ಪುರುಷ ಪ್ರಧಾನ ಭಾರತೀಯ ಕುಟುಂಬಗಳಲ್ಲಿ ಹೆಣ್ಣು ಮಗು ಹುಟ್ಟಿದರೆ ಮೂಗು ಮುರಿಯುವುದು ಒಂದು ಸಾಮಾನ್ಯ ಸಂಗತಿ. ಹೆಣ್ಣು ಭ್ರೂಣ ಹತ್ಯೆಯೂ ಅಷ್ಟೇ ಸಾಮಾನ್ಯವೆಂಬಂತೆ ಅವ್ಯಾಹತವಾಗಿ ನಡೆಯುತ್ತದೆ. ಮುಖ್ಯವಾಗಿ, ಉತ್ತರ ಭಾರತದ ರಾಜ್ಯಗಳಲ್ಲಿ. ಆದರೆ, ಮಧ್ಯಪ್ರದೇಶದ ಬೇಡಿಯಾ ಬುಡಕಟ್ಟು ಜನಾಂಗ ಇದಕ್ಕೊಂದು ಅಪವಾದ. ಈ ಜನಾಂಗದಲ್ಲಿ ಹೆಣ್ಣು ಮಕ್ಕಳು ಹುಟ್ಟಿದರೆ ಕುಟುಂಬಗಳು ಸಂಭ್ರಮಿಸುತ್ತವೆ. ಅಷ್ಟೇ ಅಲ್ಲ, ಹೆಣ್ಣೊಬ್ಬಳು ಗರ್ಭಧರಿಸಿದಾಗ ಹುಟ್ಟುವ ಮಗು ಗಂಡಾಗದೆ ಹೆಣ್ಣಾಗಲಿ ಎಂದು ಬೇಡಿಯಾ ಜನ ಹಾರೈಸುತ್ತಾರೆ. ಆದರೆ, ಬೇಡಿಯಾ ಜನಾಂಗ ಹೆಣ್ಣು ಸಂತಾನ ಹುಟ್ಟಿದಾಗ ಹೀಗೆ ಸಂತೋಷಿಸುವುದಕ್ಕೆ ಕಾರಣ ಬೇರೆಯದೇ ಆಗಿದೆ.
ಬೇಡಿಯಾ ಜನಾಂಗದಲ್ಲಿ ವೇಶ್ಯವಾಟಿಕೆ ಒಂದು ಕುಲ ಕಸುಬು! ಬಹುತೇಕ ಬೇಡಿಯಾ ಕುಟುಂಬಗಳ ಸಂಪಾದನೆಯ ದಾರಿ ಇದೊಂದೇ! ಈ ಜನಾಂಗದಲ್ಲಿ ಹೆಣ್ಣು ಮೈನೆರೆದು ಯೌವನಕ್ಕೆ ಕಾಲಿಡುತ್ತಿದ್ದಂತೆ ಅವಳ ಮುಂದಿರುವ ಆಯ್ಕೆಗಳು ಎರಡೇ–ಚಿಕ್ಕ ಪ್ರಾಯಕ್ಕೆ ಮದುವೆಯಾಗುವುದು ಅಥವಾ ತಲೆತಲೆ ಮಾರುಗಳಿಂದ ತನ್ನ ಜನಾಂಗ ಸಾಂಪ್ರದಾಯಿಕವಾಗಿ ಅನುಸರಿಸಿಕೊಂಡು ಬಂದ ‘ಉದ್ಯೋಗ’ಕ್ಕೆ ತಯಾರಾಗುವುದು. ‘ಕುಲ ಕಸುಬು’ ಮಾಡಲು ಶುರು ಮಾಡುವ ಹೆಣ್ಣೇ ಕುಟುಂಬದ ವರಮಾನ ತರುವ ಏಕಮೇವ ಸದಸ್ಯೆಯಾಗುತ್ತಾಳೆ. ತಂದೆ, ಅಣ್ಣ, ತಮ್ಮ ಮೊದಲಾದ ಮನೆಯ ಪುರುಷ ಸದಸ್ಯರು ಒಂದೋ ಮನೆಯಲ್ಲಿದ್ದು ಅವಳ ಗಳಿಕೆಯಲ್ಲಿ ಕಾಲ ಕಳೆಯುತ್ತಾರೆ ಅಥವಾ ಅವಳಿಗೆ ಗಿರಾಕಿಗಳನ್ನು ಹುಡುಕಿ ತರುವ ತಲೆ ಹಿಡುಕರಾಗುತ್ತಾರೆ. ಹಾಗಾಗಿ, ಬೇಡಿಯಾ ಜನಾಂಗದಲ್ಲಿ ಹೆಣ್ಣುಗಳು ಬಿಡಿ, ಗಂಡುಗಳೂ ಶಿಕ್ಷಣಕ್ಕಾಗಿ ಶಾಲೆಗೆ ಹೋಗುವುದು ತೀರಾ ಅಪರೂಪ. ಹೋದರೂ ಅರ್ಧದಲ್ಲೇ ಬಿಡುತ್ತಾರೆ.
