಹೇಳಿದಾಗ ವೆಂಕಟರಮಣನ್ ಆಕೆಗೆ ಹತ್ತು ರೂಪಾಯಿಗೆ ಆರು ದೋಸೆ ಕೊಡುತ್ತಾರೆ.

ಆದರೆ, ಘಟನೆ ಅವರನ್ನು ಆಲೋಚಿಸಲು ಹಚ್ಚುತ್ತದೆ. ಹತ್ತು ರೂಪಾಯಿಯಲ್ಲಿ ಇಡೀ ದಿನ ಕಳೆಯಬೇಕಾದ ಅನಿವಾರ್ಯತೆಯಿರುವ ಅದೆಷ್ಟೋ ಜನ ಸುತ್ತ ಮುತ್ತ ಇರಬಹುದಲ್ಲವೇ? ಹೀಗೆ ಆಲೋಚಿಸಿದ ವೆಂಕಟರಮಣನ್ ಮರುದಿನ ಆ ಮಹಿಳೆಯ ಗಂಡ ದಾಖಲಾದ ಈರೋಡ್ ಸರ್ಕಾರಿ ಆಸ್ಪತ್ರೆಗೆ ಹೋಗುತ್ತಾರೆ. ಅಲ್ಲಿನ ನರ್ಸು ಮತ್ತು ಸಿಬ್ಬಂದಿಗಳು, ‘ಈ ಆಸ್ಪತ್ರೆಗೆ ಬರುವವರೆಲ್ಲ ತೀರಾ ಬಡವರು. ಹೆಚ್ಚಿನವರು ಅದೇ ದಿನ ದುಡಿದು ಅದೇ ದಿನ ಉಣ್ಣುವ ದಿನಗೂಲಿ ಕಾರ್ಮಿಕರು. ಕೆಲವು ಬಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತ ಆಹಾರ ಸಿಕ್ಕರೂ ಅವರ ಜೊತೆ ಬರುವವರು ಹೊರಗೆ ಊಟ ಖರೀದಿಸಲಾಗದೆ ಉಪವಾಸದಿಂದಿರುತ್ತಾರೆ. ದಿನಗೂಲಿಗಳಾದು–ದರಿಂದ ರೋಗಿಗಳ ಜೊತೆ ಅವರು ಆಸ್ಪತ್ರೆಯಲ್ಲಿದ್ದಷ್ಟು ದಿನ ಅವರಿಗೆ ಕೂಲಿಯೂ ಇರುವುದಿಲ್ಲ’ ಎಂದು ವೆಂಕಟರಮಣನ್‌ಗೆ  ಹೇಳುತ್ತಾರೆ.

ಆಗಲೇ ವೆಂಕಟರಮಣನ್ ಅವರಿಗೆ ಉಚಿತ ಊಟ ನೀಡುವ ತೀರ್ಮಾನ ಮಾಡುತ್ತಾರೆ. ಆದರೆ, ಉಚಿತ ಊಟ ಅಂದರೆ ಕೆಲವರು ಅದನ್ನು ಪಡೆಯಲು ಹಿಂದೇಟು ಹಾಕಬಹುದು, ಅಥವಾ ಅದರ ಗುಣಮಟ್ಟದ ಬಗ್ಗೆ ಅನುಮಾನ ಪಡಬಹುದು ಎಂದು ಆಲೋಚಿಸಿದ ಅವರು ಒಂದು ರೂಪಾಯಿ ಸಾಂಕೇತಿಕ ದರದಲ್ಲಿ ಊಟ ನೀಡಲು ತೀರ್ಮಾನಿಸಿ, ಮರುದಿನವೇ ಅದನ್ನು ಕಾರ್ಯರೂಪಕ್ಕೆ ತರುತ್ತಾರೆ.

ಪ್ರಾರಂಭದಲ್ಲಿ, ವೆಂಕಟರಮಣನ್ ಮತ್ತು ಅವರ ಪತ್ನಿ ಪ್ರತಿದಿನ ಬೆಳಿಗ್ಗೆ  ಈರೋಡ್ ಸರ್ಕಾರಿ ಆಸ್ಪತ್ರೆಗೆ ಹೋಗಿ ೨೦ ಜನ ರೋಗಿಗಳ ಸಂಬಂಧಿಕರಿಗೆ ಒಂದು ರೂಪಾಯಿ ಊಟದ ಟೋಕನ್ ಕೊಡುತ್ತಿದ್ದರು. ಈಗ ೭೦ ಟೋಕನುಗಳನ್ನು ಕೊಡುತ್ತಿದ್ದಾರೆ. ಮಧ್ಯಾಹ್ನದ ಹೊತ್ತು ರೋಗಿಗಳ ಸಂಬಂಧಿಕರು ಹೋಟೆಲಿಗೆ ಬಂದು ಟೋಕನ್ ಕೊಟ್ಟು ಊಟ ಕಟ್ಟಿಸಿಕೊಂಡು ಹೋಗುತ್ತಾರೆ.

ವೆಂಕಟರಮಣನ್ ೭೦ ಟೋಕನ್‌ಗಳನ್ನು ಮೂರು ವಿಧವಾಗಿ ವಿಂಗಡಿಸಿದ್ದಾರೆ- ಮೊದಲ ೧೦-೧೫ ಟೋಕನ್‌ಗಳನ್ನು ಪಡೆದವರು ಬೆಳಗ್ಗಿನ ಹೊತ್ತು ಬಂದು ಪ್ರತೀ ಟೋಕನ್‌ಗೆ ಮೂರು ದೋಸೆ ಮತ್ತು ಎರಡು ಇಡ್ಲಿಗಳನ್ನು ಕೊಂಡು ಹೋಗುತ್ತಾರೆ; ೩೦-೪೦ ಟೋಕನ್‌ಗಳು ಮಧ್ಯಾಹ್ನದ ಊಟಕ್ಕೆ; ಮಧ್ಯಾಹ್ನ ಊಟದಲ್ಲಿ ಅನ್ನ, ಸಾಂಬಾರು ಮತ್ತು ರಸಂ ಇರುತ್ತದೆ. ಉಳಿದ ೧೫ ಟೋಕನ್‌ಗಳು ರಾತ್ರಿ ಊಟಕ್ಕೆ. ರಾತ್ರಿ ಊಟದಲ್ಲಿ ದೋಸೆ ಮತ್ತು ಚಪಾತಿ ಇರುತ್ತದೆ.

