Mysore
33
scattered clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಸಂಪಾದಕೀಯ: ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ಸರ್ಕಾರ ತ್ವರಿತ ಪರಿಹಾರ ನೀಡಬೇಕು

ಕೊಡಗು ಜಿಲ್ಲೆಯಲ್ಲಿ ಪ್ರತಿವರ್ಷ ಮಳೆಗಾಲ ಒಂದಲ್ಲೊಂದು ಅವಾಂತರ ಸೃಷ್ಟಿಸುತ್ತಿದೆ. ಪ್ರವಾಹ, ಗುಡ್ಡಕುಸಿತದಂತಹ ಪ್ರಕರಣಗಳು ಜಿಲ್ಲೆಯಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಈ ನಡುವೆ ಬೆಳೆಗಾರರು ಇತ್ತೀಚಿನ ವರ್ಷಗಳಲ್ಲಿ ಅತೀವೃಷ್ಟಿ ಭೀತಿ ಎದುರಿಸುತ್ತಿದ್ದಾರೆ. ಈ ಹಿಂದೆ ಅನಾವೃಷ್ಠಿಯಿಂದ ಸಮಸ್ಯೆ ಎದುರಿಸುತ್ತಿದ್ದ ಬೆಳೆಗಾರರು, ಈಗ ಅತಿಯಾದ ಮಳೆಯಿಂದ ಕೊಳೆರೋಗ ಭೀತಿ ಎದುರಿಸುತ್ತಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ೧೯೭೬.೩೯ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೧೭೨೦.೦೭ ಮಿ.ಮೀ. ಮಳೆಯಾಗಿತ್ತು. ಈ ವರ್ಷ ಜುಲೈ ತಿಂಗಳಿನಲ್ಲಿ ಶೇ.೫೦ಕ್ಕಿಂತಲೂ ಹೆಚ್ಚಿನ ಮಳೆಯಾಗಿದೆ. ಕಡಿಮೆ ಅವಧಿಯಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ತೇವಾಂಶ ಹೆಚ್ಚಿ ಕಾಫಿ ಬೆಳೆಗೆ ಕೊಳೆ ರೋಗ ತಗುಲಿದೆ.

ಈ ಬಾರಿ ಸಕಾಲದಲ್ಲಿ ಬೇಸಿಗೆ ಮಳೆ ಸುರಿದ ಪರಿಣಾಮ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಕೊಡಗಿನ ಕಾಫಿ ಬೆಳೆಗಾರರಿದ್ದರು. ಆದರೆ, ನಿರಂತರವಾಗಿ ಸುರಿದ ಮಳೆಯಿಂದ ಗಿಡದಲ್ಲಿದ್ದ ಕಾಫಿ ಬಹುತೇಕ ನೆಲಕಚ್ಚಿದೆ. ಜೊತೆಗೆ ಕಾಫಿ ಕಪ್ಪು ಬಣ್ಣಕ್ಕೆ ತಿರುಗಿ ಕೊಳೆತಂತೆ ಭಾಸವಾಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಕಾಫಿ ಬೆಳೆಯುವುದು ಸುಲಭದ ಕೆಲಸವಲ್ಲ. ಕಾರ್ಮಿಕರ ಕೊರತೆ ಬಹುದೊಡ್ಡ ಸಮಸ್ಯೆಯಾಗಿ ಬೆಳೆಗಾರರನ್ನು ಕಾಡುತ್ತಿದೆ. ಸ್ಥಳೀಯ ಕಾರ್ಮಿಕರಿಗೆ ದುಬಾರಿ ವೇತನ ನೀಡಬೇಕಾಗಿದ್ದು, ಬೆಳೆಗಾರರು ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ಅಸ್ಸಾಂ ಕಾರ್ಮಿಕರನ್ನು ಬಹುತೇಕ ಬೆಳೆಗಾರರು ಅವಲಂಭಿಸಿದ್ದಾರೆ. ಆದರೆ, ಹೀಗೆ ಬಂದ ಅಸ್ಸಾಂ ಕಾರ್ಮಿಕರಿಂದ ಅಪರಾಧ ಪ್ರಕರಣ ಕೂಡ ಹೆಚ್ಚುತ್ತಿದ್ದು, ಇದು ಕೂಡ ಬೆಳೆಗಾರರಿಗೆ ತಲೆನೋವಾಗಿ ಪರಿಣಮಿಸಿದೆ.

ಕಾಫಿ ಬೆಳೆ ಉತ್ತಮವಾಗಿ ಬೆಳೆಯಬೇಕಾದರೆ ಸಕಾಲದಲ್ಲಿ ಗೊಬ್ಬರ ಹಾಕಬೇಕಾಗುತ್ತದೆ. ಆದರೆ, ಗಗನಕ್ಕೇರಿರುವ ಗೊಬ್ಬರ ಬೆಲೆಯಿಂದ ಸಾಕಷ್ಟು ಪ್ರಮಾಣದ ಗೊಬ್ಬರ ಹಾಕಲು ಸಾಧ್ಯವಾಗುತ್ತಿಲ್ಲ. ಹಾಕಿರುವ ಗೊಬ್ಬರ ಕೂಡ ಕಡಿಮೆ ಅವಧಿಯಲ್ಲಿ ಧಾರಾಕಾರ ಮಳೆಯಾಗುವ ಮೂಲಕ ನೀರಿನಲ್ಲಿ ಕೊಚ್ಚಿ ಹೋಗುತ್ತಿದೆ. ಕೆಲ ಕಾಫಿ ತೋಟಗಳಲ್ಲಿ ಅತಿಯಾದ ಮಳೆಯಿಂದ ಜಲ ನೀರು ಹರಿಯುವ ಮೂಲಕ ಫಲವತ್ತತೆಯ ಮಣ್ಣು ಕೂಡ ನೀರು ಪಾಲಾಗುತ್ತಿದೆ. ಇನ್ನು ನದಿ ಪಾತ್ರದ ತೋಟಗಳಲ್ಲಿನ ಕಾಫಿ ಗಿಡಗಳು ಪ್ರವಾಹ ನೀರಿಗೆ ಸಿಲುಕಿ ಕೊಳೆಯಲಾರಂಭಿಸಿವೆ.