ಬ್ರಿಟಿಷ್ ಸರ್ಕಾರದಲ್ಲಿ ‘ಅಪರಾಧಿ ಜನಾಂಗ (ಕ್ರಿಮಿನಲ್ ಟ್ರೈಬ್)’ ಎಂದು ಹೆಸರಿಸಲ್ಪಟ್ಟು ಈಗ ‘ಅಲೆಮಾರಿ ಜನಾಂಗ (ನೊಮಾಡಿಕ್ ಟ್ರೈಬ್)’ ಎಂದು ಪರಿಗಣಿಸಲ್ಪಟ್ಟಿರುವ ಬೇಡಿಯಾ ಜನಾಂಗವು ಕಟ್ಟುಪಾಡುಗಳ ವಿಚಾರದಲ್ಲಿ ಅತ್ಯಂತ ಬಿಗಿಯಾಗಿ ಹೆಣೆಯಲ್ಪಟ್ಟ ಒಂದು ಜನಾಂಗ. ಇಂತಹ ಜನಾಂಗಗಳಲ್ಲಿ ಸುಧಾರಣೆ ತರುವುದು ಹೆಚ್ಚೂ ಕಡಿಮೆ ಅಸಾಧ್ಯದ ಮಾತು. ಯಾರಾದರೂ ಜನಾಂಗದ ಸಂಪ್ರದಾಯಕ್ಕೆ ವಿರೋಧ ವ್ಯಕ್ತಪಡಿಸಿದರೆ ಇಡೀ ಜನಾಂಗ ಒಂದಾಗಿ ಅಂತಹ ವಿರೋಧವನ್ನು ವ್ಯವಸ್ಥಿತವಾಗಿ ನಿವಾರಿಸುತ್ತದೆ. ಇಂತಹ ಬೇಡಿಯಾ ಜನಾಂಗದಲ್ಲೂ ಈಗ ಬದಲಾವಣೆಯ ಗಾಳಿ ಬೀಸತೊಡಗಿದೆ. ಇದಕ್ಕೆ ಕಾರಣ ವೀರೇಂದ್ರ ಮಿಶ್ರಾ ಎಂಬೊಬ್ಬ ಐಪಿಎಸ್ ಅಧಿಕಾರಿ.