ಮೊದಲೇ ಹೇಳಿದಂತೆ ವೆಂಕಟರಮಣನ್ ಶ್ರೀಮಂತರೇನಲ್ಲ. ಅವರ ಸಂಸಾರವೂ ಇದೇ ಶ್ರೀ  ಎಎಮ್‌ವಿ ಹೋಮ್ಲಿ ಮೆಸ್‌ನಿಂದಲೇ ನಡೆಯಬೇಕು. ಅದಕ್ಕಾಗಿ ಉಳಿದ ಸಾಮಾನ್ಯ ಗ್ರಾಹಕರಿಗೆ ಊಟಕ್ಕೆ ೫೦ ರೂಪಾಯಿ ಚಾರ್ಜ್ ಮಾಡುತ್ತಾರೆ. ದೋಸೆ ಹಾಗೂ ಇಡ್ಲಿ ಪ್ಲೇಟಿಗೆ ೧೦ ರೂಪಾಯಿ. ಅಂಗವಿಕಲ ಗ್ರಾಹಕರಿಗೆ ೫೦ ರೂಪಾಯಿ ಊಟವನ್ನು ೨೦% ಕಡಿಮೆ ದರದಲ್ಲಿ ನೀಡುತ್ತಾರೆ. ಆದರೆ, ಹೋಟೆಲಿನಿಂದ ಬರುವ ವರಮಾನ ಎಷ್ಟೋ ಬಾರಿ ಹೋಟೆಲು ನಡೆಸಲೂ ಸಾಕಾಗದಿರುವುದರಿಂದ ಅವರ ಹೆಂಡತಿ ಯೋಗ ಶಿಕ್ಷಕಿಯಾಗಿ ಗಳಿಸುವ ಹಣವೂ ಹೋಟೆಲಿಗೆ ಹಾಕಬೇಕಾಗುತ್ತದೆ. ವೆಂಕಟರಮಣನ್ ಬಗ್ಗೆ ತಿಳಿದ ಹಿತೈಷಿಗಳು, ಸಹೃದಯಿಗಳು ಪ್ರತಿ ತಿಂಗಳು ೧೦೦೦-೫೦೦೦ ರೂಪಾಯಿ ದೇಣಿಗೆ ನೀಡುತ್ತಾರೆ.

ಅವರ ಹಿರಿಯ ಮಗಳಿಗೆ ಮದುವೆಯಾಗಿದೆ. ಕಿರಿಯವಳು ಸದ್ಯದಲ್ಲೇ ಬಿ.ಟೆಕ್ ಶಿಕ್ಷಣ ಮುಗಿಸಿ ಎಲ್ಲಾದರೂ ಉದ್ಯೋಗ ಪಡೆದರೆ ತನ್ನ ಕಷ್ಟಗಳು ತುಸು ಕಡಿಮೆಯಾಗಬಹುದು ಎಂದು ವೆಂಕಟರಮಣನ್ ಆಶಾವಾದಿಯಾಗಿ ದ್ದಾರೆ. ಅವರ ಕುಟುಂಬವೂ ಕುಟುಂಬದ ವೆಚ್ಚವನ್ನು ಅಚ್ಚುಕಟ್ಟಾಗಿ ನಡೆಸಿ ಅವರ ಸೇವಾಕಾರ್ಯದಲ್ಲಿ ಸಂಪೂರ್ಣ ಸಹಕಾರವನ್ನು ಕೊಡುತ್ತಿದೆ.

ನಿವೃತ್ತ ರೈಲ್ವೆ ಉದ್ಯೋಗಿಯೊಬ್ಬರ ಮಗನಾದ ವೆಂಕಟರಮಣನ್ ಆರ್ಥಿಕ ಅನನುಕೂಲತೆಯ ಕಾರಣ ೧೨ನೇ ತರಗತಿಗೆ ಶಿಕ್ಷಣವನ್ನು ನಿಲ್ಲಿಸಬೇಕಾಯಿತು. ಅಂತಹ ಬಡತನದ ಹಿನ್ನೆಲೆಯಿಂದ ಬಂದರೂ ವೆಂಕಟರಮಣನ್ ದೇವರು ತನಗೆ ಸಾಕಷ್ಟು ನೀಡಿದ್ದಾನೆ ಎಂದೇ ಹೇಳಿಕೊಳ್ಳುತ್ತಾರೆ. ಅವರಿಗೆ ಈಗ ಬಡರೋಗಿಗಳಿಗೆ ಕೊಡುತ್ತಿರುವ ೭೫ ಊಟಗಳನ್ನು ಕನಿಷ್ಠ ನೂರಕ್ಕಾದರೂ ಏರಿಸಬೇಕೆಂಬ ಹಂಬಲವಿದೆ. ಆದರೆ, ಅದಕ್ಕೆ ತಕ್ಕ ಆರ್ಥಿಕ ಬೆಂಬಲವಿಲ್ಲದಿ ರುವುದರಿಂದ ಅಂತಹ ಅನುಕೂಲದ ದಿನ ಬರುವುದನ್ನು ಕಾಯುತ್ತಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