ಜಿಲ್ಲೆಯಲ್ಲಿ ವನ್ಯಮೃಗಗಳ ಹಾವಳಿ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾಡಾನೆಗಳು ಕಾಫಿ ತೋಟದಲ್ಲಿ ಮಾತ್ರವಲ್ಲದೆ ಮನೆಗೆ ಆಗಮಿಸುವ ಪ್ರಕರಣಗಳು ನಡೆಯುತ್ತಿವೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಸೋಮವಾರಪೇಟೆ ತಾಲ್ಲೂಕಿನಲ್ಲಿ ಕಿಟಕಿ ಮೂಲಕ ಮನೆಯೊಳಗಿದ್ದ ಅಕ್ಕಿಯನ್ನು ತಿನ್ನಲು ಕಾಡಾನೆ ಯತ್ನಿಸಿತ್ತು. ಹೀಗೆ ತೋಟಗಳ ಮೂಲಕ ಕಾಡಾನೆಗಳು ಆಗಮಿಸುವ ಸಂದರ್ಭ ಕಾಫಿ ಗಿಡಗಳು ಮುರಿಯುವುದು ಒಂದೆಡೆಯಾದರೆ, ಗಿಡದಲ್ಲಿರುವ ಫಸಲು ಕೂಡ ನೆಲಕಚ್ಚುತ್ತಿವೆ. ಮತ್ತೊಂದೆಡೆ ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣ ಕೂಡ ಹೆಚ್ಚುತ್ತಿದೆ. ಕಾಫಿ ತೋಟಗಳಲ್ಲಿ ಪ್ರತ್ಯಕ್ಷವಾಗುತ್ತಿರುವ ಹುಲಿಯಿಂದ ಕಾರ್ಮಿಕರು ತೋಟದೊಳಗೆ ತೆರಳಿ ಕೆಲಸ ಮಾಡಲು ಹಿಂದೇಟು ಹಾಕುವ ಪರಿಸ್ಥಿತಿ ಇದೆ.

ಇದರೊಂದಿಗೆ ಪ್ರತಿವರ್ಷ ಹತ್ತಾರು ಕೆಲಸಗಳನ್ನು ಕಾಫಿ ತೋಟದಲ್ಲಿ ನಿರ್ವಹಿಸಬೇಕಾಗುತ್ತದೆ. ಕಾಫಿ ಬೆಳೆಗೆ ಬೇಸಿಗೆಯಲ್ಲಿ ಬಿಸಿಲಿನ ಅವಶ್ಯಕತೆ ಇರುವುದರಿಂದ ಮರಗಳನ್ನು ಕಡಿಯಬೇಕಾಗುತ್ತದೆ. ತೋಟದೊಳಗೆ ಬೆಳೆಯುವ ಗಿಡಗಂಟಿಗಳನ್ನು ಶುಚಿಗೊಳಿಸಬೇಕಾಗುತ್ತದೆ. ಗೊಬ್ಬರ ಹಾಕುವ ಮುನ್ನ ಗಿಡದ ಸುತ್ತಲೂ ಶುಚಿಗೊಳಿಸಬೇಕು. ಹೀಗೆ ಎಲ್ಲಾ ಕೆಲಸವನ್ನು ಸಕಾಲದಲ್ಲಿ ನಿರ್ವಹಿಸಿ ಕಾಫಿ ಬೆಳೆದರೂ ಸೂಕ್ತ ಬೆಲೆ ದೊರಕದೆ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಈ ನಡುವೆ ಮಳೆಯಿಂದ ಕೊಳೆರೋಗ ಭಾದಿಸುತ್ತಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನೂ ಜಿಲ್ಲೆಯಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಆಗಸ್ಟ್ನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಇನ್ನಷ್ಟು ನಷ್ಟ ಅನುಭವಿಸುವ ಭೀತಿಯಲ್ಲಿ ಕಾಫಿ ಬೆಳೆಗಾರರಿದ್ದಾರೆ.

ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ಸರ್ಕಾರ ಸ್ಪಂದಿಸುವ ಅವಶ್ಯಕತೆ ಇದೆ. ಕೃಷಿ ಪ್ರಧಾನ ಜಿಲ್ಲೆಯಾಗಿ ಕಾಫಿ ಬೆಳೆಯುವುದರ ಮೂಲಕ ಗಮನಾರ್ಹ ಸಾಧನೆ ಮಾಡಿರುವ ಕೊಡಗು ಜಿಲ್ಲೆಯ ಬೆಳೆಗಾರರ ಸಮಸ್ಯೆಯನ್ನು ಅರಿಯುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಬೆಳೆ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ವಸ್ತುಸ್ಥಿತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಿದೆ. ಸರ್ಕಾರ ಸೂಕ್ತ ಪರಿಹಾರ ಒದಗಿಸುವುದರೊಂದಿಗೆ ಕಾಫಿ ಬೆಳೆಗಾರರ ಹಲವು ವರ್ಷಗಳ ಬೇಡಿಕೆಯಾದ ಬೆಂಬಲ ಬೆಲೆ ಘೋಷಿಸುವ ಮೂಲಕ ಬೆಳೆಗಾರರಿಗೆ ನೆರವಿನ ಹಸ್ತ ಚಾಚಬೇಕಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