53 ವರ್ಷ ಪ್ರಾಯದ ವೀರೇಂದ್ರ ಮಿಶ್ರಾ ಈಗ ಭೋಪಾಲದಲ್ಲಿ ‘ಮಧ್ಯಪ್ರದೇಶ ರಾಜ್ಯ ಇಂಡಸ್ಟ್ರಿಯಲ್ ಫೋರ್ಸ್’ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ಅವರು ಯುವಜನ ಸೇವಾ ಇಲಾಖೆ ಮತ್ತು ಸೋಷಿಯಲ್ ಜಸ್ಟಿಸ್ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದರು. ಕೆಲವು ವರ್ಷಗಳ ಹಿಂದೆ ವೀರೇಂದ್ರ ಮಿಶ್ರಾ ರಾಜಗಢದ ನರಸಿಂಹಗಢ ಎಂಬಲ್ಲಿ ಕರ್ತವ್ಯಕ್ಕೆ ನಿಯುಕ್ತಿಗೊಂಡಾಗ ಅವರಿಗೆ ಬೇಡಿಯಾ ಜನಾಂಗದ ವೇಶ್ಯಾವಾಟಿಕೆಯ ಸಂಪ್ರದಾಯದ ಬಗ್ಗೆ ತಿಳಿವಳಿಕೆ ಸಿಕ್ಕಿತು. ಶಿಕ್ಷಣ ಮತ್ತು ಪರ್ಯಾಯ ಉದ್ಯೋಗ ಇವೆರಡರಿಂದಷ್ಟೇ ಈ ನಿಕೃಷ್ಟ ಸಂಪ್ರದಾಯವನ್ನು ಹೋಗಲಾಡಿಸಬಹುದು ಎಂದು ತೀರ್ಮಾನಿಸಿದ ವೀರೇಂದ್ರ ಮಿಶ್ರಾ ಅದಕ್ಕಾಗಿ 2002ರಲ್ಲಿ ‘ಸಂವೇದನಾ’ ಎಂಬ ಒಂದು ಸಾಮಾಜಿಕ ಸಂಸ್ಥೆಯನ್ನು ಹುಟ್ಟು ಹಾಕಿದರು.
ಬೇಡಿಯಾ ಜನಾಂಗದ ಕೆಲವು ಮಕ್ಕಳು ಶಾಲೆಗೆ ಹೋಗುತ್ತಿದ್ದರೂ ಅವರ ಮನೆಯ ಹೆಂಗಸರ ‘ಉದ್ಯೋಗ’ದ ಬಗ್ಗೆ ತಿಳಿದ ಇತರ ಸಮುದಾಯದ ಮಕ್ಕಳು ಮಾಡುವ ಅವಮಾನದಿಂದಾಗಿ ಅರ್ಧದಲ್ಲೇ ಶಾಲೆ ಬಿಡುತ್ತಿದ್ದರು. ಆ ಅವಮಾನದಿಂದ ತಪ್ಪಿಸಿಕೊಳ್ಳಲು ಕೆಲವು ಬೇಡಿಯಾ ಮಕ್ಕಳು ತಮ್ಮ ಜಾತಿಯ ಹೆಸರು ಹೇಳದೆ ಬೇರೆ ಜಾತಿಯ ಹೆಸರು ಹೇಳುತ್ತಿದ್ದರು. ಇದನ್ನೆಲ್ಲ ತಿಳಿದುಕೊಂಡ ವೀರೇಂದ್ರ ಮಿಶ್ರಾ, ಬೇಡಿಯಾ ಜನಾಂಗದ ಹಲವು ಮಕ್ಕಳನ್ನು, ಅವರ ಹೆತ್ತವರನ್ನು ಒಪ್ಪಿಸಿ, ಬೇರೆ ಮಕ್ಕಳಿಂದ ಅವಮಾನಕ್ಕೀಡಾಗುವುದನ್ನು ತಪ್ಪಿಸಲು ಅವರ ಹುಟ್ಟೂರಿನಿಂದ ದೂರವಿರುವ ಭೂಪಾಲಕ್ಕೆ ತಂದು ಅಲ್ಲಿನ ಸರ್ಕಾರಿ ಶಾಲೆಗೆ ಸೇರಿಸಿದರು. ಆದರೆ, ಅಲ್ಲಿ ಬೇರೊಂದು ಸಮಸ್ಯೆ ಎದುರಾಯಿತು. ಹೆಚ್ಚಿನ ಬೇಡಿಯಾ ಮಕ್ಕಳಿಗೆ ತಮ್ಮ ಅಪ್ಪನ ಹೆಸರು ಗೊತ್ತಿರುವುದು ಬಿಡಿ, ಅವರಿಗೆ ತಮ್ಮ ಅಪ್ಪ ಯಾರೆಂಬುದೇ ಗೊತ್ತಿರುವುದಿಲ್ಲ. ವೀರೇಂದ್ರ ಮಿಶ್ರಾ ಶಾಲಾ ಆಡಳಿತ ಮಂಡಳಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು, ಆ ಮಕ್ಕಳಿಗೆ ತಂದೆಯ ಹೆಸರಿನ ಬದಲು ಅವರುಗಳ ತಾಯಂದಿರ ಹೆಸರು ಉಪಯೋಗಿಸಿ ಪ್ರವೇಶ ಕೊಡಿಸಿದರು. ಆ ಮಕ್ಕಳ ದಿನನಿತ್ಯದ ಶಿಕ್ಷಣದ ಮೇಲ್ವಿಚಾರಣೆಯಿಂದ ಹಿಡಿದು, ಶಿಕ್ಷಣ ಮುಗಿಸಿ ಉದ್ಯೋಗ ಪಡೆಯುವವರೆಗೂ ಅವರ ಜವಾಬ್ದಾರಿ ಹೊತ್ತರು. ಅದರ ಪರಿಣಾಮವಾಗಿ ಬೇಡಿಯಾ ಜನಾಂಗ ನಿಧಾನವಾಗಿ ಬದಲಾವಣೆಗೆ ತೆರೆದುಕೊಂಡಿತು.
ಸಂವೇದನಾ ಸಂಸ್ಥೆ ಸತತ ಪರಿಶ್ರಮದ ಮೂಲಕ ಆರು ಜಿಲ್ಲೆಗಳ 60 ಹಳ್ಳಿಗಳ ಸುಮಾರು 5000 ಬೇಡಿಯಾ ಮಕ್ಕಳನ್ನು ಶಾಲೆಗೆ ಕಳಿಸುವಲ್ಲಿ ಯಶಸ್ವಿಯಾಗಿದೆ. ಹೊರ ಜಗತ್ತಿನ ಸಂಪರ್ಕಕ್ಕೆ ಬಂದ ಈ ಮಕ್ಕಳಲ್ಲಿ ಕೆಲವರು ಮುಂದೆ ವೀರೇಂದ್ರ ಮಿಶ್ರಾರಂತೆ ತಾವೂ ಪೊಲೀಸ್ ಅಧಿಕಾರಿಗಳಾಗಲು ಬಯಸಿದರೆ, ಉಳಿದವರು ವೈದ್ಯರು, ಎಂಜಿನಿಯರ್, ಐಎಎಸ್ ಅಧಿಕಾರಿಗಳು, ಲಾಯರ್ಗಳಾಗುವ ಗುರಿ ಹಾಕಿಕೊಂಡಿದ್ದಾರೆ. ಉದಾಹರಣೆಗೆ, ರಾಗಿಣಿ ಎಂಬ ಹುಡುಗಿ ಹಳ್ಳಿಯಿಂದ ಹೊರ ಹೋಗಿ ಕಾಲೇಜು ಶಿಕ್ಷಣ ಪಡೆಯುತ್ತಿರುವ ಪ್ರಪ್ರಥಮ ಬೇಡಿಯಾ ಹೆಣ್ಣು. ಅವಳು ಈಗ ಮೂರನೇ ವರ್ಷದ ಎಂಜಿನಿಯರಿಂಗ್ ಕೋರ್ಸ್ ಮಾಡುತ್ತಿದ್ದಾಳೆ ಮತ್ತು ಮುಂದೆ ತಾನೊಬ್ಬ ಐಎಎಸ್ ಅಧಿಕಾರಿಯಾಗಲು ಸಿದ್ಧತೆ ನಡೆಸಿದ್ದಾಳೆ. ಕಾಂಚನ ಎಂಬ ಇನ್ನೊಬ್ಬ ಬೇಡಿಯಾ ಹುಡುಗಿ ಭೋಪಾಲ ವಿಶ್ವ ವಿದ್ಯಾನಿಲಯದಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದಾಳೆ. ಹಳ್ಳಿಯಲ್ಲಿ ವೇಶ್ಯ ವಾಟಿಕೆ ನಡೆಸುತ್ತಿರುವ ಅವಳ ತಾಯಿ ತನ್ನ ಇಬ್ಬರು ಹೆಣ್ಣು ಮಕ್ಕಳು ತನ್ನಂತಾಗದೆ ಗೌರವಯುತ ಬದುಕು ನಡೆಸಲು ಅವರ ಶಿಕ್ಷಣಕ್ಕೆ ನೆರವಾಗುತ್ತಿದ್ದಾಳೆ. ಕಾಂಚನ ಮುಂದೆ ತಾನೊಬ್ಬಳು ಲಾಯರ್ ಆಗಿ ತನ್ನ ಜನಾಂಗದ ಏಳಿಗೆಗೆ ಶ್ರಮಿಸುತ್ತೇನೆ ಎಂದು ಹೇಳುತ್ತಾಳೆ. ಮುಂದಿನ ವರ್ಷ ಹಳ್ಳಿಯಲ್ಲಿರುವ ತನ್ನ ತಂಗಿಯನ್ನೂ ವಿದ್ಯಾಭ್ಯಾಸಕ್ಕಾಗಿ ಭೂಪಾಲಕ್ಕೆ ಕರೆತರುವ ಆಲೋಚನೆಯಲ್ಲಿದ್ದಾಳೆ.
ಬೇಡಿಯಾ ಜನಾಂಗದಲ್ಲಿ ಶಿಕ್ಷಣದ ಪ್ರಾಮುಖ್ಯತೆಯ ಬಗ್ಗೆ ಅರಿವನ್ನು ಹುಟ್ಟು ಹಾಕಿದ ನಂತರ ವೀರೇಂದ್ರ ಮಿಶ್ರಾ ಅವರಿಗೆ ಪರ್ಯಾಯ ಉದ್ಯೋಗ ಸೃಷ್ಟಿಸಲು ಯೋಜನೆಗಳನ್ನೂ ರೂಪಿಸುತ್ತಿದ್ದಾರೆ. ಬೇಡಿಯಾ ಕುಟುಂಬಗಳಿಗೆ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಗಳನ್ನು ನೀಡಿ ಅವುಗಳ ಪ್ರಯೋಜನಗಳನ್ನು ಪಡೆಯಲು ನೆರವಾಗುತ್ತಿದ್ದಾರೆ. ‘ಅವಕಾಶಗಳನ್ನು ಕಲ್ಪಿಸಿಕೊಟ್ಟಾಗ ಇಂತಹ ಜನವರ್ಗಗಳಲ್ಲಿ ಆಶಾವಾದ ಮೂಡುತ್ತದೆ. ಈ ಆಶಾವಾದವೇ ವ್ಯಕ್ತಿ ತನ್ನ ಮಿತಿಯನ್ನು ಮೀರಿ ಬೆಳೆಯಲು ಬೆಂಬಲಿಸುತ್ತದೆ’ ಎಂದು ಹೇಳುವ ವೀರೇಂದ್ರ ಮಿಶ್ರಾ, ಬೇಡಿಯಾ ಜನಾಂಗದ ಹೊಸತಲೆಮಾರುಗಳ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿ ಕೊಡುತ್ತಿದ್ದಾರೆ. ಶಿಕ್ಷಣ ಮಾತ್ರವಲ್ಲದೆ, ಕ್ರೌಡ್ ಫಂಡಿಂಗ್ ಮೂಲಕ ಮತ್ತು ಕ್ರೈ ಎಂಬ ಸಮಾಜ ಸೇವಾ ಸಂಸ್ಥೆಯ ಸಹಕಾರದಿಂದ ಆರ್ಥಿಕವಾಗಿಯೂ ಅವರಿಗೆ ನೆರವಾಗುತ್ತಿದ್ದಾರೆ ಮತ್ತು, ಬೇಡಿಯಾ ಜನಾಂಗದ ಮಹಿಳೆಯರ ಆರೋಗ್ಯ ತಪಾಸಣೆಗಾಗಿ ಆಗಾಗ್ಗೆ ವೈದ್ಯಕೀಯ ಶಿಬಿರಗಳನ್ನೂ ನಡೆಸುತ್ತಾರೆ.